ಮುಲ್ತಾನ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ಥಾನ ತಂಡ ಗೆಲುವು ಸಾಧಿಸಿದೆ. ಪಾಕಿಸ್ಥಾನ ನಾಯಕ ಬಾಬರ್ ಅಜಂ ಶತಕ ಬಾರಿಸಿ ತಂಡದ ವಿಜಯಕ್ಕೆ ಸಹಕಾರಿಯಾದರು.
ಇದೇ ವೇಳೆ ಬಾಬರ್ ಅಜಂ ಅವರು ಭಾರತೀಯ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರ ದಾಖಲೆಯೊಂದನ್ನು ಮುರಿದರು. ಏಕದಿನ ತಂಡದ ನಾಯಕನಾಗಿ ಅತೀ ಕಡಿಮೆ ಇನ್ನಿಂಗ್ಸ್ ನಲ್ಲಿ ಒಂದು ಸಾವಿರ ರನ್ ಗಳಿಸಿದ ಸಾಧನೆ ಮಾಡಿದರು. ಬಾಬರ್ 13ನೇ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರೆ, ವಿರಾಟ್ ಕೊಹ್ಲಿ ಅವರು 17 ಇನ್ನಿಂಗ್ಸ್ ಗಳಲ್ಲಿ ಸಾವಿರ ರನ್ ಗಡಿ ದಾಟಿದ್ದರು.
ಮುಲ್ತಾನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ ಶಾಯ್ ಹೋಪ್ ಶತಕದ ನೆರವಿನಿಂದ ಎಂಟು ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿತು. ಹೋಪ್ 127 ರನ್ ಗಳಿಸಿದರೆ, ಶಮ್ರಾಹ್ ಬ್ರೂಕ್ಸ್ 70 ರನ್ ಗಳಿಸಿದರು.
ಇದನ್ನೂ ಓದಿ:ವಿಶ್ವದಾಖಲೆ: ಉತ್ತರಾಖಂಡ ವಿರುದ್ದ 725 ರನ್ ಅಂತರದಿಂದ ಗೆದ್ದ ಮುಂಬೈ ರಣಜಿ ತಂಡ
ಗುರಿ ಬೆನ್ನತ್ತಿದ ಪಾಕಿಸ್ಥಾನ 49.2 ಓವರ್ ಗಳಲ್ಲಿ 306 ರನ್ ಗಳಿಸಿ ವಿಜಯಿಯಾಯಿತು. ಬಾಬರ್ 103 ರನ್, ಇಮಾಮ್ ಉಲ್ ಹಕ್ 65 ರನ್, ಮೊಹಮ್ಮದ್ ರಿಜ್ವಾನ್ 59 ರನ್ ಮತ್ತು ಖುಷ್ದಿಲ್ ಶಾ ಅಜೇಯ 41 ರನ್ ಗಳಿಸಿದರು.