ದೊಡ್ಡ ಮಕ್ಕಳು, ಚಿಕ್ಕಮಕ್ಕಳನ್ನು ಹೇಗೆ ಒಪ್ಪಿಕೊಳ್ಳುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲಿ ಬಾಲಿವುಡ್ ನಟಿ ದಿವ್ಯಾ ದತ್ತಾರ ಬದುಕಿನ ಕಥೆ ಇದೆ. ಮನೆಗೆ ಹೊಸ ಕಂದ ಬಂದಾಗ ಬಾಲ್ಯದಲ್ಲಿ ತಾನು ಹೇಗೆಲ್ಲಾ ವರ್ತಿಸಿದ್ದೆ ಎಂಬುದನ್ನು ದಿವ್ಯಾ ಹೇಳಿಕೊಂಡಿದ್ದಾರೆ…
Advertisement
ನಮ್ಮ ಮನೆಯಲ್ಲಿದ್ದವರು ಮೂರೇ ಜನ: ನಾನು, ಅಪ್ಪ, ಅಮ್ಮ. ಆ ದಿನಗಳಲ್ಲಿ, ಇಬ್ಬರ ಪ್ರೀತಿಯೂ ನನಗೆ ದಂಡಿಯಾಗಿ ಸಿಗುತ್ತಿತ್ತು. ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು. ಅದರ ಮಧ್ಯೆಯೇ ಸಮಯ ಹೊಂದಿಸಿಕೊಂಡು ನನ್ನೊಂದಿಗೆ ಆಟಕ್ಕೂ ಬರುತ್ತಿದ್ದರು. ಜೊತೆಯಲ್ಲಿ ಇದ್ದಾಗಲೆಲ್ಲಾ ಅಮ್ಮ ಚಿತ್ರಗೀತೆಯನ್ನೋ, ಭಕ್ತಿಗೀತೆಯನ್ನೋ, ಜೋಗುಳವನ್ನೋ ಹಾಡುತ್ತ ನನ್ನನ್ನು ಖುಷಿಪಡಿಸುತ್ತಿದ್ದಳು. ಅಪ್ಪ- ಕಥೆ ಹೇಳುತ್ತ, ಕೂಸುಮರಿ ಆಡಿಸುತ್ತ, ತಮಾಷೆಯ ಫೈಟಿಂಗ್ ಮಾಡುತ್ತ, ಸೋತು ಹೋದಂತೆ ನಟಿಸುತ್ತ ನನ್ನ ಸಡಗರ ಹೆಚ್ಚಿಸುತ್ತಿದ್ದರು.
ಅವತ್ತೂಂದು ದಿನ, ಮೊದಲೇ ಎಲ್ಲವೂ “ಫಿಕ್ಸ್’ ಆಗಿತ್ತು ಅನ್ನುವಂತೆ ಎಲ್ಲರೂ ಆಸ್ಪತ್ರೆಗೆ ಹೋದೆವು. ಅಮ್ಮ ಒಮ್ಮೆ ನನ್ನ ತಲೆ ನೇವರಿಸಿ, ಹಣೆಗೆ ಮುತ್ತಿಟ್ಟು, ಪಾಪೂನ ಹುಷಾರಾಗಿ ನೋಡ್ಕೊಳ್ಳಿ ಎಂದು ಚಿಕ್ಕಮ್ಮನಿಗೆ ಎರಡೆರಡು ಬಾರಿ ಹೇಳಿ, ನರ್ಸ್‌ಗಳ ಜೊತೆ ಹೋಗಿಬಿಟ್ಟಳು. ಅವತ್ತು ಐದಾರು ಗಂಟೆಗಳ ಕಾಲ ಕುಟುಂಬದವರೆಲ್ಲ ವಾರ್ಡ್‌ನ ಹೊರಗೇ ಇದ್ದೆವು. ಅಪ್ಪ, ಚಡಪಡಿಸುತ್ತ, ನಿಂತಲ್ಲಿ ನಿಲ್ಲದೆ ಓಡಾಡುತ್ತಿದ್ದರು. ಏನೂ ತೊಂದರೆ ಆಗದಿದ್ರೆ ಸಾಕು ಎಂದು ಎಲ್ಲರಿಗೂ ಮತ್ತೆಮತ್ತೆ ಹೇಳುತ್ತಿದ್ದರು.
