Advertisement

ದೇಶದ ಹಿತಕ್ಕಾಗಿ ಹಿಂಬಾಗಿಲ ಮಾತುಕತೆಯೂ ತಪ್ಪಲ್ಲ

09:23 AM Jan 16, 2018 | |

ರಾಷ್ಟ್ರನಾಯಕರು ತೆಗೆದುಕೊಂಡ ನಿರ್ಣಯವನ್ನು ಮುಲಾಜಿಲ್ಲದೇ ವಿರೋಧಿಸುವ ಮತ್ತು ಪಾಲಿಸದಿರುವ ಪರಮಾಧಿಕಾರ ಅನಧಿಕೃತವಾಗಿ ಅಲ್ಲಿಯ ಸೇನೆಗಿದೆ. ಹಾಗಿರುವಾಗ ಅಲ್ಲಿಯ ಸರ್ಕಾರದೊಂದಿಗೆ ನಡೆಸುವ ಯಾವುದೇ ಮಾತುಕತೆಯೂ ಸೇನೆಯ ಸಮ್ಮತಿಯಿಲ್ಲದೆ ಫ‌ಲಕಾರಿಯಾಗಲು ಹೇಗೆ ಸಾಧ್ಯ?

Advertisement

ಪಾಕಿಸ್ತಾನದ ವಿಶ್ವಾಸಾರ್ಹತೆ ಜಾಗತಿಕ ಮಟ್ಟದಲ್ಲಿ ಇಂದು ಪಾತಾಳ ತಲುಪಿದೆ. ಸಾರ್ವಭೌಮ ರಾಷ್ಟ್ರವೊಂದರ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ಅಮೆರಿಕದ ಅಧ್ಯಕ್ಷರು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಾನು ಕೊಡ ಮಾಡುತ್ತಿದ್ದ ಆರ್ಥಿಕ ಸಹಾಯವನ್ನು ತಡೆಹಿಡಿದು, ಎಂಜಲು ಕಾಸಿಗೆ ಕೈಯ್ಯೊ ಡ್ಡುತ್ತಾ ತನ್ನ ಹಂಗಿನಲ್ಲಿರುವ ರಾಷ್ಟ್ರವೆನ್ನುವ ರೀತಿಯಲ್ಲಿ ಹಂಗಿಸಿ ಅಪಮಾನಕರ ರೀತಿಯಲ್ಲಿ ನಡೆಸಿಕೊಂಡಿದ್ದಾರೆ. ಚೀನಾದಿಂದ ಪಡೆದ ಸಹಾಯದಿಂದ ಪಾಕಿಸ್ತಾನದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇಷ್ಟಾದರೂ ಪಾಕಿಸ್ತಾನಿ ಸೇನಾ ನಾಯಕತ್ವ ಮತ್ತು ರಾಜಕೀಯ ನಾಯಕರು ಲೋಕ ಕಂಟಕ ಉಗ್ರವಾದಿಗಳಿಗೆ ಸರ್ವ ವಿಧದ ಸಂರಕ್ಷಣೆ ನೀಡುವುದನ್ನು ನಿಲ್ಲಿಸುತ್ತಿಲ್ಲ. ಕೊಂಚ ಸಮಯದ ಹಿಂದೆ ಭಾರತದ ವಿರುದ್ಧ ಮಾಡುವ ಅಪಪ್ರಚಾರದ ಅಂಗವಾಗಿ ಪೆಲೆಟ್‌ ಗನ್‌ ಹೊಡೆತ ತಿಂದ ಕಾಶ್ಮೀರ ಯುವತಿ ಯೆಂದು ಪ್ಯಾಲೆಸ್ತೀನಿನ ಯುವತಿಯ ಫೋಟೊ ತೋರಿಸಿ ವಿಶ್ವ ಸಂಸ್ಥೆ ಯಿಂದ ಛೀಮಾರಿ ಹಾಕಿಸಿಕೊಂಡಿತು. ವಿಶ್ವ ರಾಷ್ಟ್ರಗಳನ್ನು ದಾರಿ ತಪ್ಪಿಸಲು ಇರಾನ್‌ನಿಂದ ಭಾರತೀಯ ನಾಗರಿಕ ಕುಲ ಭೂಷಣ್‌ ಯಾದವರನ್ನು ಅಪಹರಿಸಿ ಗೂಢಚಾರನೆಂದು ಬಿಂಬಿ ಸು ತ್ತಿದೆ. ಮಾನವೀಯತೆಯ ಹೆಸರಲ್ಲಿ ಅವರ ಹೆಂಡತಿ ಮತ್ತು ತಾಯಿಗೆ ಭೇಟಿಯ ಅವಕಾಶ ನೀಡುವ ಹುಸಿ ಔದಾರ್ಯ ತೋರಿಸಿ ಕೊನೆಗೆ ಇನ್ನಿಲ್ಲದ ಕಿರುಕುಳ ನೀಡಿ ಧೂರ್ತತನ ಮೆರೆಯಿತು. ಸಭ್ಯತೆ, ಶಿಷ್ಟಾಚಾರ, ರಾಜತಾಂತ್ರಿಕ ಘನತೆಗಳಿಗೆ ಕಿಂಚಿತ್ತೂ ಗೌರವ ಕೊಡದ ಪಾಕಿಸ್ತಾನಕ್ಕೆ ಸದ್ಬುದ್ಧಿ ಬರಬಹುದೆಂದು ನಿರೀಕ್ಷಿಸುವುದು ಮೂರ್ಖತನವೇ ಸರಿ.

