Advertisement

ಕೋವಿಡ್‌ ಹೆಚ್ಚಳ ಹಿನ್ನೆಲೆ: ಶಾಲೆ ಮುಚ್ಚಬೇಡಿ; ಸುರಕ್ಷೆಗೆ ಒತ್ತು ನೀಡಿ

01:52 AM Dec 08, 2021 | Team Udayavani |

ಬೆಂಗಳೂರು: ಕೊರೊನಾ ಹೆಚ್ಚಳ ಮತ್ತು ಒಮಿಕ್ರಾನ್‌ ರೂಪಾಂತರಿಯ ಭೀತಿಯು ಶಾಲೆಗಳನ್ನು ಮತ್ತೆ ಮುಚ್ಚಬೇಕೇ ಎಂಬ ಜಿಜ್ಞಾಸೆ ಮೂಡಿಸಿದೆ.

Advertisement

ಪ್ರಕರಣಗಳು ಹೆಚ್ಚಾದರೆ ಶಾಲೆ ಮುಚ್ಚುವ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂಬ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ನೀಡಿದ್ದ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ. ಕೊರೊನಾ ಪರಿಸ್ಥಿತಿ ತಿಳಿಯಾದ ಬಳಿಕ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದು, ಮತ್ತೆ ಶಾಲೆ ಮುಚ್ಚುವ ಭೀತಿ ಮೂಡಿ ಸುವುದು ಅನಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ನಿಯಂತ್ರಣ ಕ್ರಮಗಳನ್ನು ಕೈಗೊಂಡು ಸುರಕ್ಷಾ ಕ್ರಮ ಪಾಲಿಸಿ ಶಾಲೆ ನಡೆಸುವುದು ಸೂಕ್ತ. ಒಮಿಕ್ರಾನ್‌ ಸೋಂಕು ಎಷ್ಟು ಅಪಾಯಕಾರಿ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯ ವಾಗದಿರುವುದರಿಂದ ವಿದ್ಯಾರ್ಥಿಗಳು ಮತ್ತು ಹೆತ್ತವರು ಆತಂಕಪಡುವ ಅಗತ್ಯವಿಲ್ಲ ಎಂಬ ವಾದವೂ ಇದೆ. ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿ ಗಳನ್ನು ಅನುಸರಿಸಿ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಕರಣಗಳು ಹೆಚ್ಚಾದ ಶಾಲೆಗಳಲ್ಲಿ ಮಾತ್ರ ಪಾಳಿ ಪದ್ಧತಿಯಲ್ಲಿ ಬೆಳಗ್ಗೆ/ಅಪರಾಹ್ನ ತರಗತಿಗಳನ್ನು ನಡೆಸುವ ಅವಕಾಶವನ್ನೂ ಮುಕ್ತವಾಗಿರಿಸಿಕೊಳ್ಳಬೇಕು.

ಜತೆಗೆ, ಶಾಲಾ ಆವರಣ ಬಳಸಿ ಕೊಂಡು ಬೋಧನೆ ಮತ್ತಿತರ ಹಲವು ಕ್ರಮಗಳನ್ನು ಕೈಗೊಂಡು ಶಾಲೆಗಳನ್ನು ನಡೆಸಬೇಕಿದೆ. ತೀರಾ ಅನಿವಾರ್ಯವಾದರೆ ಪ್ರಕರಣಗಳು ಹೆಚ್ಚಿರುವ ಶಾಲೆಯಲ್ಲಿ ಮಾತ್ರ ಕ್ರಮ ಕೈಗೊಳ್ಳುವುದು ಸೂಕ್ತ ಎಂಬುದು ಬಹುತೇಕ ತಜ್ಞರ ಅಭಿ ಪ್ರಾಯವಾಗಿದೆ.

Advertisement

ಇದನ್ನೂ ಓದಿ:ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!

ಮಾರ್ಗಸೂಚಿ ಪಾಲನೆಯಾಗಲಿ
ಒಂದೂವರೆ ವರ್ಷಗಳ ಬಳಿಕ ಮಕ್ಕಳು ಶಾಲೆಗಳತ್ತ ಮುಖ ಮಾಡಿದ್ದು, ಈಗ ಶಾಲೆ ಮುಚ್ಚಿದರೆ ವಿದ್ಯಾರ್ಥಿಗಳ ಕಲಿಕೆ ಮತ್ತು ಭವಿಷ್ಯದ ದೃಷ್ಟಿಯಿಂದ ಸಮಸ್ಯೆಯಾಗುತ್ತದೆ. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಸಿಂಪಡಣೆ, ಶಾಲಾ ಕೊಠಡಿಗಳ ಸ್ವಚ್ಛತೆ ಪಾಲಿಸಲಾಗುತ್ತಿದೆ. ಮನೆಗಳಲ್ಲಿ ಹೆತ್ತವರು ಹಾಗೂ ಶಾಲಾ ಆಡಳಿತ ಮಂಡಳಿ, ಬೋಧಕ, ಬೋಧಕೇತರ ಸಿಬಂದಿ ಸಹಿತ ಎಲ್ಲರೂ ಎರಡೂ ಡೋಸ್‌ ಲಸಿಕೆ ಪಡೆದಿದ್ದರೆ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆಗಳು ಕಡಿಮೆ. ಆದ್ದರಿಂದ ಎರಡೂ ಡೋಸ್‌ ಲಸಿಕೆ ಹಾಕಿರುವುದನ್ನು ಖಚಿತಪಡಿಸಿಕೊಂಡು ಭೌತಿಕ ತರಗತಿ ನಡೆಸಬಹುದಾಗಿದೆ ಎನ್ನುತ್ತಾರೆ ತಜ್ಞರು.ಈ ಮಧ್ಯೆ, ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟವೂ ಶಾಲೆಗಳನ್ನು ಮುಚ್ಚುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಶಾಲೆಗೆ ರಜೆ ನೀಡುವ ಚಿಂತನೆ ಅಥವಾ ಅಂತಹ ಪ್ರಸ್ತಾವನೆ ಸರಿಯಲ್ಲ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ ಎಂದಿದೆ.

