ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ (ಆಗಸ್ಟ್ 05) ಮತ್ತೆ ಪ್ರಮುಖ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಏರಿಕೆ ಮಾಡಿರುವುದಾಗಿ ಘೋಷಿಸಿದೆ. ಇದರೊಂದಿಗೆ ಬಡ್ಡಿದರ ಶೇ.5.40ಕ್ಕೆ ಏರಿಕೆಯಾದಂತಾಗಿದೆ.
ಇದನ್ನೂ ಓದಿ:ಕಾಮನ್ವೆಲ್ತ್ 22: ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಮುರಳಿ ಶ್ರೀಶಂಕರ್
ದೇಶದಲ್ಲಿನ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸತತ ಮೂರನೇ ಬಾರಿ ಬಡ್ಡಿದರವನ್ನು ಏರಿಕೆ ಮಾಡಿದ್ದು, ಇದರ ಪರಿಣಾಮ ಗೃಹ, ವಾಹನ ಸಾಲಗಾರರಿಗೆ ಮತ್ತಷ್ಟು ಹೊರೆ ಬಿದ್ದಂತಾಗಿದೆ.
ಜೂನ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆಯಾಗಿತ್ತು. ಇದು ಆರ್ ಬಿಐನ ನಿರೀಕ್ಷಿತ ಶೇ.2ರಿಂದ 6ರ ಮಟ್ಟಕ್ಕಿಂತ ಹೆಚ್ಚಳವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಮೂಲ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ.
ಕಳೆದ ಮೇ ತಿಂಗಳಿನಲ್ಲಿ ಆರ್ ಬಿಐ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ಸ್ ಗಳಷ್ಟು ಏರಿಕೆ ಮಾಡಿದ್ದು, ಜೂನ್ ತಿಂಗಳಿನಲ್ಲಿ 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಿಸಿತ್ತು. ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಸ್ಥಿರತೆಗಾಗಿ ರೆಪೋ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.