ಗಡಿಯಲ್ಲಿ ನಿತ್ಯವೆಂಬಂತೆ ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಉದ್ವಿಗ್ನ ಸ್ಥಿತಿಯ ಸಂದರ್ಭದಲ್ಲಿ ಭಾರತೀಯ ಸೇನಾ ಚೌಕಿಯ ಮೇಲೆ ಹಠಾತ್‌ ದಾಳಿ ಮಾಡಿ ಹಿಂಸಾಚಾರ ನಡೆಸುವ ಪಾಕಿಸ್ತಾನಿ ಸೇನೆ ಅದನ್ನು ತನ್ನ ದೊಡ್ಡ ಸಾಧನೆ ಎಂಬಂತೆ ದೇಶೀ ಮಾಧ್ಯಮ ಗಳಲ್ಲಿ ಬಿಂಬಿಸಿಕೊಂಡು ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಪಾಕಿಸ್ತಾನಿ ಸೇನೆಯ ಈ ಹಳೆಯ ಚಾಳಿಯಿಂದ ಮುಂಚೂಣಿ ನೆಲೆಯಲ್ಲಿ ನಿಯೋಜನೆಗೊಂಡ ಸೈನಿಕರು ತೀವ್ರ ಸಂಕಷ್ಟಕ್ಕೊಳ ಗಾಗುತ್ತಾರೆ. ಹಗಲು ರಾತ್ರಿಯ ಪರಿವೆ ಇಲ್ಲದೇ ಸದಾ ಸನ್ನದ್ಧರಾಗಿ ರಬೇಕಾದ ಅನಿವಾರ್ಯತೆ ಅವರಿಗೆ ಬಂದೊದಗಿದೆ. ಅವರ ನ್ನಾಶ್ರಯಿಸಿರುವ ತಂದೆ, ತಾಯಿ, ಪತ್ನಿ, ಮಕ್ಕಳು ಮತ್ತು ಬಂಧುಗಳು ಸಹಜವಾಗಿಯೆ ಆತಂಕಕ್ಕೊಳಗಾಗುತ್ತಾರೆ. ಇದ್ಯಾವುದೂ ಗೊತ್ತಿಲ್ಲದ ಅಥವಾ ಅದರ ಪರಿಣಾಮ ಎದುರಿಸಬೇಕಾದ ಅನಿವಾರ್ಯತೆ ಇಲ್ಲದ ಉಗ್ರ ವಿಚಾರ ಧಾರೆಯ ವ್ಯಕ್ತಿಗಳು, ನಾಯಕರು ಮನ ಬಂದಂತೆ ಹೇಳಿಕೆ ನೀಡುತ್ತಲೇ ಇರುತ್ತಾರೆ. ಇತ್ತೀಚೆಗೆ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರು ಬ್ಯಾಂಕಾಕ್‌ನಲ್ಲಿ ಭಾರತ-ಪಾಕ್‌ ಭದ್ರತಾ ಸಲಹೆಗಾರರು ಮಾತುಕತೆ ನಡೆಸಿರುವುದಕ್ಕೆ ಆಕ್ಷೇಪವೆತ್ತಿದ್ದರು. ರಾಷ್ಟ್ರದ ಹಿತದೃಷ್ಟಿಯಿಂದ ಇಂತಹ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ.

