Advertisement

PM ಸೂರ್ಯಘರ್‌ ಯೋಜನೆಗೆ ಹಿನ್ನಡೆ “ಗ್ಯಾರಂಟಿ’

11:11 PM Aug 28, 2024 | Team Udayavani |

ಬೆಂಗಳೂರು: ಸ್ವತಃ ಬಳಕೆದಾರರನ್ನೇ ವಿದ್ಯುತ್‌ನಲ್ಲಿ ಸ್ವಾವಲಂಬಿಯಾಗಿಸುವ ಕೇಂದ್ರದ ಮಹತ್ವಾಕಾಂಕ್ಷಿ “ಪ್ರಧಾನಮಂತ್ರಿ ಉಚಿತ ವಿದ್ಯುತ್‌ ಸೂರ್ಯಘರ್‌ ಯೋಜನೆ’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಇದಕ್ಕೆ ಪರೋಕ್ಷವಾಗಿ ರಾಜ್ಯದ 5 ಗ್ಯಾರಂಟಿಗಳಲ್ಲೊಂದಾದ “ಗೃಹಜ್ಯೋತಿ’ ಕಾರಣವಾಗುತ್ತಿದೆ.

Advertisement

ಕಳೆದ ಫೆಬ್ರವರಿಯಲ್ಲಿ ಚಾಲನೆ ನೀಡಲಾದ ಸೂರ್ಯಘರ್‌ ಯೋಜನೆಯಡಿ ಕೇಂದ್ರ ಸರಕಾರವು ಗೃಹಬಳಕೆದಾರರಿಗೆ 3 ಕಿ.ವ್ಯಾ. ಸಾಮರ್ಥ್ಯದವರೆಗೆ ಮನೆಯ ತಾರಸಿಯಲ್ಲಿ ಸೌರವಿದ್ಯುತ್‌ ಫ‌ಲಕಗಳನ್ನು ಅಳವಡಿಸಿಕೊಳ್ಳಲು ಕನಿಷ್ಠ 30 ಸಾವಿರದಿಂದ ಗರಿಷ್ಠ 78 ಸಾವಿರ ರೂ.ವರೆಗೆ ಸಬ್ಸಿಡಿ ನೀಡುತ್ತದೆ. ಜತೆಗೆ ಮಾಸಿಕ 300 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುತ್ತದೆ. ಆದರೆ ಈಗಾಗಲೇ ಗೃಹಜ್ಯೋತಿ ಯೋಜನೆ ಅಡಿ ಯಾವುದೇ ಹೂಡಿಕೆ ಇಲ್ಲದೆ ರಾಜ್ಯ ಸರಕಾರ 200 ಯೂನಿಟ್‌ವರೆಗೆ ಎಲ್ಲ ವರ್ಗಗಳ ಗೃಹ ಬಳಕೆದಾರರಿಗೂ ಉಚಿತ ವಿದ್ಯುತ್‌ ಒದಗಿಸುತ್ತಿದೆ. ಹಾಗಾಗಿ, ಕೇಂದ್ರದ ಯೋಜನೆ ಕಡೆಗೆ ತಿರುಗಿಯೂ ನೋಡುತ್ತಿಲ್ಲ.

