Advertisement

ಹಿಂದುಳಿದ ಜಿಲ್ಲೆಗಳೇ ಲಸಿಕೆಯಲ್ಲಿ ಮುಂದು! ಉತ್ತರ ಕರ್ನಾಟಕದಲ್ಲಿ ಗುರಿ ಸಾಧನೆ ಹೆಚ್ಚು

12:50 AM Jun 08, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ “ಹಿಂದುಳಿದ ಪ್ರದೇಶಗಳು’ ಎಂದು ಗುರುತಿಸಲ್ಪಡುವ ಭಾಗಗಳೇ ಕೊರೊನಾ ಲಸಿಕೆ ಅಭಿಯಾನದಲ್ಲಿ ಮುಂಚೂಣಿಯಲ್ಲಿವೆ. ಉತ್ತರ ಕರ್ನಾಟಕ ಭಾಗದ ಬಹುತೇಕ ಎಲ್ಲ ಜಿಲ್ಲೆಗಳು ಜನಸಂಖ್ಯಾವಾರು ಲಸಿಕೆ ಹಂಚಿಕೆ ಗುರಿ ಸಾಧನೆಯಲ್ಲಿ ಮುಂದಿದ್ದರೆ, ದಕ್ಷಿಣ ಕರ್ನಾಟಕದ ಜಿಲ್ಲೆಗಳು ಹಿಂದುಳಿದಿವೆ.

Advertisement

ಮೇಲ್ನೋಟಕ್ಕೆ ಬೆಂಗಳೂರು, ಮೈಸೂರು, ತುಮಕೂರಲ್ಲಿ ಲಸಿಕೆ ಪಡೆದ ಜನರ ಸಂಖ್ಯೆ ಹೆಚ್ಚಿರಬಹುದು. ಆದರೆ ಜಿಲ್ಲೆಗಳಲ್ಲಿ ಲಸಿಕೆ ಪಡೆಯಲು ಅರ್ಹರಾದ 18 ವರ್ಷ ಮೇಲ್ಪಟ್ಟವರ ಜನಸಂಖ್ಯೆಯಲ್ಲಿ ಶೇಕಡಾ ಎಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂಬುದರ ಆಧಾರದಲ್ಲಿ ಆ ಜಿಲ್ಲೆಯ ಗುರಿ ಸಾಧನೆಯನ್ನು ಪರಿಗಣಿಸಲಾಗುತ್ತದೆ. ಉದಾಹರಣೆಗೆ, ಹಾವೇರಿಯ ಜಿಲ್ಲೆಯಲ್ಲಿ ಲಸಿಕೆಗೆ ಅರ್ಹ 20 ಲಕ್ಷ ಜನರಲ್ಲಿ ಸದ್ಯ 1.7 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ. ಆ ಜಿಲ್ಲೆಯ ಗುರಿಸಾಧನೆ ಶೇ. 8.3ರಷ್ಟಿದೆ.
ರಾಜ್ಯ ಕೊರೊನಾ ವಾರ್‌ ರೂಂ ಮಾಹಿತಿ ಪ್ರಕಾರ, ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಸರಾಸರಿ ಲಸಿಕೆ ಗುರಿ ಸಾಧನೆ ಶೇ. 6ರಷ್ಟಿದೆ. ಆದರೆ ದಕ್ಷಿಣ ಕರ್ನಾಟಕದ 15 ಜಿಲ್ಲೆಗಳಲ್ಲಿ ಸರಾಸರಿ ಶೇ. 3.5ರಷ್ಟಿದೆ. ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಇದು ಶೇ. 3.8ರಷ್ಟಿದೆ.

ಸೋಂಕು ಹೆಚ್ಚಳವೇ ಹಿನ್ನಡೆಗೆ ಕಾರಣ
ಸೋಂಕಿಗೆ ಒಳಗಾದವರಿಗೆ 3 ತಿಂಗಳ ಬಳಿಕ ಲಸಿಕೆ ಎಂಬ ನಿಯಮವಿದ್ದು, ಹಲವರು ಲಸಿಕೆಯಿಂದ ದೂರ ಉಳಿದಿದ್ದಾರೆ. ಸೋಂಕು ಹೆಚ್ಚಿರುವಾಗ ಜನದಟ್ಟಣೆ, ಸರತಿಯ ಸಹವಾಸವೇ ಬೇಡ ಎಂದೂ ಹಿಂದೇಟು ಹಾಕುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಗುರಿಸಾಧನೆಗೆ ಹಿನ್ನಡೆಯಾಗಿದೆ. ಈ ಜಿಲ್ಲೆಗಳಲ್ಲಿ ಜನಸಂಖ್ಯೆ ಹೆಚ್ಚಿದ್ದು, ಹಂಚಿಕೆ ವ್ಯತ್ಯಯವಾಗಿರುವ ಸಾಧ್ಯತೆಗಳೂ ಇವೆ.

ಉತ್ತರ ಕರ್ನಾಟಕ ಯಾಕೆ ಮುಂದು?
– ಸೋಂಕು ಮತ್ತು ಲಸಿಕೆ ಕುರಿತು ಹೆಚ್ಚಿನ ಜನರಲ್ಲಿ ಹೆಚ್ಚಿನ ಜಾಗೃತಿ.
– ಸೋಂಕಿನ ತೀವ್ರತೆ ಕಡಿಮೆ ಇರುವ ಕಾರಣ ಭೀತಿಯಿಲ್ಲದೆ ಲಸಿಕೆ ಪಡೆಯುತ್ತಿರುವುದು.
– ವಿಶೇಷ ಅಭಿಯಾನಗಳನ್ನು ಕೈಗೊಳ್ಳುತ್ತಿರುವುದು.
– ಜನಸಂಖ್ಯೆ ಕಡಿಮೆ ಹಿನ್ನೆಲೆಯಲ್ಲಿ ವ್ಯವಸ್ಥಿತ ನಿರ್ವಹಣೆ.

ಕರಾವಳಿಯಲ್ಲೂ ಹಿನ್ನಡೆ
ಕರಾವಳಿ ಜಿಲ್ಲೆಗಳಲ್ಲಿಯೂ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗಿದೆ. ಗುರಿಸಾಧನೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಬಿಟ್ಟರೆ ಉಡುಪಿ ಎರಡನೇ ಸ್ಥಾನದಲ್ಲಿದೆ. ಲಸಿಕೆಗೆ ಗುರುತಿಸಿರುವ ಜನಸಂಖ್ಯೆ ಪೈಕಿ ಉಡುಪಿಯಲ್ಲಿ ಶೇ. 3.2, ಉತ್ತರ ಕನ್ನಡದಲ್ಲಿ ಶೇ. 4.3, ದಕ್ಷಿಣ ಕನ್ನಡ ಶೇ. 4.1ರಷ್ಟು ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ.

Advertisement

– ಜಯಪ್ರಕಾಶ್ ಬಿರಾದರ್

Advertisement

Udayavani is now on Telegram. Click here to join our channel and stay updated with the latest news.

Next