ಗಡಿಯ ಜನರ ಸಂಕಷ್ಟ
ಪಾಕಿಸ್ತಾನದಲ್ಲಿ ಚುನಾಯಿತ ಸರಕಾರವಿದ್ದರೂ ಕಾಶ್ಮೀರ ಮತ್ತು ಭಾರತದೊಂದಿಗಿನ ಸಂಬಂಧದ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಅಲ್ಲಿಯ ಸೇನೆ ಎಂದು ಈ ಹಿಂದೆಯೂ ಹಲವಾರು ಬಾರಿ ಸಾಬೀತಾಗಿತ್ತು. ಉಭಯ ದೇಶಗಳ ನಡುವಿನ ಕಾವೇರಿದ ಬಿಗುವಿನ ವಾತಾವರಣದಿಂದಾಗಿ ಗಡಿಗೆ ಹೊಂದಿಕೊಂಡಿರುವ ಜನರ ಜೀವನ ನರಕಸದೃಶವಾಗಿದೆ. ಹೊಲಗ¨ªೆಗಳಲ್ಲಿ ಕೆಲಸ ಮಾಡುತ್ತಿರುವಾಗ ಪಾಕ್‌ ಕಡೆಯಿಂದ ನಡೆಯುವ ಶೆಲ್‌ ದಾಳಿಗೆ ಅಮಾಯಕ ನಾಗರಿಕರು ಮತ್ತು ಜಾನುವಾರುಗಳು ಬಲಿಯಾಗುತ್ತಿದೆ. ಅರ್‌.ಎಸ್‌. ಪುರಾ, ಪಲನ್ವಾಲ್‌, ಮೆಂಡರ್‌ ಸೆಕ್ಟರ್‌ಗಳ ರೈತರು ಗಡಿಯಲ್ಲಿ ಘರ್ಷಣೆ ಹೆಚ್ಚಾದಾಗೆಲ್ಲಾ ಭೀತಿಯಿಂದ ಸುರಕ್ಷಿತ ತಾಣ ಹುಡುಕಿಕೊಂಡು ಹೋಗಬೇಕಾಗುತ್ತದೆ. ಶಾಲಾ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ. 

1971ರ ಯುದ್ಧದ ನಂತರ ಬಹಳ ವರ್ಷಗಳವರೆಗೆ ಶಾಂತಿಯ ಬದುಕು ಕಂಡಿದ್ದ ಜಮ್ಮು ಗಡಿ ಭಾಗದ ಜನ ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಭೀಕರ ಶೆಲ್‌ ದಾಳಿಯಿಂದ ತತ್ತರಿಸಿದ್ದರು. ಗಡಿ ಭಾಗದ ಪಲನ್ವಾಲ್‌ನಂತಹ ಸಣ್ಣ ಪಟ್ಟಣದ ಜನ ಸುರಕ್ಷಿತ ತಾಣದತ್ತ ವಲಸೆ ಹೋಗಿದ್ದರು. ಸದಾ ಜನಜಂಗುಳಿಯಿಂದ ಕೂಡಿದ ಅಂಗಡಿಮುಂಗಟ್ಟುಗಳು ಬರಿದಾಗಿದ್ದವು. ಸಂಪನ್ನವಾಗಿದ್ದ ನಗರಗಳು ಯಾವುದೋ ಹಾಳು ಬಿದ್ದ ಐತಿಹಾಸಿಕ ನಗರದಂತೆ ತಬ್ಬಲಿಯಾಗಿತ್ತು. ವ್ಯಾಪಾರ, ವಹಿವಾಟು ನಡೆಸಿ ಕೊಂಡು ಚೆನ್ನಾಗಿ ಜೀವನ ನಡೆಸುತ್ತಿದ್ದವರು ಬೀದಿಗೆ ಬಂದಿದ್ದರು, ಸಮೃದ್ಧ ಬದುಕು ಕಟ್ಟಿಕೊಂಡು ಶಾಂತಿಯಿಂದ ಬದುಕುತ್ತಿದ್ದ ಜನ ಹಠಾತ್‌ ಅಲೆಮಾರಿಯಾಗಬೇಕಾದ ವಿಕಟ ಸಂದರ್ಭ ಒದಗಿದಾಗ ಅವರ ವೇದನೆ ಎಷ್ಟಿರಬಹುದು? ಸ್ವಂತ ಮನೆಗಳನ್ನು ನಿರ್ಮಿಸಿ ಸಂತೃಪ್ತಿಯಿಂದ ಬದುಕುತ್ತಿದ್ದವರಿಗೆ ಹಠಾತ್‌ ನಿರಾಶ್ರಿತರ‌ಂತೆ ಅಲೆಯ ಬೇಕಾದ ದುರ್ಗತಿ ಎದುರಾದರೆ ಅವರ ವೇದನೆ ಎಷ್ಟಿರಬಹುದು?    

