ಬಡಗನ್ನೂರು: ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡಡ್ಕ – ಬಳ್ಳೇರಿ ಸಂಪರ್ಕ ರಸ್ತೆಯ ಬಳಿ ಇರುವ ಖಾಸಗಿ ಜಾಗದಿಂದ ತೊಂದರೆ ಉಂಟಾಗಿ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿ ಉಂಟಾಗಿ ಈ ಭಾಗದ ಜನರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸುಮಾರು 40 ವರ್ಷಗಳ ಹಿಂದಿನ ರಸ್ತೆ ಇದಾಗಿದ್ದು ಸುಮಾರು 25-30 ಮನೆಗಳಿಗೆ ಸಂಪರ್ಕ ಹೊಂದಿದೆ. ಪ್ರಸ್ತುತ ಈ ರಸ್ತೆ ಅಕ್ಕಪಕ್ಕದ ಜಾಗವನ್ನು ವ್ಯಕ್ತಿಯೊಬ್ಬರು ಮಾರಾಟ ಮಾಡಿದ್ದಾರೆ. ಜಮೀನು ಖರೀದಿಸಿದ ವ್ಯಕ್ತಿಯೊಬ್ಬರು ರಸ್ತೆ ಮಾರ್ಜಿನ್‌ನಲ್ಲಿ ಕಾಂಪೌಂಡ್ ರಚನೆ ಮಾಡಿದ ಪರಿಣಾಮ ಮೇಲ್ಭಾಗದಿಂದ ಹರಿದು ಬರುವ ಮಳೆಯ ನೀರು ಸರಾಗವಾಗಿ ಚರಂಡಿಯಲ್ಲಿ ಹರಿದು ಹೋಗಲು ಸಾಧ್ಯವಿಲ್ಲದೆ ರಸ್ತೆಯಲ್ಲಿ ತುಂಬಿ ವಾಹನ ಚಲಾಯಿಸಲು ಪ್ರಯಾಸ ಪಡುವಂತಾಗಿದೆ.
ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ
ರಸ್ತೆ ನೀರು ತುಂಬಿ ಜನರಿಗೆ ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾದ ಈ ಸಂದರ್ಭದಲ್ಲಿ ಆರ್ಯಾಪು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ, ಪುತ್ತೂರು ಎ.ಸಿ. ಅವರಿಗೆ ಮನವಿ ಸಲ್ಲಿಸಿ ಈ ಭಾಗದ ಜನರ ಸಮಸ್ಯೆ ಬಗ್ಗೆ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದರೂ ಮನವಿಗೆ ಯಾವುದೇ ಅಧಿಕಾರಿ ಅಥವಾ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಕ್ಕಿಲ್ಲ ಎಂಬ ಕೊರಗು ಈ ಪರಿಸರದ ಜನರದ್ದಾಗಿದೆ.
ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.