ಬಬಲೇಶ್ವರ: ಜಗತ್ತಿನ ಹಲವಾರು ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಚ್ಚಾ ಸಂಪನ್ಮೂಲಗಳ ಬಳಕೆ ಕಡಿಮೆಯಾಗಿದೆ. ವಿಶ್ವದಲ್ಲಿ ಚೀನಾ-ಜಪಾನ್ ದೇಶಗಳ ವಸ್ತುಗಳಿಗೆ ಬೇಡಿಕೆ ಇರುವಂತೆ ಭಾರತೀಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಲು ಆದ್ಯತೆ ನೀಡಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ ಸಲಹೆ ನೀಡಿದರು.
ಬಬಲೇಶ್ವರ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನದ ಬಳಕೆ ಮಾಡಬೇಕಾಗಿದೆ. ಎಲ್ಲಾ ರಂಗದಲ್ಲಿ ಪ್ರಗತಿ ಸಾಧಿಸಬೇಕಿದೆ. ಸ್ಥಳೀಯ ಸಂಪನ್ಮೂಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಪರಿಸರವನ್ನು ಪ್ರೀತಿಸಬೇಕು, ಬೆಳೆಸಬೇಕು. ಜೀವನದಲ್ಲಿ ಸರಳತೆ, ಪ್ರಾಮಾಣಿಕತೆ, ತಾಳ್ಮೆಯಿಂದ ಇದ್ದರೆ ಮನುಷ್ಯ ಮುಂದೆ ಬರಲು ಸಾಧ್ಯ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಬೌರಮ್ಮ ಬೂದಿಹಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಪಿಎಂಸಿ ನಿರ್ದೇಶಕ ಹಣಮಂತ ಲೋಕುರಿ, ಜಿಪಂ ಮಾಜಿ ಸದಸ್ಯ ಮಲ್ಲು ಕನ್ನೂರ, ಬಿ.ಜಿ. ಬಿರಾದಾರ, ಚನಬಸಪ್ಪ ಕೋಟ್ಯಾಳ, ಆನಂದ ಬೂದಿಹಾಳ, ವಿ.ಎಸ್. ಮೇತ್ರಿ, ವಿ.ಆರ್. ಹಂಚಿನಾಳ, ಎಚ್.ವಿ. ಮಾಲಗಾರ, ರಮೇಶ್ ಕ್ಷತ್ರಿ, ಗಂಗಾ ಕೋಲಕಾರ, ಉಮಾ ಜಾಧವ, ಹರೀಶ ಬಬಲೇಶ್ವರ, ಎಸ್.ಬಿ. ಹಲಸಗಿ, ಎನ್. ಎಲ್. ಇಂಗಳೆ, ಬಿ.ಎನ್. ಬಂಡರಿ, ಜ್ಯೋತಿ ತುಳಸಿಗೇರಿ, ಉಷಾ ರಾಠೊಡ ಇದ್ದರು.
ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ ಹಾಗೂ ಮಕ್ಕಳ ವಿಜ್ಞಾನ ಹಬ್ಬಕ್ಕೆ ಜಯವಾಗಲಿ ಎಂಬ ವಿವಿಧ ವಿಜ್ಞಾನ ಘೋಷಣೆಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳು ಪ್ರಭಾತಪೇರಿ ಹಾಕುವ ಮೂಲಕ ವಿಜ್ಞಾನದ ಪ್ರಾಮುಖ್ಯತೆ ಜಾಗೃತಿ ಮೂಡಿಸಿದರು. ಅಶೋಕ ಬೂದಿಹಾಳ ಸ್ವಾಗತಿಸಿದರು. ಶಂಕರ ತಳವಾರ ನಿರೂಪಿಸಿದರು. ಪರಶುರಾಮ ಹಳ್ಳಿ ವಂದಿಸಿದರು.