Advertisement

ಕೆಲಸಕ್ಕೆ ಬಾರದ ಅಂತರಾಷ್ಟ್ರೀಯ ಒತ್ತಡ
ಸ್ವಹಿತ ಸಾಧನೆಯೇ ವಿಶ್ವದ ಬಲಿಷ್ಟ ರಾಷ್ಟ್ರಗಳ ವಿದೇಶ ನೀತಿಯ ನಿಗೂಢ ಪ್ರಧಾನ ಅಂಶ. ಅಮೆರಿಕ, ಚೀನ ರಷ್ಯಾದಂತಹ ರಾಷ್ಟ್ರಗಳು ಪಾಕಿಸ್ತಾನದ ಉಗ್ರವಾದ ಪ್ರೋತ್ಸಾಹ ನೀತಿಯನ್ನು ಖಂಡಿಸಿದರೂ ತಮ್ಮ ಸ್ವಾರ್ಥ ಸಾಧನೆಗಾಗಿ ಪಾಕಿಸ್ತಾನವನ್ನು ಒಂದಲ್ಲ ಒಂದು ರೀತಿಯಲ್ಲಿ ಸಂರಕ್ಷಿಸುತ್ತಾ ಬಂದಿವೆ. ಹೀಗಿರುವಾಗ ಅಮೆರಿಕವಾಗಲಿ, ರಷ್ಯಾವಾಗಲಿ ಪಾಕಿಸ್ತಾನಕ್ಕೆ ಅಂಕುಶ ಹಾಕುವುದೆಂದು ನಿರೀಕ್ಷಿಸುವುದು ಅಸಾಧ್ಯ. ಚೀನಾವಂತೂ ಭಾರತ ವನ್ನು ಮಣಿಸಲು ಪಾಕಿಸ್ತಾನವನ್ನು ದಾಳವಾಗಿಸಿಕೊಂಡಿದೆ.

ಸ್ವಾತಂತ್ರ್ಯನಂತರ ಆರೇಳು ದಶಕಗಳಲ್ಲಿ ನೂರಾರು ಬಾರಿ ಪಾಕಿಸ್ತಾನದ ಜತೆಗೆ ಮಾತುಕತೆ ನಡೆದಿದೆ. ಅದರಿಂದ ಕೇವಲ ತಾತ್ಕಾಲಿಕ ಪರಿಣಾಮವಿರುತ್ತದೆ ಹೊರತು ಶಾಶ್ವತ ಪರಿಹಾರ ಸಿಕ್ಕಿಲ್ಲ. ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನ ಸೇನೆಯ ಜನರಲ್‌ಗಳ ದುರುಳ ನೀತಿ. ಪಾಕ್‌ ಜನರಲ್‌ಗ‌ಳಿಂದ ಆದೇಶ ಪಡೆದು ಕೊಳ್ಳುವ ಪ್ರಧಾನ ಮಂತ್ರಿ ಮತ್ತವರ ಸಂಪುಟದವರೊಂದಿಗಾಗಲಿ ಅಥವಾ ಪ್ರತಿನಿಧಿಗಳೊಂದಿಗಾಗಲಿ ನಡೆಯುವ ಮಾತುಕತೆ ನಿರೀಕ್ಷಿತ ಫ‌ಲ ನೀಡಲು ಹೇಗೆ ಸಾಧ್ಯ? ಮಾತುಕತೆಯಲ್ಲಿ ಒಮ್ಮತ ಮೂಡಿದ ನಿರ್ಣಯವನ್ನು ಸೇನೆ ಒಪ್ಪಬೇಕೆಂದೇನೂ ಇಲ್ಲ ವಲ್ಲ. ರಾಷ್ಟ್ರನಾಯಕರು ತೆಗೆದುಕೊಂಡ ನಿರ್ಣಯವನ್ನು ಮುಲಾ ಜಿ ಲ್ಲದೇ ವಿರೋಧಿಸುವ ಮತ್ತು ಪಾಲಿಸದಿರುವ ಪರಮಾಧಿಕಾರ ಅನಧಿಕೃತವಾಗಿ ಅಲ್ಲಿಯ ಸೇನೆಗಿದೆ. ಹಾಗಿರುವಾಗ ಅಲ್ಲಿಯ ಸರ್ಕಾರದೊಂದಿಗೆ ನಡೆಸುವ ಯಾವುದೇ ಮಾತುಕತೆಯೂ ಸೇನೆಯ ಸಮ್ಮತಿಯಿಲ್ಲದೆ ಫ‌ಲಕಾರಿಯಾಗಲು ಹೇಗೆ ಸಾಧ್ಯ?

