Advertisement

ಹಿಂಗೇ ಮಳೆ ಬಂದ್ರೆ ಜುಲೈನಲ್ಲೇ ಭದ್ರೆ ಭರ್ತಿ

11:44 AM Jul 16, 2018 | Team Udayavani |

ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟುದಾರರು ಈ ಬಾರಿಯ ಮುಂಗಾರು ಹಂಗಾಮಿನಲ್ಲೇ ಭದ್ರಾ ಜಲಾಶಯ ಭರ್ತಿ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಫುಲ್‌ ಖುಷ್‌!.

Advertisement

ಜಿಲ್ಲೆಯಲ್ಲಿ ಮಳೆಯ ಕೊರತೆ ಕಾಡುತ್ತಿದ್ದರೂ ಜೀವನಾಡಿ ಭದ್ರಾ ಜಲಾಶಯಕ್ಕೆ ದಿನೆ ದಿನೇ ಹೆಚ್ಚು ನೀರು ಹರಿದು ಬರುತ್ತಿದ್ದು, ಅಚ್ಚುಕಟ್ಟುದಾರರಲ್ಲಿ ಜೀವಕಳೆ ತರುತ್ತಿದೆ. ಜಿಲ್ಲೆಯಲ್ಲಿ ಭತ್ತ ಬೆಳೆಯಲು ಸಿದ್ಧತೆ ನಡೆದಿದೆ.

ದಾವಣಗೆರೆ ಜಿಲ್ಲೆಯಲ್ಲಿ 65,537 ಹೆಕ್ಟೇರ್‌ ನಷ್ಟು ಭದ್ರಾ ಅಚ್ಚುಕಟ್ಟು ಇದೆ. 2015, 2016 ಮತ್ತು 2017ರಲ್ಲಿ ಭದ್ರಾ ಜಲಾಶಯ ತುಂಬದ ಕಾರಣಕ್ಕಾಗಿಯೇ ರೈತರು ಐದು ಬೆಳೆ ಬೆಳೆಯಲಾಗಲಿಲ್ಲ. ಮಳೆ ಸಮಸ್ಯೆಯಿಂದಾಗಿ 2015, 2016ರಲ್ಲಿ ಭದ್ರಾ ಜಲಾಶಯ ಭರ್ತಿಯಾಗದೇ ಅಚ್ಚುಕಟ್ಟುದಾರರು ಮತ್ತು ನಾಗರಿಕರು ನೀರಿನ ಸಮಸ್ಯೆಯಿಂದ ತತ್ತರಿಸಿದ್ದರು.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯ ಅಚ್ಚುಕಟ್ಟುದಾರರು ಮಾತ್ರವಲ್ಲ ದಾವಣಗೆರೆ ಜಿಲ್ಲೆ ಜನರ ಜೀವನಾಡಿ. ಕೃಷಿ, ಕುಡಿಯುವ ನೀರು, ಕೈಗಾರಿಕೆಗೆ ಭದ್ರಾ ಜಲಾಶಯವೇ ಮೂಲಾಶ್ರಯ. ಹಾಗಾಗಿ ಭದ್ರೆಯ ಒಡಲು ತುಂಬಿದರೆ ಲಕ್ಷಾಂತರ ಜನರ ಒಡಲು ತಣ್ಣಗಿರುತ್ತದೆ. ಇಲ್ಲದೇ ಹೋದಲ್ಲಿ ಪ್ರತಿಯೊಂದಕ್ಕೂ ತತ್ವಾರ ಕಟ್ಟಿಟ್ಟ ಬುತ್ತಿ.
 
60 ವರ್ಷ ಇತಿಹಾಸದ ಭದ್ರಾ ಜಲಾಶಯದ ಸಾಮರ್ಥ್ಯ 186 ಅಡಿ. ಜಲಾಶಯ 2008ರಿಂದ ಈಚೆಗೆ 5 ಬಾರಿ ಭರ್ತಿಯಾಗಿದೆ. 2008, 2009 ರಲ್ಲಿ ಗರಿಷ್ಟ ಮಟ್ಟ ಮುಟ್ಟಿತ್ತು. 2010ರಲ್ಲಿ ಅಕ್ಟೋಬರ್‌ 23ರಂದು ಭರ್ತಿಯಾಗಿತ್ತು. 2011ರಲ್ಲಿ ಆಗಸ್ಟ್‌ 28, 2013ರಲ್ಲಿ ಆಗಸ್ಟ್‌ 26, 2014ರಲ್ಲಿ ಆಗಸ್ಟ್‌ 19 ರಂದು ಜಲಾಶಯ ತುಂಬಿತ್ತು. 2015, 2016, 2017ರಲ್ಲಿ ಭದ್ರಾ ಜಲಾಶಯ ಭರ್ತಿ ಆಗಿರಲಿಲ್ಲ. ಅಧಿಕಾರಿಗಳ ಪ್ರಕಾರ ಜುಲೈ ಅಂತ್ಯಕ್ಕೆ ಜಲಾಶಯ ಮಟ್ಟ 150-160 ಅಡಿ ಆಸುಪಾಸು ಬಂದಲ್ಲಿ ಜಲಾಶಯ ಭರ್ತಿ ಆಗುವುದು ಬಹುತೇಕ ಖಚಿತ.