Related Articles
Advertisement
ಪಾಪು ಮನೆಗೆ ಬಂದ ಮೇಲೆ ಅಮ್ಮನ ವರ್ತನೆಯಲ್ಲಿ ತುಂಬಾ ಬದಲಾವಣೆ ಕಾಣಿಸ್ತು. ಮುಟ್ಟಿದರೆ ಜಿಬಜಿಬ ಅನ್ನುತ್ತಿದ್ದ, ಥೇಟ್ ಗೊಂಬೆಯಂತೆಯೇ ಇದ್ದ ಆ ಮಗುವಿಗೆ ಸ್ನಾನ ಮಾಡಿಸುವುದು, ಕೈ-ಕಾಲು ಭುಜವನ್ನು ಮಸಾಜ್ ಮಾಡುವುದು, ಎಣ್ಣೆ ಹಾಕುವುದು, ಹಾಲು ಕುಡಿಸುವುದು, ಲಾಲಿ ಹಾಡಿ ಮಲಗಿಸುವುದು, ಪ್ರತಿಕ್ಷಣವೂ ಮುದ್ದು ಮಾಡುವುದು… ಇದಿಷ್ಟೇ ಅಮ್ಮನ ಕೆಲಸ ಆಗಿಬಿಟ್ಟಿತ್ತು. ಈ ಮೊದಲು ನನಗಾಗಿ ಹಾಡುತ್ತಿದ್ದ ಹಾಡುಗಳನ್ನೆಲ್ಲ ಮರೆತು, ಪಾಪುಗೆಂದೇ ಅಮ್ಮ ಹೊಸ ಹಾಡುಗಳನ್ನು ಕಲಿತಿದ್ದಳು. ಎಷ್ಟೋ ಬಾರಿ, ಪುಟ್ಟ ಮಗುವಿನ ಆರೈಕೆಯ ನೆಪದಲ್ಲಿ ಅಪ್ಪ-ಅಮ್ಮ ಇಬ್ಬರೂ ನನ್ನನ್ನು ನೆಗ್ಲೆಕ್ಟ್ ಮಾಡುತ್ತಿದ್ದಾರೆ ಅನಿಸುತ್ತಿತ್ತು.
ಕೆಲವೊಮ್ಮೆ, ಅಮ್ಮನ ಮೇಲೆ – ಆ ಮಗುವಿನ ಮೇಲೆ ವಿಪರೀತ ಸಿಟ್ಟು ಬರುತ್ತಿತ್ತು. ಒಮ್ಮೆಯಂತೂ, ಜೋಗುಳ ಹಾಡುತ್ತಿದ್ದ ಅಮ್ಮನ ಬಳಿಗೆ ಹೋಗಿ- “ಈ ಪಾಪು ಬೇಡ. ಯಾರಿಗಾದ್ರೂ ಕೊಟ್ಟುಬಿಡು. ಇದು ಬಂದ್ಮೇಲೆ ನೀನು ನನ್ನ ಜೊತೆ ಸರಿಯಾಗಿ ಮಾತೇ ಆಡ್ತಿಲ್ಲ. ಐ ಹೇಟ್ ಯೂ’ ಅಂದುಬಿಟ್ಟಿದ್ದೆ. ನನ್ನ ಒರಟು ಮಾತು ಕೇಳಿ, ಅಮ್ಮನಷ್ಟೇ ಅಲ್ಲ; ಅಪ್ಪ ಕೂಡ ಗಾಬರಿಯಾದಂತೆ ಕಂಡುಬಂದರು.
