Advertisement

ಬ್ಯಾಚುಲರ್‌ ಆಫ್ ಕೊರೊನಾ

11:17 AM Mar 22, 2020 | Lakshmi GovindaRaj |

ಕೊರೊನಾಗೆ ವ್ಯಾಕ್ಸಿನ್ನಾದರೂ ಸಿಗಬಹುದು, ಆದರೆ, “ಒಂದು ಲೋಟ ರವೆಗೆ ಎಷ್ಟು ನೀರು ಹಾಕಬೇಕು?’ ಎಂಬ ಬ್ಯಾಚುಲರ್‌ ಜೀವನದ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ ದೊರಕಲಾರದೇನೋ ಎಂದುಕೊಳ್ಳುತ್ತಲೇ ಉಪ್ಪಿಟ್ಟನ್ನು ಬಾಯಿಗಿಟ್ಟುಕೊಂಡೆ. ಗಂಟಲು ಮತ್ತೆ “ಖೊಕ್‌ ಖೊಕ್‌’ ಎಂದಿತು…

Advertisement

ದೂರದ ಚೀನಾದಲ್ಲೆಲ್ಲೋ ಹುಟ್ಟಿದೆಯಂತೆ ಎಂಬ ಸುದ್ದಿ, ಕಿವಿಯಿಂದ ತೂರಿ ಮೆದುಳನ್ನು ತಲುಪುವುದರೊಳಗೇ ಕೊರೊನಾ ಅದ್ಯಾವುದೋ ಫ್ಲೈಟಿನಿಂದಿಳಿದು, ಇಡೀ ಬೆಂಗಳೂರಿನ ತುಂಬಾ ಓಡಾಡುತ್ತಿದೆ. ಜಪ್ಪಯ್ಯ ಎಂದರೂ ರಜೆ ನೀಡದ ಮ್ಯಾನೇಜ್‌ಮೆಂಟ್‌ನವರೂ ಮುಖಕ್ಕೊಂದು ಮಾಸ್ಕ್ ಧರಿಸಿಕೊಂಡು ಬಂದು ತುರ್ತು ಮೀಟಿಂಗ್‌ ನಡೆಸಿ, ಒಂದು ವಾರ “ವರ್ಕ್‌ ಫ್ರಂ ಹೋಂ’ ಮಾಡಿರೆಂದು ಘೋಷಿಸಿ, ಎರಡೆರಡು ಬಾರಿ ಕೈತೊಳೆದುಕೊಂಡು ಹೋಗಿಯೇಬಿಟ್ಟರು.

ಯಾವ ವಿಮಾನದ ಸಮೀಪಕ್ಕೂ ಹೋಗದ, ಕೆಮ್ಮು- ಸೀನುಗಳನ್ನೂ ತಾಕಿಸಿಕೊಳ್ಳದ ನನ್ನ ಬಾಳಲ್ಲಿ ನಿಜವಾದ ಕೊರೊನಾ ಅಟ್ಟಹಾಸ ಶುರುವಾಗಿದ್ದೇ ಆಗ. ರಜೆ ಘೋಷಣೆಯಾದ ಸಂಜೆಯೇ ಹೋಟೆಲ್‌ಗೆ ನುಗ್ಗಿದವನು ಸಣ್ಣ ಪಾರ್ಟಿಯ ಮಾದರಿಯಲ್ಲೊಂದಷ್ಟು ತಿಂದು, ನೆತ್ತಿಗೆ ಸಿಲುಕಿ, ಕೋಲ್ಡ್‌ ವಾಟರ್‌ ಕುಡಿದುಬಿಟ್ಟೆ. ತಣ್ಣೀರೆಂಬುದು, ಕೊರೊನಾ ಕಣ್ತೆರೆಯುವ ಮೊದಲಿನಿಂದಲೇ ಕೆಮ್ಮಿಗೆ ತಾಯಿ. ಇನ್ನು ಇಡೀ ಪ್ರಪಂಚವೇ ಕೆಮ್ಮುತ್ತಿರುವ ಹೊತ್ತಿನಲ್ಲಿ ಅದು ಸುಮ್ಮನಿದ್ದೀತೇ?

