ಕಲಬುರಗಿ: ಗ್ರಾಮೀಣ ಭಾಗದ ರೈತರಿಗೆ ಅದರಲ್ಲೂ ಕೃಷಿ ಯೋಜನೆಗಳ ಸದುಪಯೋಗ ಮಾಡಿಕೊಳ್ಳದ ನೇಗಿಲಯೋಗಿಗೆ ಕೃಷಿ ಇಲಾಖೆಯಿಂದ ಇರುವ ಯೋಜನೆಗಳನ್ನು ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಜಿಪಂ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಹೇಳಿದರು.
ಶುಕ್ರವಾರ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡ ನಂತರ ಮಾತನಾಡಿದ ಅವರು, ಪಕ್ಷದ ಮುಖಂಡರು, ಜಿಪಂ ಸದಸ್ಯರು ವಿಶ್ವಾಸ ಹಾಗೂ ಭರವಸೆನ್ನಿಟ್ಟು ಸ್ಥಾಯಿ ಸಮಿತಿ ನೀಡಿದ್ದಾರೆ. ಹೀಗಾಗಿ ಅವರೆಲ್ಲರ ಸಲಹೆ-ಸೂಚನೆಗಳೊಂದಿಗೆ ಮುನ್ನಡೆಯಲಾಗುವುದು ಎಂದರು.
ಪ್ರಸ್ತಕವಾಗಿ ಜಿಲ್ಲೆಯಲ್ಲಿ ಮಳೆ ಅಭಾವದಿಂದ ಬೆಳೆಗಳೆಲ್ಲ ನಾಶವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕೃಷಿ ಇಲಾಖೆ ಪಾತ್ರವೇ ಬಹು ಮುಖ್ಯವಾಗಿದೆ. ಹಿಂಗಾರು ಮಳೆ ಸರಿಯಾಗಿ ಬರಲೆಂದು ಪ್ರಾರ್ಥಿಸುತ್ತೇವೆ. ಅಲ್ಲದೇ ಬೀಜ ಕೊರತೆ ಇಲ್ಲವೆಂದು ಈಗಾಗಲೇ ಅಧಿಕಾರಿಗಳು ತಿಳಿಸಿದ್ದಾರೆ. ಅನಾವೃಷ್ಟಿಯಿಂದ ಆಗಿರುವ ಬೆಳೆ ಹಾನಿ ಜಂಟಿ ಸಮೀಕ್ಷೆ ನಡೆದಿದ್ದು, ಸಮೀಕ್ಷಾ ಕಾರ್ಯ ಸಮರ್ಪಕವಾಗಿ ನಿರ್ವಹಿಸುವ ಕುರಿತಾಗಿ ಇಲಾಖಾಧಿಕಾರಿಗೊಂದಿಗೆ ಚರ್ಚಿಸುವೆ ಎಂದು ಹೇಳಿದರು.
ಕೃಷಿ ಇಲಾಖೆ ಜತೆಗೆ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ಹಾಗೂ ಬೆಳವಣಿಗೆ ಕುರಿತು ಸಮಾಲೋಚಿಸಿ ದೃಢ ಹೆಜ್ಜೆ ಇಡಲಾಗುವುದು. ಕೃಷಿ ಇಲಾಖೆ ಕಾರ್ಯಯೋಜನೆಗಳ ಬಗ್ಗೆ ಆಸಕ್ತಿಯಿದೆ ಎಂದು ತಿಳಿಸಿದರು. ಶಾಸಕ ಸುಭಾಷ ಆರ್. ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ನಗರಾಧ್ಯಕ್ಷ ಹಾಗೂ ಮಾಜಿ ಶಾಸಕ ಅಮರನಾಥ ಪಾಟೀಲ, ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಪಂ ವಿಪಕ್ಷ ನಾಯಕ ಶಿವಾನಂದ ಪಾಟೀಲ, ಜಂಟಿ ಕೃಷಿ ನಿರ್ದೇಶಕ ರತೀಂದ್ರನಾಥ ಸೂಗುರ, ಮುಖಂಡ ಚಂದು ಪಾಟೀಲ ಹಾಗೂ ಮತ್ತಿತರರು ಶಿವರಾಜ ಪಾಟೀಲ ರದ್ದೇವಾಡಗಿ ಅವರಿಗೆ ಶುಭ ಕೋರಿದರು.
ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಪಾಟೀಲ ಆಂದೋಲಾ, ಜಿಪಂ ಸದಸ್ಯರಾದ ಹರ್ಷಾನಂದ ಗುತ್ತೇದಾರ, ಗುರುಶಾಂತಗೌಡ ಪಾಟೀಲ ನಿಂಬಾಳ, ಮುಖಂಡರಾದ ಹಣಮಂತರಾಯ ಮಲಾಜಿ, ಬಸವರಾಜ ಪಾಟೀಲ ನರಿಬೋಳ, ಸಂಗಮೇಶ ನಾಗನಹಳ್ಳಿ ಹಾಗೂ ಮತ್ತಿತರರು ಇದ್ದರು.
ಕೃಷಿ ಇಲಾಖೆಯಲ್ಲಿ ಹಲವಾರು ಯೋಜನೆಗಳಿವೆ. ಕೊನೆ ಹಂತದ ರೈತನಿಗೂ ಅವುಗಳು ತಲುಪುವುದು ಅಗತ್ಯವಾಗಿದೆ.
ಈಗಾಗಲೇ ಇಲಾಖೆಯ ಎಲ್ಲ ಯೋಜನೆಗಳ ಬಗ್ಗೆ ಸ್ಪಷ್ಟ ಅರಿವಿದೆ. ವಾರದೊಳಗೆ ಯೋಜನೆಗಳ ವಾಸ್ತವ ಸ್ಥಿತಿಗತಿ ಅವಲೋಕಿಸಲಾಗುವುದು. ಒಟ್ಟಾರೆ ತಮ್ಮ ಅವಧಿಯಲ್ಲಿ ನೆನಪಿನಲ್ಲಿಡುವಂತಹ ಕೆಲಸ ಮಾಡಿ ತೋರಿಸಬೇಕಾಗಿದೆ.
ಶಿವರಾಜ ಪಾಟೀಲ ರದ್ದೇವಾಡಗಿ, ಅಧ್ಯಕ್ಷರು, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