ಜು. 14ಕ್ಕೆ ಜಲಾಶಯದ ಮಟ್ಟ 166.9 ಅಡಿ ಇರುವುದು ಮತ್ತು ಭದ್ರಾ ಜಲಾಶಯದ ಜಲಾನಯನ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಈ ಬಾರಿ ಜಲಾಶಯ ತುಂಬಲಿದೆ ಎಂಬ ಲೆಕ್ಕಾಚಾರಕ್ಕೆ ಇಂಬು ನೀಡುತ್ತಿದೆ. ಶನಿವಾರ ಬೆಳಿಗ್ಗೆ ವೇಳೆಗೆ 28,447 ಕ್ಯುಸೆಕ್‌ ನೀರು ಹರಿದು ಬಂದಿದೆ.
 
ಭದ್ರಾ ಜಲಾಶಯದಿಂದ ಜು.12 ರಿಂದ ದಾವಣಗೆರೆ ಜಿಲ್ಲೆಯಲ್ಲಿ ಹಾದು ಹೋಗಿರುವ ಬಲದಂಡೆ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಜು. 13 ರಂದು ಜಲಾಶಯದಿಂದ ಹರಿಯಬಿಟ್ಟ ನೀರಿನ ಪ್ರಮಾಣ 1,679 ಕ್ಯುಸೆಕ್‌, ಜು. 14 ರಂದು 2,243 ಕ್ಯುಸೆಕ್‌. ಜು.15 ರಂದು 1,246 ಕ್ಯುಸೆಕ್‌ ನೀರು ಹರಿಯ ಬಿಡಲಾಗಿದೆ. ಜುಲೈ ತಿಂಗಳ ಮಧ್ಯೆಯೇ ನಾಲೆಯಲ್ಲಿ ನೀರು ಹರಿಸುತ್ತಿರುವುದರಿಂದ ಅಚ್ಚುಕಟ್ಟುದಾರರು ಮುಂದಿನ ಕೃಷಿ ಚಟುವಟಿಕೆಗೆ ಸಜ್ಜಾಗಿದ್ದಾರೆ. ಸತತ ಬರದಿಂದ ತತ್ತರಿಸಿದ್ದ ಜನರಲ್ಲಿ ಆಶಾಭಾವನೆ ಕಂಡು ಬರುತ್ತಿದೆ.

Advertisement

ಒಟ್ಟಾರೆ 5 ಬೇಸಿಗೆ ಬೆಳೆ ಕಳೆದುಕೊಂಡಿದ್ದ ರೈತರಿಗ ನೆಮ್ಮದಿಯಿಂದ ಇದ್ದಾರೆ ಕಾರಣ ಈಗಲೇ ಜಲಾಶಯದಲ್ಲಿ 169 ಅಡಿ(52,095 ಟಿಎಂಸಿ)ಯಷ್ಟು ನೀರು ಸಂಗ್ರಹವಾಗಿರುವುದು. ಜಲಾಶಯ ತುಂಬದೇ ಹೋದರೂ 175 ಅಡಿಯ ಆಸುಪಾಸುಗೆ ಬಂದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ 7 ಟಿಎಂಸಿ ಮೀಸಲಿಟ್ಟರೂ ಭತ್ತ ಬೆಳೆಯುವುದಕ್ಕೆ ಬೇಕಾದಷ್ಟು ನೀರು ದೊರೆಯಲಿದೆ ಎಂಬ ಲೆಕ್ಕಾಚಾರ ಅಚ್ಚುಕಟ್ಟುದ್ದಾರರದು

59,790 ಹೆಕ್ಟೇರ್‌ ಗುರಿ ಈ ಬಾರಿ ಮಳೆಗಾಲದಲ್ಲಿ ಜಿಲ್ಲೆಯಲ್ಲಿ 59,790 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಇದೆ. ದಾವಣಗೆರೆ ತಾಲೂಕಿನಲ್ಲಿ 18,300, ಹರಿಹರ 16,000, ಹರಪನಹಳ್ಳಿ 2,000, ಹೊನ್ನಾಳಿ 13,040, ಚನ್ನಗಿರಿ ತಾಲ್ಲೂಕಲ್ಲಿ 10,450 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಇದೆ. ಭದ್ರಾ ನಾಲೆಯಲ್ಲಿ ನೀರು ಹರಿಸುವ ಮುನ್ನವೇ ದಾವಣಗೆರೆ ತಾಲೂಕಿನಲ್ಲಿ 41, ಹರಿಹರದಲ್ಲಿ 10, ಚನ್ನಗಿರಿಯಲ್ಲಿ 8 ಹೆಕ್ಟೇರ್‌ನಲ್ಲಿ ನಾಟಿ ಕಾರ್ಯ ನಡೆದಿದೆ. ಭತ್ತದ ನಾಟಿ ಕಾರ್ಯ ಈಗ ತಾನೇ ಪ್ರಾರಂಭವಾಗಿದೆ. ಇನ್ನೂ ಕಾಲಾವಕಾಶ ಇರುವುದರಿಂದ 59,790 ಹೆಕ್ಟೇರ್‌ ಗುರಿಯನ್ನೂ ಮೀರಿ ನಾಟಿ ಆಗಬಹುದು ಎಂಬ ಲೆಕ್ಕಾಚಾರ ಇದೆ. 

„ರಾ.ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next