ಮುಂಬಯಿ ದಾಳಿಗೆ ಸಂಬಂಧಿಸಿದ ಸಾವಿರಾರು ಪುಟಗಳ ನ್ನೊಳಗೊಂಡ ದಸ್ತಾವೇಜುಗಳನ್ನು ಅನೇಕ ಪಕ್ಕಾ ಸಾಕ್ಷ್ಯಾಧಾರ ಗಳ ಸಹಿತ ನೀಡಿದರೂ ಅಲ್ಲಿಯ ಸರಕಾರ ಅವುಗಳನ್ನು ಒಪ್ಪಿತೇ? ದಾವೂದ್‌ ಇಬ್ರಾಹಿಂನ ಅನೇಕ ಸ್ಥಿರ ಸಂಪತ್ತುಗಳ ವಿಳಾಸ, ಮೊಬೈಲ್‌ ನಂಬರ್‌ ಒಳಗೊಂಡ ಡೋಸಿಯರ್‌ ತಯಾರಿಸಿದ್ದ ನಮ್ಮ ಸರಕಾರ ಮಾತುಕತೆ ನಡೆಯದ್ದರಿಂದ ಪಾಕಿಸ್ತಾನಕ್ಕೆ ಅದನ್ನು ಒಪ್ಪಿಸುವ ಸುವರ್ಣಾಕಾವಕಾಶ ತಪ್ಪಿತೆಂಬ ನಿರಾಶೆ ಸರ್ವತ್ರ ವ್ಯಕ್ತವಾಯಿತು. ಒಂದು ವೇಳೆ ಒಪ್ಪಿಸಿದ್ದರೂ ಪಾಕಿಸ್ತಾನ ಅದರಂತೆ ಕ್ರಮ ಕೈಗೊಳ್ಳುತ್ತದೆಂಬುದಕ್ಕೆ ಯಾವ ಭರವಸೆಯೂ ಇಲ್ಲ. 

ಸೇನೆಯ ಪಾರಮ್ಯ
ಪಾಕಿಸ್ತಾನದಲ್ಲಿ ಸರ್ವಶಕ್ತವಾದ ಸೇನೆಯ ಜನರಲ್‌ಗ‌ಳ ಮುಂದೆ ಅಲ್ಲಿಯ ಸರಕಾರ ಮತ್ತು ಜನ ಪ್ರತಿನಿಧಿಗಳು ಅಸಹಾ ಯಕರು. ಪಾಕಿಸ್ತಾನಿ ಸೇನೆಗೆ ಕಾಶ್ಮೀರ ವಿವಾದ ಬಗೆಹರಿಯುವು ದಾಗಲಿ, ಭಾರತದೊಂದಿಗೆ ಸಂಬಂಧ ಸುಧಾರಣೆಯಾಗಲಿ ಬೇಕಿಲ್ಲ. ಕಾಶ್ಮೀರ ಸದಾ ಹೊತ್ತಿ ಉರಿಯುತ್ತಿದ್ದರೆ ಮಾತ್ರ ಅವರ ಹಿತ ಸಾಧನೆಯಾಗುತ್ತದೆ. ಪಾಕಿಸ್ತಾನಿ ಸೇನೆಯ ಜವಾನರು ಧ್ವಜ ಸಭೆಯ ಅನೌಪಚಾರಿಕ ಮತುಕತೆಗಳ ಸಂದರ್ಭದಲ್ಲಿ ನಮ್ಮ ಕಮಾಂಡರ್‌ಗಳು ನಿಮ್ಮಂತೆ ದಿಲ್ಲಿಯ ಆದೇಶಕ್ಕೆ ಕಾಯುತ್ತಾ ಕುಳಿತುಕೊಳ್ಳಬೇಕಿಲ್ಲ ಎಂದು ಅನೇಕ ಬಾರಿ ಭಾರತೀಯ ಯೋಧರೊಂದಿಗೆ ವ್ಯಂಗ್ಯವಾಗಿ ಹೇಳುತ್ತಾರೆ. ಆ ವ್ಯಂಗ್ಯದಲ್ಲಿ ವಾಸ್ತವಾಂಶ ಅಡಗಿದೆ.