ಸೋಂಕು ಕಾಣಿಸಿರುವ ಜಿಲ್ಲೆಗಳಲ್ಲಿ 8ರಿಂದ 10 ದಿನ ರಜೆ ಘೋಷಿಸಿ ಹೆತ್ತವರು, ಮಕ್ಕಳಲ್ಲಿ ಆತಂಕ ನಿವಾರಿಸಬಹುದು. ಅನಂತರ ಮತ್ತೆ ಶಾಲೆ ಆರಂಭಿಸಲು ಕ್ರಮ ಕೈಗೊಳ್ಳಬಹುದು. ಈ ಬಗ್ಗೆ ನಾವು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರಿಗೆ ಪತ್ರ ಬರೆದಿದ್ದೇವೆ.
– ಲೋಕೇಶ್‌ ತಾಳಿಕಟ್ಟೆ , ರುಪ್ಸಾ ಅಧ್ಯಕ್ಷ

ಶಾಲೆ ಸ್ಥಗಿತಗೊಳಿಸುವ ಪ್ರಸ್ತಾವ ಸರಕಾರದ ಮುಂದಿಲ್ಲ. ರಾಜ್ಯದ 1.04 ಕೋಟಿ ಮಕ್ಕಳ ಪೈಕಿ 130 ಮಂದಿಗೆ ಸೋಂಕು ತಗಲಿದೆ. ಇವರಲ್ಲಿ 110 ಮಕ್ಕಳು 3 ಸಂಸ್ಥೆಗಳಿಗೆ ಸೀಮಿತರಾಗಿದ್ದಾರೆ. ಈ ಮೂರು ಶಿಕ್ಷಣ ಸಂಸ್ಥೆಗಳ ಮಾರ್ಗಸೂಚಿ ಬದಲಾಯಿಸಲಾಗುವುದು.
– ಬಿ.ಸಿ. ನಾಗೇಶ್‌, ಶಿಕ್ಷಣ ಸಚಿವರು

ಒಮಿಕ್ರಾನ್‌ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿರುವುದರಿಂದ ಶಾಲೆಗಳನ್ನು ಪುನರಾರಂಭಿಸಿದ ವೇಳೆ ಸರಕಾರ ನೀಡಿದ್ದ ಮಾರ್ಗಸೂಚಿಗಳನ್ನು ಅಳವಡಿಸಿ ಕೊಂಡು ಭೌತಿಕ ತರಗತಿಗಳನ್ನು ನಡೆಸಬಹುದು. ಹೆತ್ತವರು ಮತ್ತು ಶಾಲಾ ಸಿಬಂದಿ ಕಡ್ಡಾಯವಾಗಿ ಎರಡೂ ಡೋಸ್‌ ಲಸಿಕೆ ಪಡೆದಿರಬೇಕು.
– ಡಾ| ಸುದರ್ಶನ್‌ ಬಲ್ಲಾಳ್‌,
ಅಧ್ಯಕ್ಷರು, ಮಣಿಪಾಲ ಆಸ್ಪತ್ರೆ ಸಮೂಹ

ಒಮಿಕ್ರಾನ್‌ ವಿಚಾರದಲ್ಲಿ ಹೆತ್ತವರು ಮತ್ತು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಬದಲು ಎಚ್ಚರಿಕೆಯಿಂದ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಕೈಗೊಂಡಿದ್ದ ಮುಂಜಾಗ್ರತೆ ಕ್ರಮಗಳನ್ನು ಈಗಲೂ ಅಳವಡಿಸಿ ಕೊಂಡರೆ ಸಾಕು.
– ಡಾ. ಮಲ್ಲೇಶ್‌, ಮಕ್ಕಳ ವೈದ್ಯ, ವಾಣಿವಿಲಾಸ ಆಸ್ಪತ್ರೆ

Advertisement

Udayavani is now on Telegram. Click here to join our channel and stay updated with the latest news.

Next