ಕುಡಿದು ಕೆಳಗಿಟ್ಟು ಬಿಲ್‌ ಪಾವತಿಸುವುದರೊಳಗೆ ಕೆಮ್ಮು ಪ್ರತ್ಯಕ್ಷ. ಮರುದಿನ ಬೆಳಗ್ಗೆ ಖೊಕ್‌ ಖೊಕ್‌ ಎನ್ನುತ್ತಾ ಎದ್ದವನಿಗೆ ನಮ್ಮ ಏರಿಯಾದಲ್ಲೇ ಕೊರೋನಾ ಸೋಂಕಿತನೊಬ್ಬ ಪತ್ತೆಯಾಗಿದ್ದಾನೆಂಬ ಆಘಾತಕಾರಿ ಸುದ್ದಿ ತಿಳಿಯಿತು. ಹೊರಗೆಲ್ಲೂ ತಿನ್ನಬಾರದು, ಕುರುಕಲು ತಿಂಡಿಗಳದಂತೂ ಹೆಸರೂ ಹೇಳಬಾರದು, ಥಂಡಿ ಪಾನೀಯಗಳಿಂದ ಕನಿಷ್ಠ ಒಂದು ಮೈಲು ದೂರವನ್ನಾದರೂ ಕಾಯ್ದುಕೊಳ್ಳಬೇಕು ಎಂಬೆಲ್ಲ ಕಟ್ಟಾಜ್ಞೆಗಳನ್ನು ಅಮ್ಮ ಫೋನಿನಲ್ಲೇ ಹೊರಡಿಸಿದಳು.

ಅಲ್ಲಿಗೆ ನನ್ನ ಮುಂದಿನ ಒಂದು ವಾರ, ವನವಾಸ- ಅಜ್ಞಾತವಾಸಗಳೆರಡೂ ಶುರುವಾಯಿತು. ಸರಿ, ಈಗ ತಿಂಡಿಶಾಸ್ತ್ರ ಆಗಬೇಕಲ್ಲ? ನನಗೆ ತಿಳಿದಿದ್ದ ಅಡುಗೆಯ ಪ್ರೀಕೆಜಿ ವಿದ್ಯೆಗಳು, ಉಪ್ಪಿಟ್ಟು- ಚಿತ್ರಾನ್ನಗಳು ಮಾತ್ರ. ಅದನ್ನೇ ಮಾಡೋಣವೆಂದು ಮುಖಕ್ಕೊಂದು ಕಚೀಫ‌ು ಸುತ್ತಿಕೊಂಡು ಸಮೀಪದ ಅಂಗಡಿಗೆ ಹೊರಟೆ. ಕೆಮ್ಮನ್ನು ಆದಷ್ಟೂ ಗಂಟಲಿನಲ್ಲೇ ತಡೆಹಿಡಿದು ಉಪ್ಪಿಟ್ಟು ಮಿಕ್ಸ್‌ ಕೊಡುವಂತೆ ಅಂಗಡಿಯಾತನಿಗೆ ಕೇಳಿದೆ.

Advertisement

ಆದರೆ, ಬಹಳ ಗಿರಾಕಿಗಳಿದ್ದರಿಂದ ಅಂಗಡಿಯಾತ ಇವನತ್ತ ಅಷ್ಟು ಬೇಗನೆ ತಿರುಗಲೇ ಇಲ್ಲ. ಗಂಟಲಿನಲ್ಲೇ ಒತ್ತಿ ಹಿಡಿದಿದ್ದ ಕೆಮ್ಮಾಗಲೇ ಸುನಾಮಿಯ ರೂಪ ತಾಳಿತ್ತು. ಇನ್ನೂ ತಡವಾದರೆ ಕಷ್ಟವೆಂದು ಬೇಗ ಕೊಡಿ ಎಂದು ಕೇಳಲು ಬಾಯೆ¤ರೆದದ್ದೇ ತಡ, ತಡೆಹಿಡಿದಿದ್ದ ಕೆಮ್ಮು ಖೊಕ್‌ ಖೊಕ್‌ ಎಂಬ ಭೀಕರ ಸದ್ದಿನೊಂದಿಗೆ ಹೊರಬಂತು. ಅಷ್ಟೇ! ಸುತ್ತ ನಿಂತವರೆಲ್ಲಾ ಹುಲಿಯ ಘರ್ಜನೆಯನ್ನು ಕೇಳಿದಂತೆ ಕಂಗಾಲಾಗಿ ನನ್ನತ್ತ ನೋಡತೊಡಗಿದರು.

