Advertisement

ಪ್ರತಿಕೂಲ ಸಾಕ್ಷಿ ನುಡಿದ ಹಿನ್ನೆಲೆ; ಸಂತ್ರಸ್ತೆಗೆ ನೀಡಿದ್ದ ಪರಿಹಾರ ಧನ ಹಿಂಪಡೆದ ನ್ಯಾಯಾಲಯ

12:50 AM Jan 13, 2024 | Team Udayavani |

ಮಂಗಳೂರು: ಯುವಕನೊಬ್ಬನ ಮೇಲೆ ಪೋಕ್ಸೋ, ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸರಕಾರದಿಂದ ಪರಿಹಾರ ಧನ ಪಡೆದ ಯುವತಿ ಬಳಿಕ ಪ್ರತಿಕೂಲ ಸಾಕ್ಷಿ ನುಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಒಂದನೇ ಹೆಚ್ಚುವರಿ ಹಾಗೂ ಜಿಲ್ಲಾ ತ್ವರಿತ ಗತಿಯ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ಪರಿಹಾರ ಮೊತ್ತ ವಾಪಸ್‌ ಪಡೆಯುವ ಮೂಲಕ ಅಪರೂಪದ ತೀರ್ಪು ನೀಡಿದೆ.

Advertisement

ಈ ವಿಶೇಷ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಸಹಾಯಕ ಪೊಲೀಸ್‌ ಆಯುಕ್ತ ಮನೋಜ್‌ ಕುಮಾರ್‌ ನಾಯಕ್‌ ಅವರು ಆರೋಪಿ ಮಂಜಪ್ಪ ಅಲಿಯಾಸ್‌ ಮಂಜ (23) ನ ಮೇಲೆ ಪೋಕ್ಸೋ ಕಾಯ್ದೆ, ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಮಾಡಿ 39 ಸಾಕ್ಷಿದಾರರನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು 2023ರ ಅ. 5ರಂದು ಪ್ರಕರಣದ ವಿಚಾರಣೆ ಆರಂಭಿಸಿದ್ದು, ನ.17ರಂದು ವಿಚಾರಣೆ ಪೂರ್ಣಗೊಂಡಿತ್ತು. ವಿಚಾರಣೆ ವೇಳೆ ಸಂತ್ರಸ್ತೆ ಹಾಗೂ ಸಂತಸ್ತೆಯ ಕಡೆಯವರು ಪ್ರತಿಕೂಲ ಸಾಕ್ಷಿನುಡಿದಿದ್ದರು. ಇದರಿಂದ ಆರೋಪಿ ದೋಷಮುಕ್ತಗೊಂಡಿದ್ದ. ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್‌ ನಾಯಕ್‌ ಅವರು ವಾದ ಮಂಡಿಸಿದ್ದರು.

ಪ್ರಕರಣದಲ್ಲಿ ಸಂತ್ರಸ್ತೆಗೆ ಆದ ಅನ್ಯಾಯಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾದಾಗ 1.25 ಲಕ್ಷ ರೂ. ಹಾಗೂ ದೋಷಾರೋಪಣೆ ಪತ್ರ ಸಲ್ಲಿಸಿದಾಗ 2.50 ಲಕ್ಷ ರೂ. ಪರಿಹಾರ ಧನವನ್ನು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಮಂಜೂರು ಮಾಡಿ, ಸಂತ್ರಸ್ತೆಯು ಅಪ್ರಾಪ್ತಳಾಗಿದ್ದ ಹಿನ್ನೆಲೆಯಲ್ಲಿ ಚಿಕ್ಕಮ್ಮನ ಖಾತೆಗೆ ಜಮಾ ಮಾಡಿದ್ದರು.

ಉಪನಿರ್ದೇಶಕರಿಂದ
ನ್ಯಾಯಾಲಯಕ್ಕೆ ಮನವಿ
ಸಂತ್ರಸ್ತೆ ಪ್ರತಿಕೂಲ ಸಾಕ್ಷಿ ನುಡಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಂತ್ರಸ್ತೆಗೆ ನೀಡಿದ 3.75 ಲಕ್ಷ ರೂ. ಪರಿಹಾರದ ಆದೇಶ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ವಿಚಾರಣೆ ಮಾಡಿದ ತನಿಖಾಧಿಕಾರಿಯವರ ಸಾಕ್ಷéವನ್ನು ಆಧರಿಸಿ, ಪರಿಹಾರದ ಮೊತ್ತವನ್ನು ಸರಕಾರಕ್ಕೆ ಹಿಂದಿರುಗಿಸಲು ಆದೇಶಿಸಬೇಕೆಂದು ಮನವಿ ಮಾಡಿದ್ದರು. ನ್ಯಾಯಾಲಯ ಪ್ರಕರಣದ ವಿಚಾರವನ್ನು ಪರಿಗಣಿಸಿ, 2023ರ ಡಿ.26ರಂದು ಸಂತ್ರಸ್ತ ಯುವತಿಗೆ ವಿತರಿಸಲಾಗಿದ್ದ ಪರಿಹಾರದ ಮೊತ್ತವನ್ನು ಉಪನಿರ್ದೇಶಕರು ವಸೂಲಿ ಮಾಡಿ ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡುವಂತೆ ನಿರ್ದೇಶಿಸಿತ್ತು.

Advertisement

ಜ.4ರಂದು ಇಲಾಖಾ ಉಪನಿರ್ದೇಶಕರು 3.75 ಲಕ್ಷ ರೂ. ವನ್ನು ಸಂತ್ರಸ್ತೆಯ ಚಿಕ್ಕಮ್ಮನಿಂದ ವಸೂಲಾತಿ ಮಾಡಿ, ಜಿಲ್ಲಾಧಿಕಾರಿ ಮತ್ತು ಉಪನಿರ್ದೇಶಕರ ಜಂಟಿ ಖಾತೆಗೆ ಮರು ಜಮೆ ಮಾಡಿದ್ದಾರೆ.

ಪರಿಹಾರದ ಮೊತ್ತವನ್ನು ಹಿಂದಿರುಗಿಸಬೇಕೆಂಬ ಭಯ ಸಂತ್ರಸ್ತರಲ್ಲಿ ಬಂದರೆ ಪ್ರತಿಕೂಲ ಸಾಕ್ಷಿ ನುಡಿಯುವ ಪರಿಪಾಠ ಸ್ಥಗಿತಗೊಂಡು ಒಳ್ಳೆಯ ರೀತಿಯ ನ್ಯಾಯದಾನ ಸಮಾಜಕ್ಕೆ ದೊರಕುವ ಸಂದೇಶವನ್ನು ಈ ಅಪರೂಪದ ತೀರ್ಪು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next