ಅಂದಿನಿಂದ ಆ ಪಾಪುವಿನ ಮೇಲೆ ಸಿಡುಕುವುದು, ಅಪ್ಪ-ಅಮ್ಮನಿಗೆ ಕಾಣಿಸದಂತೆ ಮೊಟಕುವುದು, ಅದರ ಗೊಂಬೆಗಳನ್ನು ಕಿತ್ತು ಎಸೆಯುವುದೇ ನನ್ನ ಕೆಲಸ ಆಯಿತು. ಈ ವೇಳೆಗೆ ಪಾಪುಗೆ ಎಂಟು ತಿಂಗಳಾಗಿತ್ತು. ಅದು ತೆವಳುತ್ತ, ಅಂಬೆಗಾಲಿಡುತ್ತ, ಉರುಳಾಡುತ್ತ ಬೆಳೆಯುತ್ತಿತ್ತು. ಅಪ್ಪ-ಅಮ್ಮನ ಪ್ರೀತಿ ಕಡಿಮೆ ಸಿಗಲು ಈ ಮಗುವೇ ಕಾರಣ ಎಂದು ಭಾವಿಸಿ, ಅದರಿಂದ ನಾನು ಅಂತರ ಕಾಯ್ದುಕೊಂಡಿದ್ದೆ. “ಈ ಪಾಪು ದೇವರು ಕೊಟ್ಟಿರುವ ಗಿಫ್ಟ್, ಇದು ನಿನ್ನ ತಮ್ಮ, ನಿನಗೆ ಸಿಕ್ಕಿರುವ ಮಾತಾಡುವ ಗೊಂಬೆ’ ಎಂದೆಲ್ಲಾ ಅಪ್ಪ ಹೇಳಿದರೂ, ಪಾಪುವನ್ನು ನಾನು ಆದಷ್ಟೂ ದೂರವೇ ಇಟ್ಟಿದ್ದೆ.
ಅವತ್ತೂಂದು ಸಂಜೆ, ಅಪ್ಪ ಬೇಗನೆ ಬಂದರು. ಆ ವೇಳೆಗೆ ಅಮ್ಮನೂ ರೆಡಿಯಾಗಿದ್ದಳು. ನನ್ನನ್ನು ಹತ್ತಿರ ಕರೆದ ಅಪ್ಪ- “ಅರ್ಜೆಂಟಾಗಿ ಸಿಟಿಗೆ ಹೋಗಬೇಕಾಗಿದೆ. ನಾವು ವಾಪಸ್ ಬರುವತನಕ ಮಗೂನ ಹುಷಾರಾಗಿ ನೋಡಿಕೋ…’ ಇಷ್ಟು ಹೇಳಿ ಅವರಿಬ್ಬರೂ ಹೋಗಿಯೇಬಿಟ್ಟರು. ಹೋಗುವ ಮುನ್ನ- ಆಸ್ಪತ್ರೇಲಿ, ಪಾಪೂನ ಹುಷಾರಾಗಿ ನೋಡ್ಕೊàತೇನೆ ಅಂತ ಪ್ರಾಮಿಸ್ ಮಾಡಿದ್ದೆ ಅಲ್ವಾ? ಎಂದು ನೆನಪು ಮಾಡಿಯೇ ಹೋದರು.
ಮನೆಯೊಳಗೆ, ನಾನು-ಪಾಪು ಇಬ್ಬರೇ. ಅಪ್ಪ-ಅಮ್ಮನ ಪ್ರೀತಿಯನ್ನು ನನ್ನಿಂದ ಕಿತ್ಕೊಂಡ ಎಂಬ ಅಸಹನೆ ಇತ್ತಲ್ಲ; ಅದೇ ಕಾರಣದಿಂದ, ಪಾಪುವನ್ನು ತಿರುಗಿ ಕೂಡ ನೋಡದೆ, ಅವನ ಸುತ್ತ ಒಂದಷ್ಟು ಆಟದ ಗೊಂಬೆಗಳನ್ನು ಎಸೆದು, ಏನಾದ್ರೂ ಮಾಡ್ಕೊà ಅಂದು, ಒಂದು ಮೂಲೇಲಿ ಕುಳಿತು ಕಾಮಿಕ್ಸ್ ಓದತೊಡಗಿದೆ. ಎರಡೇ ನಿಮಿಷದಲ್ಲಿ ಅಂಬೆಗಾಲಿಡುತ್ತಾ ಪಾಪು ಅಲ್ಲಿಗೆ ಬಂದ. ದುರುಗುಟ್ಟಿಕೊಂಡು