ಚೀನಾ, ಅಫ‌ಘಾನಿಸ್ಥಾನ, ಅರಬ್‌ ದೇಶಗಳು ಪಾಕಿಸ್ತಾನಿ ಜನರಲ್‌ಗ‌ಳೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿರುತ್ತವೆ. ಚುನಾಯಿತ ಸರಕಾರ ಇರುವಾಗ ರಾಜತಾಂತ್ರಿಕ ಶಿಷ್ಟಾಚಾರಕ್ಕೆ ವ್ಯತಿರಿಕ್ತವಾಗಿ ಸೇನೆಯೊಂದಿಗೆ ಹೇಗೆ ಸಂಪರ್ಕ ಸಾಧಿಸುವುದೆಂಬ ಮುಜುಗರ ನಮ್ಮ ಸರಕಾರದ್ದು. ಇದುವರೆಗೂ ಚುನಾಯಿತ ಸರ್ಕಾರದೊಂದಿಗೆ ಮಾತುಕತೆ ನಡೆಸುವ ನೀತಿಯನ್ನು ನಮ್ಮ ಸರ್ಕಾರಗಳು ಅನುಸರಿಸುತ್ತಾ ಬಂದಿವೆ. ಆದರೆ ಪ್ರಸ್ತುತ ಸನ್ನಿವೇಶ ದಲ್ಲಿ ಭಾರತ ಅನ್ಯ ದೇಶಗಳಂತೆ ಪಾಕ್‌ ಜನರಲ್‌ಗ‌ಳೊಂದಿಗೆ ಗಡಿಯಲ್ಲಿ ಸೌಹಾರ್ದತೆಗಾಗಿ ಮಾತುಕತೆ ನಡೆಸಿದರೆ ತಪ್ಪೇನಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಗಡಿಯಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಸರಕಾರ ಪಾಕಿಸ್ತಾನದ ಸೇನೆಯ ಜತೆ ಹಿಂಬಾಗಿಲ ಮೂಲಕ ವಾದರೂ ಮಾತುಕತೆ ನಡೆಸುವ ಅಡ್ಡ ಮಾರ್ಗ ಕಂಡುಕೊಳ್ಳ ಬೇಕಾಗಿದೆ. ಅದರಲ್ಲಿ ದೇಶದ ಹಿತವಿದೆ. ಅಧಿಕಾರದಿಂದ ಹೊರಗಿರುವ ಪ್ರತಿ ಪಕ್ಷಗಳು ಪಾಕಿಸ್ತಾನದೊಂದಿಗೆ ಕಠಿಣವಾಗಿ ವ್ಯವಹರಿಸಿ ಎಂದು ಹೇಳುವುದು ಸುಲಭ. ಆದರೆ ಗಡಿ ಜನರ ಎಣೆಯಿಲ್ಲದ ಬವಣೆಯ ಅರಿವಿರುವ ಮತ್ತು ಅವರನ್ನು ಸಂರಕ್ಷಿಸುವ ಜವಾಬ್ದಾರಿ ಹೊತ್ತ ಪ್ರಧಾನ ಮಂತ್ರಿ ಮತ್ತವರ ಸಂಪುಟದ ಸಹೋದ್ಯೋಗಿಗಳು ಎಚ್ಚರಿಕೆಯಿಂದ ಮಾತನಾಡು ವುದು ಮತ್ತು ವ್ಯವಹರಿಸುವುದು ಅಗತ್ಯ.

ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next