ದೇಶದ ಬಹುತೇಕ ರಾಜ್ಯಗಳಲ್ಲಿ ಕೇಂದ್ರದ ಸೂರ್ಯಘರ್‌ ಯೋಜನೆ ಅಡಿ ನೋಂದಣಿ ಸಂಖ್ಯೆ ಲಕ್ಷದ ಗಡಿ ದಾಟಿದೆ. ಅದರಲ್ಲೂ ಆಸ್ಸಾಂ, ಬಿಹಾರ, ಗುಜರಾತ್‌, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಉತ್ತರ ಪ್ರದೇಶ ಮುಂಚೂಣಿಯಲ್ಲಿವೆ. ಆದರೆ ಕರ್ನಾಟಕ ಮಾತ್ರ ಈ ನಿಟ್ಟಿನಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ನೇರವಾಗಿ ಸೂರ್ಯಘರ್‌ ಯೋಜನೆ ಅಡಿ ಅರ್ಜಿ ಸಲ್ಲಿಕೆಗೆ ಪೋರ್ಟಲ್‌ ಮೂಲಕ ಅವಕಾಶ ಕಲ್ಪಿಸಿದೆ. ಒಟ್ಟಾರೆ ರಾಜ್ಯದಲ್ಲಿ ನೋಂದಣಿ ಮಾಡಿಸಿಕೊಂಡವರ ಸಂಖ್ಯೆ 20 ಸಾವಿರ ಕೂಡ ದಾಟಿಲ್ಲ. ರಾಜ್ಯದಲ್ಲಿ ಸುಮಾರು 1.95 ಕೋಟಿ ಗೃಹಬಳಕೆದಾರರಿದ್ದು, ಗೃಹಜ್ಯೋತಿ ಅಡಿ ನೋಂದಾಯಿಸಿಕೊಂಡವರ ಸಂಖ್ಯೆಯೇ ಅಂದಾಜು 1.72 ಕೋಟಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನೋಂದಣಿ ಹೇಗೆ?
ಗ್ರಾಹಕರು ಯೋಜನೆ ನೋಂದಣಿಗೆ https://www.pmsuryaghar.gov.in/ ಪೋರ್ಟಲ್‌ನಲ್ಲಿ ಆರ್‌.ಆರ್‌. ನಂಬರ್‌ ಸಹಿತ ನೋಂದಣಿ ಮಾಡಿಕೊಳ್ಳಬೇಕು. ಆಗ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಗ್ರಾಹಕರ ಮೊಬೈಲ್‌ಗೆ ಒಂದು ನಂಬರ್‌ ಬರುತ್ತದೆ. ಅದನ್ನು ಗ್ರಾಹಕ ತನ್ನ ಪ್ರಸ್ತುತ ಸ್ಥಾಪಿತ ಸಾಮರ್ಥ್ಯ ಎಷ್ಟು ಎಂಬುದರ ಮಾಹಿತಿ ಒದಗಿಸಬೇಕಾಗುತ್ತದೆ. ಅದನ್ನು ಆಧರಿಸಿ ಸಚಿವಾಲಯವು ಸಂಬಂಧಪಟ್ಟ ಎಸ್ಕಾಂಗೆ ನಿರ್ದೇಶನ ನೀಡುತ್ತದೆ.

Advertisement

ಯಾರಿಗೆ ಎಷ್ಟು ಸಬ್ಸಿಡಿ?
ಈ ಯೋಜನೆ ಅಡಿ 1 ಕಿ.ವಾ. ಸಾಮರ್ಥ್ಯದ ಸೌರವಿದ್ಯುತ್‌ ಉಪಕರಣ ಅಳವಡಿಕೆಗೆ 30 ಸಾವಿರ ರೂ. ಸಬ್ಸಿಡಿ ದೊರೆತರೆ, 2 ಕಿ.ವಾ. ಸಾಮರ್ಥ್ಯಕ್ಕೆ 60 ಸಾವಿರ ಹಾಗೂ 3 ಕಿ.ವಾ. ಸಾಮರ್ಥ್ಯದ ಉಪಕರಣಗಳ ಅಳವಡಿಕೆಗೆ 78 ಸಾವಿರ ರೂ.ವರೆಗೆ ಸಬ್ಸಿಡಿ ದೊರೆಯುತ್ತದೆ. ಅನಂತರದಲ್ಲಿ 1 ಕಿ.ವಾ. ಅಳವಡಿಸಿಕೊಂಡ ಕುಟುಂಬಕ್ಕೆ ಮಾಸಿಕ 0-150 ಯೂನಿಟ್‌, 2-3 ಕಿ.ವಾ. ಸಾಮರ್ಥ್ಯಕ್ಕೆ 150-300 ಯೂನಿಟ್‌ ಹಾಗೂ 3 ಕಿ.ವಾ.ಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತದೆ.

– ವಿಜಯ ಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next