ನವದೆಹಲಿ: ವೈಜ್ಞಾನಿಕವಾಗಿ ಪ್ರಮಾಣಿಕರಿಸಲ್ಪಟ್ಟ ಮತ್ತು ಕೋವಿಡ್ 19 ಚಿಕಿತ್ಸೆಗೆ ಬಳಕೆ ಮಾಡುತ್ತಿರುವ ಅಲೋಪತಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಯೋಗಗುರು ಬಾಬಾ ರಾಮ್ ದೇವ್ ವಿರುದ್ಧ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಒಂದು ಸಾವಿರ ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆಯ ನೋಟಿಸ್ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಿ.ಎಸ್.ಆರ್ ಸೌಲಭ್ಯದ ಸಮಗ್ರ ಆನ್ ಲೈನ್ ವೇದಿಕೆ ‘ಆಕಾಂಕ್ಷಾ’ ಪೋರ್ಟಲ್ ಗೆ ಚಾಲನೆ
ಭಾರತೀಯ ವೈದ್ಯರ ಅತ್ಯುನ್ನತ ಸಂಸ್ಥೆಯಾದ ಉತ್ತರಾಖಂಡ್ ಐಎಂಎ ಘಟಕ ಬಾಬಾ ರಾಮ್ ದೇವ್ ವಿರುದ್ಧ ಈ ನೋಟಿಸ್ ಅನ್ನು ನೀಡಿದೆ.
ಒಂದು ವೇಳೆ ಬಾಬಾ ರಾಮ್ ದೇವ್ ಅಲೋಪತಿ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಸೂಕ್ತ ವಿಡಿಯೋವನ್ನು ಪೋಸ್ಟ್ ಮಾಡದಿದ್ದರೆ ಹಾಗೂ ಮುಂದಿನ 15 ದಿನದೊಳಗೆ ಲಿಖಿತ ಕ್ಷಮಾಪಣೆ ಕೇಳದಿದ್ದರೆ ಒಂದು ಸಾವಿರ ಕೋಟಿ ರೂ. ಮಾನನಷ್ಟ ಮೊಕದ್ದಮೆ ಎದುರಿಸಬೇಕಾಗಲಿದೆ ಎಂದು ಐಎಂಎ ನೀಡಿರುವ ನೋಟಿಸ್ ನಲ್ಲಿ ತಿಳಿಸಿದೆ.
ಅಲೋಪತಿ ಬಗ್ಗೆ ಹೇಳಿಕೆ ನೀಡಿದ್ದ ಬಾಬಾ ರಾಮ್ ದೇವ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಐಎಂಎ ಆಗ್ರಹಿಸಿತ್ತು. ಅಲ್ಲದೇ ಈ ಬಗ್ಗೆ ಮುಖ್ಯಮಂತ್ರಿ ಹಾಗೂ ರಾಜ್ಯದ ಮುಖ್ಯಕಾರ್ಯದರ್ಶಿಗೆ ಪತ್ರ ಕಳುಹಿಸಲಾಗಿದೆ ಎಂದು ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ.ಅಜಯ್ ಖನ್ನಾ ತಿಳಿಸಿದ್ದಾರೆ.
ರಾಮ್ ದೇವ್ ಹೇಳಿದ್ದೇನು?
ಅಲೋಪಥಿ ವೈದ್ಯ ಪದ್ಧತಿ ಒಳ್ಳೆಯದಲ್ಲ. ಇದೊಂದು ಅವಿವೇಕತನದ ವೈದ್ಯ ಪದ್ಧತಿಯಾಗಿದೆ. ಈ ಅಲೋಪಥಿ ಔಷಧದಿಂದಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಮ್ ದೇವ್ ನೀಡಿದ್ದ ಹೇಳಿಕೆ ವೈರಲ್ ಆಗಿತ್ತು.