ಅಂಗಡಿಯವನಂತೂ ಸಾಕ್ಷಾತ್‌ ಕೊರೊನಾ ವೈರಸ್ಸೇ ಐದಡಿ ಎತ್ತರಕ್ಕೆ ಬೆಳೆದು ಎದುರು ನಿಂತಿರುವಂತೆ ಬೆಚ್ಚಿಬಿದ್ದು, ಉಪ್ಪಿಟ್ಟು ಮಿಕ್ಸ್‌ನ ಪ್ಯಾಕೇಟಿನೊಂದಿಗೆ ಓಡೋಡಿಬಂದ. ಇನ್ನೊಂದು ಸಲ ಕೆಮ್ಮಿದರೂ ಇವರೆಲ್ಲಾ ಸೇರಿ ನನ್ನನ್ನು ಮುನ್ಸಿಪಾಲಿಟಿಯ ಗಾಡಿಗೆ ಹತ್ತಿಸುವುದು ಗ್ಯಾರಂಟಿ ಇತ್ತೇನೋ! ಒಲೆಯ ಮೇಲೆ ಮುಚ್ಚಿಟ್ಟ ಬಾಂಡ್ಲಿಯೊಳಗೆ ಉಪ್ಪಿಟ್ಟು ತಕತಕ ಬೇಯುತ್ತಾ ಸಿದ್ಧವಾಯಿತು. ತಟ್ಟೆಗೆ ಬಡಿಸಿಕೊಳ್ಳಲೆಂದು ಸೌಟು ಹಾಕಿ ನೋಡಿದರೆ ಉಪ್ಪಿಟ್ಟು ಎದುರುಗಡೆ ರಸ್ತೆಯಲ್ಲಿ ಮನೆಕಟ್ಟಲು ಕಲಸುತ್ತಿರುವ ಕಾಂಕ್ರೀಟಿನಂತೆ ಗಟ್ಟಿಗಟ್ಟಿ.

ಕೊರೊನಾಗೆ ವ್ಯಾಕ್ಸಿನ್ನಾದರೂ ಸಿಗಬಹುದು, ಆದರೆ, “ಒಂದು ಲೋಟ ರವೆಗೆ ಎಷ್ಟು ನೀರು ಹಾಕಬೇಕು?’ ಎಂಬ ಬ್ಯಾಚುಲರ್‌ ಜೀವನದ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ ದೊರಕ­ಲಾರದೇನೋ ಎಂದುಕೊಳ್ಳುತ್ತಲೇ ಉಪ್ಪಿಟ್ಟನ್ನು ಬಾಯಿ­ಗಿಟ್ಟುಕೊಂಡೆ. ಗಂಟಲು ಮತ್ತೆ “ಖೊಕ್‌ ಖೊಕ್‌’ ಎಂದಿತು. ಹೀಗೆ ಬೆಳಗಿನ ತಿಂಡಿಯಲ್ಲಿ ಅಮೋಘವಾಗಿ ಹೋದ ಮರ್ಯಾದೆಯನ್ನು ಮಧ್ಯಾಹ್ನ­ದೂಟದಲ್ಲಿ ಚಿತ್ರಾನ್ನ ಮಾಡುವ ಮೂಲಕ ಮರಳಿ ಗಳಿಸಬೇಕೆಂದು ಸಂಕಲ್ಪ ತೊಟ್ಟೆ.

ಒಂದು ಕೈಯಲ್ಲಿ ಬೋಂಡಾ ಕರಿಯುತ್ತಾ, ಇನ್ನೊಂದು ಕೈಯಲ್ಲಿ ಚಪಾತಿ ಹಿಟ್ಟಿನ ಕತ್ತು ಹಿಸುಕುವ ನಮ್ಮೂರಿನ ಅಡುಗೆ ಭಟ್ಟರೊಬ್ಬರನ್ನು ಮನಸ್ಸಿನಲ್ಲೇ ನೆನೆಯುತ್ತಾ ಒಗ್ಗರಣೆ ಬಾಣಲೆಯನ್ನು ಒಲೆಯ ಮೇಲಿಟ್ಟೆ. ಅದ್ಯಾವ ಜನ್ಮದ ಸಿಟ್ಟಿತ್ತೋ ಏನೋ, ನಾನು ಒಂದೊಂದೇ ಪದಾರ್ಥವನ್ನು ಹಾಕಿದಾಗಲೂ, ಬಾಣಲೆ ಫಿರಂಗಿಯಂತೆ ಢಮಾರೆಂದು ಸಿಡಿಯುತ್ತಾ ಬಿಸಿಯೆಣ್ಣೆಯಲ್ಲಿ ಬೆಂದ ಸಾಸಿವೆ ಕಾಳುಗಳನ್ನು ನನ್ನತ್ತ ಉಗುಳುತ್ತಿತ್ತು.

