Advertisement

ಬಾಬು ನೆನಪಲ್ಲಿ; ಕುಚ್ಚಿಕುಗಳ ಜೊತೆಯಲ್ಲಿ

06:00 AM Jun 29, 2018 | Team Udayavani |

ಸುಮಾರು ಆರು ವರ್ಷಗಳ ಹಿಂದೆ ಆರಂಭವಾದ “ಕುಚ್ಚಿಕೂ ಕುಚ್ಚಿಕು’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರ ಜುಲೈ 6ರಂದು ತೆರೆಕಾಣುತ್ತಿದೆ. ಹಿರಿಯ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ಕನಸಿನ ಕೂಸಾಗಿದ್ದ ಈ ಸಿನಿಮಾದ ಬಿಡುಗಡೆಯನ್ನು, ಜನರ ಪ್ರತಿಕ್ರಿಯೆ ಹೇಗಿರುತ್ತದೆಂಬುದನ್ನು ನೋಡಬೇಕು ಎಂದು ಕಾದಿದ್ದ ಬಾಬು ಅವರ ಆಸೆ ಈಡೇರಲಿಲ್ಲ. ಸಿನಿಮಾ ಬಿಡುಗಡೆಗೆ ಮುನ್ನವೇ ಇಹಲೋಕ ತ್ಯಜಿಸಿದರು. ಈಗ ಬಾಬು ಅವರ ಡ್ರೀಮ್‌ ಪ್ರಾಜೆಕ್ಟ್ ಆಗಿದ್ದ “ಕುಚ್ಚಿಕೂ ಕುಚ್ಚಿಕು’ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ನಿರ್ಮಾಪಕ ಕೃಷ್ಣಮೂರ್ತಿ ಸಿನಿಮಾ ಬಿಡುಗಡೆ ಮಾಡಲು ಮುಂದಾದಾಗ ಅವರಿಗೆ ನಿರ್ಮಾಪಕ ಸುರೇಶ್‌ ಗೌಡ್ರು ಸಾಥ್‌ ನೀಡಿದ್ದಾರೆ. ಈ ವಿಷಯವನ್ನು ಹಂಚಿಕೊಳ್ಳಲು ಚಿತ್ರತಂಡ ಇತ್ತೀಚೆಗೆ ಮಾಧ್ಯಮ ಮುಂದೆ ಬಂದಿತ್ತು. ವೇದಿಕೆ ಮೇಲೆ ನಿರ್ದೇಶಕರಿಲ್ಲ ಎಂಬ ಕೊರತೆ ಕಾಡಬಾರದೆಂಬ ಕಾರಣಕ್ಕೆ ಕುರ್ಚಿಯೊಂದರ ಮೇಲೆ ಡಿ.ಬಾಬು ಅವರ ಫೋಟೋವನ್ನಿಟ್ಟೇ ಪತ್ರಿಕಾಗೋಷ್ಠಿ ನಡೆಸಲಾಯಿತು.

