Advertisement

ರೈತರಿಗೂ ಕನಿಷ್ಠ ಕೂಲಿ ನಿಗದಿಯಾಗಲಿ

01:40 PM Sep 10, 2017 | Team Udayavani |

ರಾಯಚೂರು: ಕೃಷಿ ಕ್ಷೇತ್ರ ಸಾಕಷ್ಟು ಅತಂತ್ರದಲ್ಲಿದ್ದು, ಸರ್ಕಾರಗಳು ಕಾರ್ಪೋರೇಟ್‌ ಕ್ಷೇತ್ರಕ್ಕೆ ನೀಡುತ್ತಿರುವಂಥ ಸೌಲಭ್ಯಗಳು ಕೃಷಿ ಕ್ಷೇತ್ರಕ್ಕೂ ಸಿಕ್ಕಲ್ಲಿ ರೈತರ ಬದುಕು ಹಸನಾಗಲಿದೆ ಎಂದು ನಗರ ಕ್ಷೇತ್ರದ ಶಾಸಕ ಡಾ| ಶಿವರಾಜ ಪಾಟೀಲ ಅಭಿಪ್ರಾಯಪಟ್ಟರು.

Advertisement

ಕೇಂದ್ರ ಕೃಷಿ ಇಲಾಖೆ, ಕೃಷಿ ವಿವಿ ವಿಸ್ತರಣಾ ನಿರ್ದೇಶನಾಲಯ, ಐಸಿಎಆರ್‌-ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಏರ್ಪಡಿಸಿದ್ದ ನವಭಾರತ ಮಂಥನ-ಸಂಕಲ್ಪದಿಂದ ಸಿದ್ಧಿ (2017-2022) ರೈತರ ಆದಾಯ ದ್ವಿಗುಣಗೊಳಿಸುವ ಏಳು ಅಂಶಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರ ಕಾರ್ಪೋರೇಟ್‌ ಸಂಸ್ಥೆಗಳಿಗೆ ನೀಡುವ ಸಾಲ, ಸಬ್ಸಿಡಿ, ಜಮೀನು, ಉದ್ಯೋಗ ಸೇರಿ ವಿವಿಧ ಸೌಲಭ್ಯಗಳನ್ನು ರೈತರಿಗೂ ನೀಡಲಿ. ಅಂದಾಗ ಮಾತ್ರ ದೇಶದಲ್ಲಿ ರೈತರ ಆತ್ಮಹತ್ಯೆಗಳಿಗೆ ಕಡಿವಾಣ ಬೀಳಲಿದೆ ಎಂದರು.
ಕೃಷಿ ಹೊರತುಪಡಿಸಿ ಇತರೆ ವಲಯಗಳಲ್ಲಿ ದುಡಿಯುವಂಥ ಕಾರ್ಮಿಕರು, ನೌಕರರಿಗೆ ಕನಿಷ್ಠ ಮಟ್ಟದ ಸಂಬಳ ನೀಡಲಾಗುತ್ತಿದೆ. ಆದರೆ, ಇಡೀ ದೇಶಕ್ಕೆ ಅನ್ನ ಕೊಡುವ ರೈತನಿಗೆ ಯಾವುದೇ ಸಂಬಳ ಸಿಗದಿರುವುದು ದುರಂತ. ರೈತರಿಗೂ ಕನಿಷ್ಠ ವೇತನ ನಿಗದಿಯಾಗಲಿ. ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ರೈತರ ಮನೆಗೆ
ತೆರಳಿ ತಿಳಿಹೇಳಬೇಕು. ಅಂದಾಗ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.

ವಿವಿ ಕುಲಪತಿ ಡಾ| ಪಿ.ಎಂ.ಸಾಲಿಮಠ ಮಾತನಾಡಿ, ಕೇಂದ್ರ ಸರ್ಕಾರ ರೂಪಿಸಿರುವ ನವಭಾರತ ಮಂಥನ: ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮದ ಬಗ್ಗೆ ಸರಿಯಾಗಿ ತಿಳಿಯಬೇಕು. ರೈತರು ಎದುರಿಸುವ ಸವಾಲುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುತ್ತ ನವಭಾರತದ ಕಡೆ ಹೆಜ್ಜೆ ಹಾಕಬೇಕು ಎಂದರು.

ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ| ಐ. ಶಂಕರಗೌಡ ವಿಶೇಷ ಉಪನ್ಯಾಸ ನೀಡಿದರು. ಎಂಎಲ್‌ಸಿ ಎನ್‌.ಎಸ್‌.ಬೋಸರಾಜು, ಜಿಪಂ ಅಧ್ಯಕ್ಷ ಆದಿಮನಿ ವೀರಲಕ್ಷ್ಮಿ, ಕೃಷಿಕ ಸಮಾಜ ಅಧ್ಯಕ್ಷ ಎಸ್‌.ಬಿ.ಪಾಟೀಲ, ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ರಾಜಶೇಖರ ಪಾಟೀಲ, ಸಿದ್ದಯ್ಯ ಭಂಡಾರಿ, ವಿಸ್ತರಣಾ ನಿರ್ದೇಶಕ ಡಾ| ಎಸ್‌.ಕೆ. ಮೇಟಿ, ಕೆವಿಕೆ ಮುಖ್ಯಸ್ಥ ಡಾ| ಎಂ.ವಿ. ರವಿ, ಜಂಟಿ ಕೃಷಿ ನಿರ್ದೇಶಕ ಡಾ| ಎಂ.ಕಿರಣಕುಮಾರ ಸೇರಿ 650ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next