ಅದರಿಂದ ಪಾರಾಗುತ್ತಾ ಅಂತೂ ಇಂತೂ ಒಗ್ಗರಣೆ ಮುಗಿಸಿ ಅಕ್ಕಿ ತೊಳೆಯಲೆಂದು ನೋಡಿದರೆ ನೀರು ಇಷ್ಟೇ ಇಷ್ಟಿದೆ! ಸರಿ, ಹೆಂಡತಿಗೆ ಗಂಡ ಅಡ್ಜಸ್ಟ್‌ ಆಗದಿದ್ದರೆ ಗಂಡನೇ ಹೆಂಡತಿಗೆ ಹೊಂದಿಕೊಳ್ಳಬೇಕು ತಾನೇ? ಅಂತೆಯೇ ನೀರಿಗೆ ತಕ್ಕಷ್ಟು ಅಕ್ಕಿಯಿಟ್ಟು ಅಂತೂಇಂತೂ (ವಿ)ಚಿತ್ರಾನ್ನವೊಂದು ತಯಾರಾಯಿತು. ಆ ಕಡೆಯಿಂದ ಉಪ್ಪಿಟ್ಟಿನಂತೆ, ಈ ಕಡೆಯಿಂದ ಬಿಸಿಬೇಳೆ ಬಾತ್‌ನಂತೆ ಕಾಣುತ್ತಿದ್ದ ಅದನ್ನು ನೋಡಿದಾಗ ಬಹುಶಃ ಮನುಷ್ಯ ಮೊಟ್ಟಮೊದಲ ಬಾರಿಗೆ ತಯಾರಿಸಿದ ಚಿತ್ರಾನ್ನ ಹೀಗೇ ಇದ್ದಿರಬಹುದೇನೋ ಎಂಬ ಅನುಮಾನವುಂಟಾಯಿತು.

ಹೀಗೆ ಉಪ್ಪಿಟ್ಟು, ವಿಚಿತ್ರಾನ್ನಗಳ ತಿಂದು ಕೆಮ್ಮುತ್ತಿದ್ದವನಿಗೆ ಟೆರೇಸಿನಲ್ಲೇನೋ ಸದ್ದು ಕೇಳಿ ಹೊರಬಂದರೆ ತನ್ನ ಹುಡುಗಿಯ ಜೊತೆ ಫೋನಿನಲ್ಲಿ ಮಾತಾಡುತ್ತಿರುವ ಕೆಳಗಿನ ಮನೆಯ ನಾರ್ಥೀ ಹುಡುಗ ಕಣ್ಣಿಗೆ ಬಿದ್ದ. ಕೆಮ್ಮಿದಾಗ ಸಿರಪ್‌ ಕುಡಿಸಲಿಕ್ಕಾದರೂ ನನಗೊಬ್ಬ ಗೆಳತಿಯಿಲ್ಲವಲ್ಲಾ ಎಂದು ಹತಾಶೆಯಿಂದ ಮೊಬೈಲ್‌ ನೋಡಿಕೊಂಡವನಿಗೆ ಅಲ್ಲಿ ಅಮ್ಮ ಫಾರ್ವರ್ಡ್‌ ಮಾಡಿದ್ದ “ಶುಂಠಿಕಷಾಯ ಮಾಡಿಕೊಳ್ಳುವ ಬಗೆ’ ಎಂಬ ಮೆಸೇಜ್‌ ಕಣ್ಣಿಗೆ ಬಿತ್ತು. ಅಮ್ಮನೆಂಬ ಅಮ್ಮನೇ ಆರೈಕೆಗೆ ನಿಂತಿರುವಾಗ ಯಾವ ಕೊರೊನಾ ತಾನೇ ಏನು ಮಾಡೀತೆಂದು ಧೈರ್ಯಹೇಳಿಕೊಳ್ಳುತ್ತಾ ರೂಮಿನೊಳಗೆ ನಡೆದೆ.

ಅಡುಗೆ ಕಲಿಯಲು ಇದು ಸುಸಮಯ
-ಮನೆಯಿಂದ ಹೊರಗೆ ಆಹಾರ ಸೇವಿಸುವುದನ್ನು ಆದಷ್ಟು ಕಡಿಮೆಮಾಡಿ.
-ಸಾಧ್ಯವಾದಷ್ಟೂ ರೂಮ್‌ಗಳಲ್ಲೇ ಅಡುಗೆ ತಯಾರಿಸಿಕೊಳ್ಳಿ.
-ಮುಂಜಾನೆ ಬೇಗ ಎದ್ದು, ಒಂದಷ್ಟು ಅಡುಗೆ ಸಿದ್ಧತೆ.ಮಾಡಿಕೊಂಡರೆ, ಅನುಕೂಲವಾಗುತ್ತದೆ.
-ಅಮ್ಮನಿಂದ, ಪರಿಚಯಸ್ಥರಿಂದ ಮೊಬೈಲ್‌ನಲ್ಲಿಯೇ ಕುಕ್ಕಿಂಗ್‌ ಪಾಠ ಹೇಳಿಸಿಕೊಳ್ಳಿ.
-ಅಡುಗೆ ಕಲಿಕೆಗೆ ಕುಕಿಂಗ್‌ ಆ್ಯಪ್‌ಗ್ಳು, ವಿಡಿಯೊಗಳ ಮೊರೆ ಹೋಗಬಹುದು.

* ವಿನಾಯಕ ಅರಳಸುರಳಿ

Advertisement

Udayavani is now on Telegram. Click here to join our channel and stay updated with the latest news.

Next