Advertisement

ಹೊಸ ಸವಾಲಿನ ನಡುವೆ: ಭಾರತದಲ್ಲಿ ಶಿಶು ಮರಣ ಪ್ರಮಾಣ

12:47 AM Sep 12, 2020 | mahesh |

ಯಾವುದೇ ಒಂದು ದೇಶದಲ್ಲಿನ ಮಗು ಮತ್ತು ಶಿಶುಮರಣ ಪ್ರಮಾಣ ಎಷ್ಟಿದೆ ಎನ್ನುವುದರ ಮೇಲೆ ಆ ದೇಶದ ಒಟ್ಟಾರೆ ಆರೋಗ್ಯ ಚಿತ್ರಣವನ್ನು ಊಹಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಸ್ವಾತಂತ್ರ್ಯ ದೊರೆತು ದಶಕಗಳು ಕಳೆದ ನಂತರವೂ ಭಾರತದಲ್ಲಿ 5 ವರ್ಷಗಳಿಗಿಂತ ಕಡಿಮೆ ವಯೋಮಾನದ ಮಕ್ಕಳ ಮರಣ ಪ್ರಮಾಣ ನಿಜಕ್ಕೂ ಚಿಂತಾಜನಕ ಅಂಕಿಅಂಶಗಳನ್ನೇ ಎದುರಿಡುತ್ತಿತ್ತು.

Advertisement

ರಾಷ್ಟ್ರೀಯ ಸ್ತರದಲ್ಲಿ ಸ್ವಾಸ್ಥ್ಯ ಸವಲತ್ತುಗಳ ವಿಷಯದಲ್ಲಿ ಸರಕಾರಗಳು ಎಷ್ಟೇ ಭರವಸೆಯ ಚಿತ್ರಣಗಳನ್ನು, ವಾದಗಳನ್ನು ಎದುರಿಟ್ಟರೂ ಸಹ ಪರಿಸ್ಥಿತಿ ಬಿಗಡಾಯಿಸುತ್ತಲೇ ಸಾಗಿತ್ತು. ಆದರೆ ಕಳೆದ ಮೂರು ದಶಕಗಳ ಅವಧಿಯಲ್ಲಿ ಆರೋಗ್ಯ ಸೇವೆಗಳ ಸುಧಾರಣೆಗಾಗಿ ಮಾಡಲಾದ ಪ್ರಯತ್ನಗಳ ಸಕಾರಾತ್ಮಕ ಫ‌ಲಿತಾಂಶವು ಈಗ ಕಾಣಲಾರಂಭಿಸಿದೆ. ಈಗ ಮಕ್ಕಳು ಮತ್ತು ಶಿಶುಮರಣ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಕಾಣಿಸಿಕೊಳ್ಳುತ್ತಿದೆ. ವಿಶ್ವಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ 1990ರಿಂದ 2019ರ ನಡುವೆ ಮಕ್ಕಳ ಮರಣ ಪ್ರಮಾಣದಲ್ಲಿ ಗಣನೀಯ ಕುಸಿತ ಕಾಣಿಸಿಕೊಂಡಿದೆ. 1990ರಲ್ಲಿ ಶಿಶುಮರಣ ಪ್ರಮಾಣ ಪ್ರತಿ ಸಾವಿರಕ್ಕೆ 89ರಷ್ಟಿತ್ತು, ಕಳೆದ ವರ್ಷದ ವೇಳೆಗೆ ಇದು 28ಕ್ಕೆ ಇಳಿದಿದೆ. ಆದರೂ ಈಗಲೂ ಜಾಗತಿಕ ಶಿಶುಮರಣ ಪ್ರಮಾಣದಲ್ಲಿ ಮುಕ್ಕಾಲು ಭಾಗದಷ್ಟು ಘಟನೆಗಳು ಭಾರತ ಮತ್ತು ನೈಜೀರಿಯಾದಂಥ ರಾಷ್ಟ್ರಗಳಿಂದಲೇ ವರದಿ ಆಗುತ್ತಿವೆ.

ಭಾರತದಲ್ಲಿನ ಅಪಾರ ಪ್ರಮಾಣದ ಜನಸಂಖ್ಯೆಯನ್ನು ಪರಿಗಣಿಸಿದಾಗ ಯಾವ ಪ್ರಮಾಣವೂ ಚಿಕ್ಕದಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆದರೂ ಸೀಮಿತ ಸವಲತ್ತುಗಳ ನಡುವೆಯೂ ಗಮನಾರ್ಹ ಸುಧಾರಣೆ ಕಂಡುಬಂದಿರುವುದನ್ನು ಸ್ವಾಗತಿಸಲೇಬೇಕಿದೆ.

ಈಗ ಬಹುತೇಕ ಪ್ರಸವಗಳು ಆಸ್ಪತ್ರೆಯಲ್ಲೇ ಆಗತೊಡಗಿರುವುದು ಶಿಶುಮರಣ ಪ್ರಮಾಣ ತಗ್ಗುವುದಕ್ಕೆ ಪ್ರಮುಖ ಕಾರಣ. ಇನ್ನು ನವಜಾತ ಶಿಶುಗಳಿಗೆ ಲಸಿಕೆಯ ಲಭ್ಯತೆಯೂ ಅಪಾಯ ತಗ್ಗುವಂತೆ ಮಾಡಿದೆ. ಆದರೆ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರದ ಲಭ್ಯತೆ ಬಹಳ ಮುಖ್ಯವಾಗುತ್ತದೆ. ತಾಯಿಯಲ್ಲಿನ ಅಪೌಷ್ಟಿಕತೆಯೂ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿಬಿಡುತ್ತದೆ. ಈ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಪೂರೈಕೆಯ ವ್ಯವಸ್ಥೆಯನ್ನು ಸದೃಢಗೊಳಿಸಬೇಕಾದ ಅಗತ್ಯವಿದೆ.

ಈ ಸುಧಾರಣೆಯ ನಡುವೆಯೇ ಕೋವಿಡ್‌ ಬಂದಿರುವುದು ಆತಂಕದ ವಿಚಾರವೇ ಸರಿ. ಏಕೆಂದರೆ, ಕೋವಿಡ್‌ ಸಮಯದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದದ್ದು, ನಿರುದ್ಯೋಗದ ಸಮಸ್ಯೆ ಎದುರಾಗಿದ್ದು, ಆಸ್ಪತ್ರೆಗಳಿಗೆ ಹೋಗಲು ಜನ ಹಿಂಜರಿದದ್ದು, ಆರೋಗ್ಯ ವ್ಯವಸ್ಥೆಯ ಗಮನವೆಲ್ಲ ಕೋವಿಡ್‌ಗೆà ಮೀಸಲಾಗಿರುವುದು… ಇವೆಲ್ಲ ಅಂಶಗಳನ್ನು ಪರಿಗಣಿಸಿದಾಗ, ಶಿಶುಮರಣ ಪ್ರಮಾಣದಲ್ಲಿ ಮತ್ತೆ ಏರಿಕೆಯಾಗುವ ಸಂಭಾವ್ಯತೆ ಇದೆ. ಈ ಕಾರಣಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೈಜೋಡಿಸಿ ಸ್ವಾಸ್ಥ್ಯ ಸೇವೆಗಳ ಸುಧಾರಣೆಗೆ ಕಟಿಬದ್ಧವಾಗಿ ಮುನ್ನಡೆಯಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next