Advertisement

ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಕೃಷ್ಣಮೂರ್ತಿ, “ಸಿನಿಮಾ ಕಾರಣಾಂತರಗಳಿಂದ ತಡವಾಗಿದೆ. ಈಗ ಬಿಡುಗಡೆ ಮಾಡುತ್ತಿದ್ದೇವೆ. ಒಳ್ಳೆಯ ಕಂಟೆಂಟ್‌ನೊಂದಿಗೆ ಈ ಸಿನಿಮಾ ಮಾಡಿದ್ದಾರೆ ಬಾಬು ಅವರು. ಸಿನಿಮಾದ ಬಿಡುಗಡೆಗೆ ನಿರ್ಮಾಪಕ ಸುರೇಶ್‌ ಗೌಡ್ರು ಸಹಕಾರ ನೀಡುತ್ತಿದ್ದಾರೆ’ ಎಂದರು. ಈ ಚಿತ್ರದಲ್ಲಿ ಜೆಕೆ ಹಾಗೂ ಪ್ರವೀಣ್‌ ನಾಯಕರಾಗಿ ನಟಿಸಿದ್ದಾರೆ. ಆರು ವರ್ಷಗಳ ಹಿಂದೆ ಇಬ್ಬರಿಗೂ ಇದು ಹೊಸ ಸಿನಿಮಾ. ನಾಯಕರಾದ ಪ್ರವೀಣ್‌ ಈ ಸಿನಿಮಾಕ್ಕೆ ಆಯ್ಕೆಯಾಗಿದ್ದು, ಬಾಬು ಅವರು ತಮ್ಮನ್ನು ಪಾತ್ರಕ್ಕೆ ತಯಾರು ಮಾಡಿದ ರೀತಿ, ಸಿನಿಮಾ ಮುಗಿದ ನಂತರವೂ ಫೋನ್‌ ಮಾಡುತ್ತಾ ಹಲವು ವಿಚಾರಗಳನ್ನು ಮಾತನಾಡುತ್ತಿದ್ದ ಬಾಬು ಅವರನ್ನು ನೆನಪಿಸಿಕೊಂಡರು. ಮತ್ತೂಬ್ಬ ನಟ ಜೆಕೆಗೆ ಆರಂಭದ ದಿನಗಳಲ್ಲೇ ದೊಡ್ಡ ನಿರ್ದೇಶಕರ ಚಿತ್ರದಲ್ಲಿ ಅವಕಾಶ ಸಿಕ್ಕ ಖುಷಿ ಇದೆಯಂತೆ. “ಬಾಬು ಅವರು ಆಡಿದ ಮಾತುಗಳು ಇವತ್ತಿಗೂ ಮನದಲ್ಲಿದೆ. ದೊಡ್ಡ ನಿರ್ದೇಶಕ ಚಿತ್ರದಲ್ಲಿ ನಟಿಸಿದ ಖುಷಿ ಇದೆ. ಅವರಿಂದ ಸಾಕಷ್ಟು ಕಲಿತಿದ್ದೇವೆ’ ಎಂದರು. 

“ಕುಚ್ಚಿಕೂ ಕುಚ್ಚಿಕು’ ಚಿತ್ರದಲ್ಲಿ ಡಿ.ರಾಜೇಂದ್ರ ಬಾಬು ಅವರ ಮಗಳು ನಕ್ಷತ್ರ (ದೀಪ್ತಿ) ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ತಂದೆಯ ಚಿತ್ರದಲ್ಲಿ ನಟಿಸಿದ ಖುಷಿ ಅವರಿಗಿದೆಯಂತೆ. ಮೊದಲ ದಿನ ಚಿತ್ರೀಕರಣ ನಂತರ ನಕ್ಷತ್ರ, “ಹೇಗಿತ್ತಪ್ಪ ನನ್ನ ಪರ್‌ಫಾರ್ಮೆನ್ಸ್‌’ ಎಂದು ಕೇಳಿದರಂತೆ. ಆಗ ಬಾಬು ಅವರು, “ಚೆನ್ನಾಗಿ ಮಾಡಿದ್ದೀಯ ಮಗಳೇ, ನಿನಗೆ ಒಳ್ಳೆಯ ಭವಿಷ್ಯವಿದೆ’ ಎಂದಿದ್ದರು ಎನ್ನುತ್ತಾ ಫ್ಲ್ಯಾಶ್‌ಬ್ಯಾಕ್‌ಗೆ 

ಜಾರಿದರು. ಚಿತ್ರದಲ್ಲಿ ಬಾಬು ಅವರ ಪತ್ನಿ ಸುಮಿತ್ರ ಅವರು ಕೂಡಾ ನಟಿಸಿದ್ದಾರೆ. ರಮೇಶ್‌ ಭಟ್‌ ಅವರಿಗೂ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಚಿತ್ರಕ್ಕೆ ಸಂಗೀತ ನೀಡಿರುವ ಹಂಸಲೇಖ ಅವರು ಬಾಬು ಅವರ ಜೊತೆಗಿನ ತಮ್ಮ ಆತ್ಮೀಯತೆಯನ್ನು ನೆನಪಿಸಿಕೊಂಡರು. ಚಿತ್ರಕ್ಕೆ ನಂದಕುಮಾರ್‌ ಛಾಯಾಗ್ರಹಣವಿದ್ದು, ತಮ್ಮ ಗುರುಗಳ ಚಿತ್ರ ಬಿಡುಗಡೆಯಾಗುತ್ತಿರುವ ಖುಷಿ ಅವರಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next