ನೋಡಿದೆ. “ನಂಗಿಷ್ಟ ಇಲ್ಲ ನೀನು. ಹೋಗೋ ಆ ಕಡೆ. ಬೇಕಿಲ್ಲ ನೀನು’ ಎಂದು ಗದರಿಸಿದೆ. ಅವನು, ಬೊಚ್ಚು ಬಾಯಲ್ಲಿ ನಗುತ್ತ ಎರಡೂ ಕೈ ಚಾಚಿದ. ಎತ್ತಿಕೋ ಎಂಬಂತೆ ಮುಖ ಮಾಡಿದ. ಒಂದೇಟು ಹಾಕಿ, ಬೇಡ ಹೋಗ್ ಎಂದು ಅಬ್ಬರಿಸಿ ಇನ್ನೊಂದು ಮೂಲೆಗೆ ಹೋದೆ. ಎರಡೇ ನಿಮಿಷ, ಪಾಪು ಅಲ್ಲಿಗೂ ಬಂದ. ಮತ್ತೆ ಕೈ ಚಾಚಿದ. ಈ ಬಾರಿ ಸ್ವಲ್ಪ ಜೋರಾಗಿಯೇ ಹೊಡೆದು, ಇನ್ನೊಂದು ಮೂಲೆಗೆ ಹೋಗಿಬಿಟ್ಟೆ. ಒಂದು ನಿಮಿಷ ಹೋ… ಎಂದು ಅತ್ತವನು, ಮತ್ತೆ ಅಂಬೆಗಾಲಿಡುತ್ತ, ಎರಡು ಬಾರಿ ಜೋಲಿ ತಪ್ಪಿ ಬಿದ್ದರೂ ಮತ್ತೆ ನನ್ನೆಡೆಗೇ ಬಂದ. ಅವನನ್ನು ನೋಡಲೇಬಾರದೆಂದು ಪುಸ್ತಕ ಹಿಡಿದು ಕುಳಿತಿದ್ದೆ. ಅವನು ಒಂದು ಕೈಯಲ್ಲಿ ಮೆಲ್ಲಗೆ ನನ್ನನ್ನು ಹಿಡಿದುಕೊಂಡು, ಪುಸ್ತಕವನ್ನು ಕಿತ್ತಿಟ್ಟ. ನೋಡಿದರೆ- ಮಗು ಅಳುಮುಖದಲ್ಲಿ ನೋಡುತ್ತಿದ್ದ. ಎತ್ತಿಕೋ ಎಂಬಂತೆ ಸಂಜ್ಞೆ ಮಾಡುತ್ತಿದ್ದ. ಈ ಬಾರಿ ಅದೇಕೋ ಕಾಣೆ ಪಾಪ ಅನ್ನಿಸಿಬಿಡು¤. ಅದೇನೇ ಮಾಡಿದರೂ ಅವನನ್ನು ಆಚೆ ನೂಕಲು ಮನಸ್ಸೇ ಬರಲಿಲ್ಲ. ನನಗೇ ಗೊತ್ತಿಲ್ಲದಂತೆ “ಚಿನ್ನು’ ಎಂದು ಉದ^ರಿಸಿ, ಆ ಮಗುವನ್ನು ಬಾಚಿ ತಬ್ಬಿಕೊಂಡಿದ್ದೆ. ಇಂಥದೊಂದು ಕ್ಷಣಕ್ಕೇ ಕಾದಿದ್ದವನಂತೆ, ಪಾಪು ಖೀಲ್ಲನೆ ನಗುತ್ತ, ಗಟ್ಟಿಯಾಗಿ ನನ್ನ ಕೈ ಹಿಡಿದುಕೊಂಡ. ಅವನ ಗೊಂಬೆಗಳನ್ನೆಲ್ಲ ಒಂದೆಡೆ ರಾಶಿ ಹಾಕಿ, ಅವನೊಂದಿಗೆ ಆಡಲು ಕುಳಿತೆ. ನಂತರ, ನಮ್ಮದೇ ಭಾಷೆಯಲ್ಲಿ ಮಾತಾಡಿಕೊಂಡೆವು. ನಮಗಿಷ್ಟವಾದಂತೆ ಆಟವಾಡಿದೆವು. ಪಾಪು, ನಾನು ಹೇಳಿದಂತೆಲ್ಲಾ ಕೇಳುತ್ತ, ಮಾ… ಮಾ… ಅನ್ನುತ್ತ ಹಾಲ್‌ನ ಉದ್ದಕ್ಕೂ ಸರಿದಾಡಿದ.
