ದೇವದುರ್ಗ: ಪಟ್ಟಣದಲ್ಲಿ ನಡೆದಿರುವ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಕುಂಟುತ್ತ, ತೆವಳುತ್ತ ಸಾಗಿದ್ದರಿಂದ ಪ್ರಯಾಣಿಕರು, ನೀರು, ನೆರಳಿಲ್ಲದೇ ಪರದಾಡುವಂತಾಗಿದೆ. 174.90 ಲಕ್ಷ ವೆಚ್ಚದಲ್ಲಿ ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಟೆಂಡರ್ ನಿಯಮಾವಳಿ
ಯಂತೆ 2018ರ ಮಾರ್ಚ್‌ಗೆ ಕಾಮಗಾರಿ ಮುಗಿಯಬೇಕಿತ್ತು. ಅವಧಿ ಮುಗಿದು ವರ್ಷವಾದರೂ ಇನ್ನೂ ಕಾಮಗಾರಿ ಮುಗಿದಿಲ್ಲ.
ಟಿನ್ ಶೆಡ್: ಪ್ರಯಾಣಿಕರ ನೆರಳಿಗಾಗಿ ತಾತ್ಕಾಲಿಕವಾಗಿ ಸಣ್ಣ ಪ್ರಮಾಣದ ಟಿನ್ ಶೆಡ್ ಹಾಕಿ, ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇದು ನೂರಾರು ಪ್ರಯಾಣಿಕರಿಗೆ ಸಾಲುತ್ತಿಲ್ಲ. ಹೀಗಾಗಿ ವೃದ್ಧರು, ಮಕ್ಕಳು, ಮಹಿಳೆಯರು ಸೇರಿ ಬಿಸಿಲಲ್ಲಿ ಬಸ್‌ಗೆ ಕಾಯುವುದು ತಪ್ಪುತ್ತಿಲ್ಲ. ಇನ್ನು ಟಿನ್ ಶೆಡ್ ನಲ್ಲಿ ಬಸ್‌ಗಾಗಿ ಕಾಯುತ್ತ ನಿಂತರೆ ಝಳಕ್ಕೆ ಪ್ರಯಾಣಿಕರು ತತ್ತರಿಸಿ ಹೊರಗೆ ಬಂದು ಗಿಡ, ಮರ ಇಲ್ಲವೇ ಅಂಗಡಿ ಮುಂಗಟ್ಟುಗಳ ಆಸರೆ ಪಡೆಯುವಂತಾಗಿದೆ.
ನೀರು ಇಲ್ಲ: ಇನ್ನು ನಿಲ್ದಾಣದಲ್ಲಿ ಕುಡಿಯುವ ನೀರು, ಪ್ರಯಾಣಿಕರಿಗೆ ಸಮರ್ಪಕ ಆಸನ ವ್ಯವಸ್ಥೆ ಇಲ್ಲ. ನೀರು ಬೇಕೆಂದರೆ ಹೋಟೆಲ್, ಇಲ್ಲವೇ ತಂಪು ಪಾನೀಯ ಅಂಗಡಿಗಳಿಗೆ ಹೋಗಬೇಕು. ಇಲ್ಲವೇ ಬಾಟಲಿ ನೀರು ಖರೀದಿಸಬೇಕು. ಆಸನ ಇಲ್ಲದ್ದರಿಂದ ಅಂಗಡಿ ಮುಂಗಟ್ಟುಗಳ ಆಸರೆ ಪಡೆಯುವಂತಾಗಿದೆ.
ಅಡ್ಡಾದಿಡ್ಡಿ ಬಸ್ ನಿಲುಗಡೆ: ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲ್ಲಿಸುವುದರಿಂದ ಪ್ರಯಾಣಿಕರು ಬಸ್‌ಗಾಗಿ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುವಂತಾಗಿದೆ. ಸ್ಥಳೀಯ ಜನಪತ್ರಿನಿಧಿಗಳು ಮತ್ತು ಗುತ್ತಿಗೆದಾರರ ಮಧ್ಯ ಹೊಂದಾಣಿಕೆ ಕೊರತೆಯೇ ಕಾಮಗಾರಿ ವಿಳಂಬಕ್ಕೆ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿಂದೆ ಸಾರಿಗೆ ಸಚಿವರಾಗಿದ್ದ ರೇವಣ್ಣ ಅವರು ಇಲ್ಲಿಗೆ ಭೇಟಿ ನೀಡಿ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರು, ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು 2019ರ ಒಳಗೆ ಕಾಮಗಾರಿ ಮುಗಿಸಲು ಖಡಕ್ ಎಚ್ಚರಿಕೆ ನೀಡಿದ್ದರು.
ಆದರೆ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿಗಾವಹಿಸುತ್ತಿಲ್ಲ. ಕಾಮಗಾರಿ ಮುಗಿಯಲು ಇನ್ನೂ ಆರೇಳು ತಿಂಗಳು ಬೇಕಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಾರೆ ಬಸ್ ನಿಲ್ದಾಣ ಕಾಮಗಾರಿ ಮುಗಿಯದ್ದರಿಂದ ಪ್ರಯಾಣಿಕರ ಗೋಳಿಗೆ ಕೊನೆ ಇಲ್ಲದಂತಾಗಿದೆ.
ಇನ್ನಾದರೂ ಅಧಿಕಾರಿಗಳು ಗುತ್ತಿಗೆದಾರರು ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಮುಂದಾಗಬೇಕು. ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಕರವೇ ನಗರ ಘಟಕ ಅಧ್ಯಕ್ಷ ಉಸ್ಮಾನ್ ಗೌರಂಪೇಟೆ ಆಗ್ರಹಿಸಿದ್ದಾರೆ.
ಬಸ್ ನಿಲ್ದಾಣ ಕಾಮಗಾರಿ ಆರಂಭದಲ್ಲಿ ಸ್ವಲ್ಪ ವಿಳಂಬವಾಗಿದೆ. ಈಗಾಗಲೇ ಚುರುಕಿನಿಂದ ಕೆಲಸ ನಡೆಯುತ್ತಿದೆ. ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುವುದು.
ಹಸನ್ ಅಲಿ, ಸಾರಿಗೆ ವ್ಯವಸ್ಥಾಪಕರು