ಸೂರಿ ಕೈಯಲ್ಲಿ ಒಂದು ಕಥೆ ಸಿಕ್ಕರೆ ಅದನ್ನು ತುಂಡು ತುಂಡಾಗಿ ಕತ್ತರಿಸಿ, ನಾಲ್ಕು ದಿಕ್ಕುಗಳಿಗೆ ಹಂಚುತ್ತಾರೆ. ಆ ನಾಲ್ಕು ದಿಕ್ಕುಗಳು ನಾಲ್ಕು “ಬಣ್ಣ’ಗಳಿಂದ ಕೂಡಿರುತ್ತದೆ. ಆ ಬಣ್ಣಗಳನ್ನಿಟ್ಟುಕೊಂಡು ಚಿತ್ರಕಥೆ, ಸಂಭಾಷಣೆ, ದೃಶ್ಯ ಜೋಡಣೆ ಎಲ್ಲವನ್ನು ಮಾಡುತ್ತಾರೆ. ಅಂತಿಮವಾಗಿ ಪ್ರೇಕ್ಷಕರಿಗೊಂದು ಕೆಲಸ ಕೊಡುತ್ತಾರೆ. ಮೂಲಕಥೆಯನ್ನು ಜೋಡಿಸಿ, ಸಿನಿಮಾವನ್ನು ಕಣ್ತುಂಬಿಕೊಳ್ಳುವುದೇ ಆ ಕೆಲಸ. ಈ ಹಿಂದಿನ “ಜಾಕಿ’, “ಟಗರು’, “ಕಡ್ಡಿಪುಡಿ’ ಸಿನಿಮಾಗಳಲ್ಲಿ ಈ ತರಹದ ಪ್ರಯೋಗ ಮಾಡಿದ್ದ ಸೂರಿ ಈಗ “ಬ್ಯಾಡ್ ಮ್ಯಾನರ್ಸ್’ನಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಇಲ್ಲೂ ನಿಮಗೆ “ಸುಕ್ಕಾ ಸೂರಿ’ ಜೋರಾಗಿಯೇ ಕಾಣಿಸುತ್ತಾರೆ. ಅವರ ಇಷ್ಟದ ಲೊಕೇಶನ್‌ಗಳು, ವಿಚಿತ್ರ ಹೆಸರಿನ ಪಾತ್ರಗಳು, ಗಮನ ಸೆಳೆಯುವ ಸಂಭಾಷಣೆ, ಸಣ್ಣದಾದ ಫ್ಯಾಮಿಲಿ ಡ್ರಾಮಾ.. ಎಲ್ಲವನ್ನು ಸೇರಿಸಿ “ಬ್ಯಾಡ್ ಮ್ಯಾನರ್ಸ್’ ಮಾಡಿದ್ದಾರೆ.
ಸೂರಿ ಪ್ರತಿ ಬಾರಿಯೂ ಒಂದು ಹೊಸ ಕಥೆಯನ್ನು, ಹೊಸ ಜಾಗಗಳೊಂದಿಗೆ ಕಟ್ಟಿಕೊಡುತ್ತಾರೆ. ಈ ಬಾರಿ ಗನ್ ಮಾಫಿಯಾದ ಕಥೆಯನ್ನು ಸೂರಿ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ. ಗನ್ ಮಾಫಿಯಾದ ಹಿಂದಿನ ಜಾಲ, ಅದರ ಆರಂಭ, ಒಂದು ಊರಿಗೆ ಊರೇ ಬದಲಾಗುವ ರೀತಿ ಸೇರಿದಂತೆ ಹಲವು ಅಂಶಗಳನ್ನು ಈ ಕಥೆಯಲ್ಲಿ ಹೇಳಿದ್ದಾರೆ. ಮೊದಲೇ ಹೇಳಿದಂತೆ ಕಥೆ ನೇರವಾಗಿ ಸಾಗುವುದಿಲ್ಲ. ಒಂದು ದೃಶ್ಯದ ಕೊಂಡಿ ಪ್ರೇಕ್ಷಕನಿಗೆ ಇನ್ನೆಲ್ಲೋ ಸಿಗುತ್ತದೆ. ಕೆಲವೊಮ್ಮೆ ಕಥೆ ಒಂದೇ ಜಾಗದಲ್ಲಿ ಸುತ್ತಿದಂತೆ ಭಾಸವಾಗುತ್ತದೆ. ಆದರೆ, ಅದನ್ನು ಮರೆಸುವಂತಹ ದೃಶ್ಯಗಳು ಸಿನಿಮಾದ ಕುತೂಹಲವನ್ನು ಮುಂದುವರೆಸಿಕೊಂಡು ಹೋಗುತ್ತವೆ. ಮೇಲ್ನೋಟಕ್ಕೆ ಪಕ್ಕಾ ಮಾಸ್ ಸಿನಿಮಾವಾಗಿ ಸಾಗುವ “ಬ್ಯಾಡ್ ಮ್ಯಾನರ್ಸ್’ನಲ್ಲಿ ಅಲ್ಲಲ್ಲಿ ಒಂದಷ್ಟು ಫಿಲಾಸಫಿಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಒಂದೇ ಮಾತಲ್ಲಿ ಹೇಳುವುದಾದರೆ “ಗನ್’ ಇಡೀ ಸಿನಿಮಾದ ಹೈಲೈಟ್. ಇಡೀ ಕಥೆ ಅದರ ಹಿಂದೆಯೇ ಸುತ್ತುತ್ತದೆ.
ನಾಯಕ ಅಭಿಷೇಕ್ ಅವರಿಗೆ ಈ ಪಾತ್ರ ಚೆನ್ನಾಗಿ ಹೊಂದಿಕೊಂಡಿದೆ. ರಫ್ ಅಂಡ್ ಟಫ್ ಆಗಿ, ಯಾವುದಕ್ಕೂ ಜಗ್ಗದೇ ಮುಂದೆ ನುಗ್ಗುವ ಪಾತ್ರದಲ್ಲಿ ಅಭಿಷೇಕ್ ಮಿಂಚಿದ್ದಾರೆ. ಪಾತ್ರ ಹಾಗೂ ಅಭಿ ಅವರ ಬಾಡಿ ಲಾಂಗ್ವೇಜ್ ಎಲ್ಲವೂ ಮಾಸ್ ಅಭಿಮಾನಿಗಳಿಗೆ ಖುಷಿ ಕೊಡುತ್ತದೆ. ಉಳಿದಂತೆ ಚಿತ್ರದಲ್ಲಿ ರಚಿತಾ ರಾಮ್ ಬಂದು ಹೋಗುತ್ತಾರೆ. ಇನ್ನು, ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಬಂದು ಹೋದರೂ ಅವ್ಯಾವುವು ಹೆಚ್ಚೇನು ನೆನಪಿನಲ್ಲಿ
ಉಳಿಯುವುದಿಲ್ಲ. ಸಿನಿಮಾದ ತೂಕ ಹೆಚ್ಚಿಸುವಲ್ಲಿ ಚರಣ್ ರಾಜ್ ಹಿನ್ನೆಲೆ ಸಂಗೀತ ಹಾಗೂ ಆಮ್ರಿ ಹಾಗೂ ಮಾಸ್ತಿ ಅವರ ಸಂಭಾಷಣೆ ಪ್ರಮುಖ ಪಾತ್ರ ವಹಿಸಿದೆ. ಒಂದು ಮಾಸ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ “ಬ್ಯಾಡ್ ಮ್ಯಾನರ್ಸ್’ ಇಷ್ಟವಾಗಬಹುದು.
– ರವಿಪ್ರಕಾಶ್ ರೈ