ಅವನು ಸೂಸು ಮಾಡಿಕೊಂಡಿರುವುದು ಆಗಲೇ ಗೊತ್ತಾಯಿತು. ತಕ್ಷಣ ಅಮ್ಮನ ರೂಂಗೆ ಹೋಗಿ, ಹೊಸ ಬಟ್ಟೆ ತಂದು, ಹಳೆಯದನ್ನು ತೆಗೆದು, ನನಗೆ ತೋಚಿದಂತೆ ಬಟ್ಟೆ ತೊಡಿಸಿದೆ. ಅಮ್ಮ ಕೊಟ್ಟು ಹೋಗಿದ್ದ ಹಾಲು ಕುಡಿಸಿದೆ. ಅಮ್ಮ, ಮಗುವನ್ನು ಟ್ರೀಟ್ ಮಾಡುತ್ತಿದ್ದಳಲ್ಲ; ಅದನ್ನೇ ನೆನಪಿಸಿಕೊಂಡು ನಾನೂ ಕೆಲಸ ಮಾಡುತ್ತಿದ್ದೆ.ಹೀಗೆ ಹಾಲು ಕುಡಿಸಿದ ಮೇಲೆ, ಹಾಸಿಗೆಯ ಮೇಲೆ, ತೊಟ್ಟಿಲಲ್ಲಿ ಅಥವಾ ಚಾಪೆಯ ಮೇಲೆ ಮಲಗಿಸಿ ಹಾಡು ಹೇಳುತ್ತಾ ಚುಕ್ಕು ತಟ್ಟುತ್ತಿದ್ದಳು ಅಮ್ಮ. ನಾನೂ ಅದೇ ಥರ-ಪಾಪುವನ್ನು ಹುಷಾರಾಗಿ ಮಲಗಿಸಿ, ಸುತ್ತಲೂ ಗೊಂಬೆಗಳನ್ನಿಟ್ಟು, ಅವನ ಮಗ್ಗಲಲ್ಲೇ ಕುಳಿತು ಚುಕ್ಕು ತಟ್ಟುವ ವೇಳೆಗೆ ಅಮ್ಮ ಹೇಳುತ್ತಿದ್ದ ಹಾಡು ನೆನಪಾಗಿಬಿಟ್ಟಿತು. ಅಷ್ಟೆ: ಮೈಮರೆತು ಹಾಡತೊಡಗಿದೆ. ಪಾಪು, ನನ್ನ ಕೈ ಬೆರಳನ್ನು ಭದ್ರವಾಗಿ ಹಿಡಿದುಕೊಂಡೇ ನಿದ್ರೆಗೆ ಜಾರಿದ್ದ. ಥೇಟ್ ಅಮ್ಮನಂತೆಯೇ ನನ್ ರಾಜ, ನನ್ ಚಿನ್ನು ಎಂದು ಕರೆದು ಮಗುವಿನ ಹಣೆಗೆ ಮುತ್ತಿಡುತ್ತಿದ್ದಂತೆಯೇ ಬಾಗಿಲ ಬಳಿ ಸದ್ದಾಯಿತು. ಅಪ್ಪ-ಅಮ್ಮ ಇಬ್ಬರೂ ಭಾವಪರವಶರಾಗಿ, ಕಣ್ತುಂಬಿಕೊಂಡು ನಿಂತಿದ್ದರು! (ಪಾಪುವನ್ನು ನಾನು ನೋಡಿಕೊಳ್ತೀನೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಅವರು ಹೊರಗೆ ಹೋಗುವುದಾಗಿ ಸುಳ್ಳು ಹೇಳಿದ್ದರು. ಬಾಗಿಲ ಮರೆಯಲ್ಲಿ ನಿಂತುಕೊಂಡ ಎಲ್ಲವನ್ನೂ ನೋಡಿದ್ದರು ಎಂದು ಅದೆಷ್ಟೋ ದಿನಗಳ ನಂತರ ಗೊತ್ತಾಯಿತು!) ಆಧಾರ: ದಿವ್ಯಾ ದತ್ತ ಅವರು ಬರೆದ “ಮಿ ಆ್ಯಂಡ್ ಮಾ’ ಪುಸ್ತಕ – ಎ.ಆರ್.ಮಣಿಕಾಂತ್