ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಬದುಕು- ಸಿನಿಮಾ ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲುವ “ಬಾಳೆ ಬಂಗಾರ’ ಸಾಕ್ಷ್ಯ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ. ಭಾರತಿ ವಿಷ್ಣುವರ್ಧನ್ ಅವರ ಅಳಿಯ, ನಟ ಅನಿರುದ್ಧ ಈ ಸಾಕ್ಷ್ಯ ಚಿತ್ರವನ್ನು ನಿರ್ದೇಶಿಸಿ, ತೆರೆಗೆ ತಂದಿದ್ದಾರೆ. ಚಿತ್ರರಂಗದ ಗಣ್ಯರಿಗಾಗಿ ಇತ್ತೀಚೆಗೆ “ಬಾಳೇ ಬಂಗಾರ’ ಸಾಕ್ಷ್ಯ ಚಿತ್ರದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಚಿತ್ರರಂಗದ ಅನೇಕರು ಭಾಗಿಯಾಗಿ, ಭಾರತಿ ವಿಷ್ಣುವರ್ಧನ್ ಅವರನ್ನು ಅಭಿನಂದಿಸಿದರು.
ಇದೇ ವೇಳೆ ಮಾತನಾಡಿದ ನಟ ಅನಿರುದ್ಧ, “ಸುಮಾರು ಮೂರು ವರ್ಷಗಳ ಪ್ರಯತ್ನದಿಂದ ಈ ಸಾಕ್ಷ್ಯ ಚಿತ್ರ ನಿರ್ಮಾಣವಾಗಿದೆ. ಇದರಲ್ಲಿ ಅಮ್ಮಾವ್ರ ವೃತ್ತಿ ಬದುಕಿನ ಎಲ್ಲಾ ಮಾಹಿತಿಗಳನ್ನುಕಲೆ ಹಾಕಲಾಗಿದೆ. ಅವರ ವೈವಿಧ್ಯಮಯ ಪಾತ್ರಗಳು, ಅದರ ಅನುಭವಗಳನ್ನು ಅವರ ಮಾತಿನಲ್ಲೇ ಸಂಗ್ರಹಿಸಲಾಗಿದೆ. ಭಾರತಿ ವಿಷ್ಣುವರ್ಧನ್ ಬದುಕು – ಸಾಧನೆಯನ್ನು ಸಮಗ್ರವಾಗಿ ಪರಿಚಯ ಮಾಡಿಸುವ ಕೈಪಿಡಿ “ಬಾಳೇ ಬಂಗಾರ’ ಸಾಕ್ಷ್ಯ ಚಿತ್ರ’ ಎಂದರು.
ಇದನ್ನೂ ಓದಿ:ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಿಸಿಕೊಳುತ್ತಿಲ್ಲ ಸುದೀಪ್
ತಮ್ಮ ಸಾಕ್ಷ್ಯ ಚಿತ್ರದ ಬಗ್ಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್, “ನಾನು ಯಾವುದೇ ಅಪೇಕ್ಷೆ, ನಿರೀಕ್ಷೆ ಇಲ್ಲದೆ ಚಿತ್ರರಂಗಕ್ಕೆ ಬಂದವಳು. ಅಂದುಕೊಳ್ಳದೇನೆ ಎಲ್ಲವೂ ನಡೆಯಿತು. “ಬಾಳೇ ಬಂಗಾರ ಸಾಕ್ಷ್ಯ ಚಿತ್ರ, ನನ್ನ ಬದುಕಿನ ವಿವಿಧ ಹಂತಗಳನ್ನು ನಾನೇ ತಿರುಗಿ ನೋಡುವಂತೆ ಮಾಡಿದೆ. ಎಲ್ಲರ ಪ್ರೀತಿ, ಅಭಿಮಾನ, ವಿಶ್ವಾಸ ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ನನ್ನ ಸಿನಿಮಾ ಬದುಕನ್ನು ಈ ಸಾಕ್ಷ್ಯ ಚಿತ್ರದಲ್ಲಿ ದಾಖಲಿಸಲು ಅನೇಕರು ತುಂಬ ಶ್ರಮಪಟ್ಟಿದ್ದಾರೆ. ಅವರಿಗೆಲ್ಲ ನಾನು ಕೃತಜ್ಞಳಾಗಿದ್ದೇನೆ’ ಎಂದರು.
ಇನ್ನು ಅಪ್ಪಟ ಕನ್ನಡದ ನಟಿ ಭಾರತಿ ವಿಷ್ಣುವರ್ಧನ್, ಕನ್ನಡವೂ ಸೇರಿದಂತೆ ಆರು ಭಾಷೆಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.