ಹೀಗೊಬ್ಬಳು ಕತೆಯೊಳಗಿನ ಹುಡುಗಿ, ಹೆಣ್ಣುಗಳೆಂದರೆ ದ್ವೇಷ, ತಾತ್ಸಾರದಿಂದ ರಾಜನೊಬ್ಬನನ್ನು ಅವಳು ಮದುವೆಯಾಗುತ್ತಾಳೆ. ಅವನೊಬ್ಬ ವಿಲಕ್ಷಣ ರಾಜನಾಗಿದ್ದು, ತಾನು ಮದುವೆಯಾದ ಎಲ್ಲಾ ಹೆಣ್ಣುಗಳನ್ನೂ ಒಂದೇ ಒಂದು ರಾತ್ರಿ ಬಳಸಿ ಮರುದಿನ ಕೊಂದು ಬಿಡುತ್ತಿದ್ದ. ಅಂಥ ಗಂಡನ ಮನೆಗೆ ಸಾವನ್ನೇ ದಕ್ಷಿಣೆಯಾಗಿ ಪಡೆದು ಅಡಿಯಿಟ್ಟ ಈ ವಧು, ಮಾಯಕವನ್ನೇ ಮಾಡಿಬಿಡುತ್ತಾಳೆ. ಮೃತ್ಯುವನ್ನು ಸೆರಗಲ್ಲೇ ಕಟ್ಟಿಕೊಂಡು ಒಂದಲ್ಲ, ಸಾವಿರದೊಂದು ರಾತ್ರಿಗಳನ್ನು ದಕ್ಕಿಸಿಕೊಳ್ಳುತ್ತಾಳೆ! ಹೇಗೆಂದು ಕುತೂಹಲವೇ? ಪ್ರತಿರಾತ್ರಿ ಕತೆಯೊಂದನ್ನು ಹೆಣೆದು ಗಂಡನನ್ನು ಸಮ್ಮೊàಹಗೊಳಿಸಿ ತಾನೂ ಬದುಕಿದಳು, ಗಂಡನ ಬದುಕನ್ನೂ ಉಳಿಸಿಕೊಂಡಳು.
Advertisement
ತನ್ನ ಪ್ರಾಣ, ಪ್ರೇಮ, ಸಂಸಾರ ನಾಶವಾಗದಂತೆ ಕಾಪಾಡಿಕೊಳ್ಳಬಲ್ಲ ಜಾಣ್ಮೆ ಈ ಕಥೆಯ ಹುಡುಗಿಗಿತ್ತು ಎಂಬುದು ಸತ್ಯವೇ ಆದರೂ ಅವಳ ಕಥೆಗೆ ಮಾರುಹೋಗಬಲ್ಲ ಸಂವೇದನಾಶಕ್ತಿ ಆ ರಾಜನಲ್ಲಿತ್ತು ಎನ್ನುವ ವಿಚಾರ ಅದಕ್ಕಿಂತಲೂ ಮುಖ್ಯವಾದುದು. ಅದಿಲ್ಲದೇ ಹೋಗಿದ್ದರೆ, ಹೆಂಡಿರನ್ನು ಹೊಸಕಿ ಹಾಕಬಲ್ಲ ಅವನ ಕ್ರೌರ್ಯವನ್ನು ಪಳಗಿಸುವುದು ಅವಳಿಗೆಲ್ಲಿ ಸಾಧ್ಯವಾಗುತ್ತಿತ್ತು !
Related Articles
Advertisement
ಧರ್ಮೇಚ, ಅರ್ಥೇಚ, ಕಾಮೇಚ ಎಂಬ ಹರಕೆಯೇ ಎಚ್ಚರಿಸುತ್ತಿರುತ್ತದೆ, ಮದುವೆಯ ಬಾಂಧವ್ಯ ಬಯಸುವುದು ಎರಡು ಆತ್ಮ, ಮನಸ್ಸು , ದೇಹಗಳು ಜೊತೆಯಾಗಿ ಅನುಗಾಲ ಬಾಳಬೇಕು ಎಂದು. ಇದು ಅಷ್ಟೆಲ್ಲ ಸರಳವಲ್ಲ ಎಂಬುದು ಗೊತ್ತಿದ್ದೇ ಶಾಸ್ತ್ರ , ಪುರಾಣಗಳು ಹೆಣ್ಣಿಗೊಂದಿಷ್ಟು ಕಿವಿಮಾತನ್ನು ಹೇಳುತ್ತದೆ. ಕಾಯೇìಶು ದಾಸಿ, ಕರಣೇಶು ಮಂತ್ರಿ, ಶಯನೇಶು ವೇಶ್ಯೆ, ಭೋಜ್ಯೇಶು ಮಾತಾ ಎಂದು. ಸರಿಯೇ. ಆದರೆ ಅವಳ ಮನಸ್ಸು ಕೂಡಾ ಕಾರ್ಯ, ಕರಣ ