Advertisement

ಮಂಜುನಾಥ ಬಡಾವಣೆಯಲ್ಲಿ ಹಂದಿ, ಸೊಳ್ಳೆಗಳ ಕಾಟ; ದುರ್ವಾಸನೆಗೆ ನಿವಾಸಿಗಳು ಹೈರಾಣ

04:57 PM Jan 10, 2022 | Team Udayavani |

ಹುಣಸೂರು: ನಗರದ ಪ್ರತಿಷ್ಠಿತ ಬಡಾವಣೆ ಎನಿಸಿರುವ ಮಂಜುನಾಥ ಬಡಾವಣೆಯಲ್ಲಿನ ಅವೈಜ್ಞಾನಿಕ ಒಳಚರಂಡಿ ಪೈಪ್‌ಲೈನ್‌ ಜನತೆಯನ್ನು ಹೈರಾಣಾಗಿಸಿದೆ. ಮನೆಗಳ ಶೌಚಾಲಯದ ನೀರು ಹಿಮ್ಮುಖವಾಗಿ ಹರಿಯುತ್ತಿದ್ದು, ಖಾಲಿ ನಿವೇಶನಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ನೀರಿನಲ್ಲಿ ಹಂದಿಗಳು ಆವಾಸ ಸ್ಥಾನ ಮಾಡಿಕೊಂಡಿದ್ದರೆ, ಮತ್ತೂಂದೆಡೆ
ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಟಿದೆ.
ಇನ್ನು ತ್ಯಾಜ್ಯ ನೀರಿನ ದುರ್ವಾಸನೆಯಿಂದ ಇಡೀ ಬಡಾವಣೆ ನಿವಾಸಿಗಳು ಮನೆಯಿಂದ ಹೊರಬಾರದಂತಾಗಿದ್ದು, ನಿವಾಸಿಗಳ ಅನಾರೋಗ್ಯಕ್ಕೆ ನಗರಸಭೆ ಅಧಿಕಾರಿಗಳೇ ಅಂಕಿತ ಹಾಕಿದಂತಾಗಿದೆ.

Advertisement

ಪರಿಹಾರವಿಲ್ಲ: ನಗರಸಭೆಯ ವಾರ್ಡ್‌ ನಂ.28ರ ವ್ಯಾಪ್ತಿಯ ಆಂಜನೇಯ ದೇವಾಲಯದ ಎದುರಿನ ವಾರ್ಡ್‌ನಲ್ಲಿನ ಕೃಷ್ಣಮೂರ್ತಿ, ಕೃಷ್ಣ, ವಿಜಯ್‌, ಗುರುರಾಜ್‌, ಸುರೇಶ್‌, ವಿನೋದ ಅವರ ಮನೆ ಸೇರಿದಂತೆ ಅಕ್ಕಪಕ್ಕದಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ. ತ್ಯಾಜ್ಯ ನೀರು ಸಂಗ್ರಹಣೆಯಿಂದ ನಿತ್ಯ ನರಕ ಅನುಭವಿಸುತ್ತಿದ್ದರೂ ನಗರಸಭೆ ಎಂಜಿನಿಯರ್‌ ಗಳು ಸಬೂಬು ಹೇಳುತ್ತಿದ್ದಾರೆಯೇ ವಿನಹಃ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.

ಅವ್ಯವಸ್ಥೆ ಏಕೆ?: ಬಡಾವಣೆ ರಚನೆಯಾದ ಬಹಳ ವರ್ಷಗಳ ನಂತರ ಒಳಚರಂಡಿ-ರಸ್ತೆ ವ್ಯವಸ್ಥೆ ನಿರ್ಮಾಣವಾಗಿದ್ದರಿಂದ ಬಡಾವಣೆ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದರು. ಕಳೆದ ವರ್ಷ ಛಾಯಾದೇವಿ ವಿದ್ಯಾಸಂಸ್ಥೆಗೆ ತೆರಳುವ ರಸ್ತೆಯನ್ನು ಉನ್ನತೀಕರಿಸಿ, ಕಾಂಕ್ರಿಟ್‌ ರಸ್ತೆ ನಿರ್ಮಿಸಿದ್ದರು. ಆ ವೇಳೆ ರಸ್ತೆಗೆ ಅವೈಜ್ಞಾನಿಕವಾಗಿ ಒಳಚರಂಡಿ ಚೇಂಬರ್‌ ಅಳವಡಿಸಿರುವ ಪರಿಣಾಮ, ಕೆಲ ಬೀದಿಗಳಲ್ಲಿ ಮನೆಗಳ ತ್ಯಾಜ್ಯ ನೀರು ಚೇಂಬರ್‌ನಿಂದ ಉಕ್ಕಿ ಹರಿಯುತ್ತಿದೆ. ಇನ್ನು ಕೃಷ್ಣಮೂರ್ತಿ ಎಂಬವರ ಮನೆ ಬಳಿ ಇದ್ದ ಚೇಂಬರ್‌ ಪೈಪ್‌ ಅನ್ನು ಒಡೆದಿರುವುದು, ಹಾಗೂ ಮಳೆಗಾಲದಲ್ಲಿ ಚೇಂಬರ್‌ ಸಂಪರ್ಕದ ಪೈಪ್‌ನಲ್ಲಿ ಮಣ್ಣು ಸಂಗ್ರಹವಾದ ಪರಿಣಾಮ ಗಲೀಜು ನೀರು ಒಳಚರಂಡಿಯಲ್ಲಿ ಹರಿಯದೆ ಎಲ್ಲೆಂದರಲ್ಲಿ ಖಾಲಿ ನಿವೇಶನದ ಹಳ್ಳಗಳಲ್ಲಿ ಸಂಗ್ರಹ ಗೊಳ್ಳುತ್ತಿದೆ. ಇದರಿಂದಾಗಿ ದುರ್ವಾಸನೆಯನ್ನು ಸಹಿಸಿಕೊಂಡೇ ನಿವಾಸಿಗಳು ಕಾಲ ಕಳೆಯ ಬೇಕಾಗಿದೆ.

ಇದನ್ನೂ ಓದಿ : ರವೀಂದ್ರ ಕಲಾಕ್ಷೇತ್ರ ಕಾಯ್ದಿರಿಸುವಿಕೆಗೆ ಇನ್ನು ಮುಂದೆ ಆನ್‌ಲೈನ್ ವ್ಯವಸ್ಥೆ ಜಾರಿ

ಹಂದಿ-ಸೊಳ್ಳೆ ಕಾಟ: ತಿಂಗಳಿಂದ ಹಳ್ಳದಲ್ಲಿ ಮನೆಗಳ ಶೌಚಾಲಯ ಸೇರಿದಂತೆ ಇತರೆ ತ್ಯಾಜ್ಯ ನೀರು ಸಂಗ್ರಹವಾಗುತ್ತಿದ್ದು ಪುಟ್ಟ ಕೆರೆಯಂತಾಗಿದೆ. ಇದು ಹಂದಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದ್ದು, ಆಗಾಗ್ಗೆ ಇಲ್ಲಿನ ದುರ್ನಾತ ಬೀರುವ ನೀರಿಗಿಳಿಯುತ್ತಿವೆ. ಮತ್ತೂಂದೆಡೆ ಸಂಜೆಯಾ ಆಯಿತೆಂದರೆ ಸೊಳ್ಳೆಗಳ ಹಿನ್ನೆಲೆ ನಿವಾಸಿಗಳು ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದ್ದು, ರೋಗ ಹರಡುವ ಭೀತಿಯಿದೆ. ಈ ಬಗ್ಗೆ ನಿವಾಸಿಗಳು ನಗರಸಭೆ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಶೀಘ್ರ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆ ಮುಂದೆ ಗುರುವಾರ ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳು ಎಚ್ಚರಿಸಿದ್ದಾರೆ.

Advertisement

ಬಡಾವಣೆಯಲ್ಲಿನ ಸಮಸ್ಯೆ ಬಗ್ಗೆ ಅರಿವಿದೆ. ಇದು ರಸ್ತೆ , ಹೊಸ ಪೈಪ್‌ ಲೈನ್‌ ಅಳವಡಿಕೆಯಿಂದ ಸಮಸ್ಯೆ ಉಂಟಾ ಗಿದೆ. ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಕ್ರಮವಹಿಸುವೆ.
– ಸೌರಭ ಸಿದ್ದರಾಜು, ನಗರಸಭೆ ಅಧ್ಯಕ್ಷೆ

ನಗರದ ಮಂಜುನಾಥ ಬಡಾವಣೆಯು ಸಂಪೂರ್ಣವಾಗಿ ಅಭಿವೃದ್ಧಿ ಗೊಂಡಿಲ್ಲ. ಒಂದೆಡೆ ಮಳೆಗಾಲದಲ್ಲಿ ಮನೆಗಳತ್ತ ನುಗ್ಗುವ ವಳ್ಳಮ್ಮನಕಟ್ಟೆ , ಚರಂಡಿ ನೀರು, ಇದೀಗ ತಿಂಗಳಿನಿಂದ ಒಳಚರಂಡಿ ನೀರು ಸಂಗ್ರಹಣೆಯಿಂದ ತತ್ತರಿಸಿದ್ದೇವೆ. ಎಂಜಿನಿಯರ್‌ಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
– ಕೃಷ್ಣಮೂರ್ತಿ, ಶಿಕ್ಷಕರು

ಈ ಸಮಸ್ಯೆ ನನ್ನ ಅರಿವಿಗೆ ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವೆ. ಅಗತ್ಯ ಕಾಮಗಾರಿ ನಡೆಸಿ ಸಮಸ್ಯೆ ಬಗೆಹರಿಸಲು ಎಂಜಿನಿಯರ್‌ಗಳಿಗೆ ಸೂಚಿಸುತ್ತೇನೆ.
– ರಮೇಶ್‌, ಪೌರಾಯುಕ್ತರು

– ಸಂಪತ್‌ ಕುಮಾರ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next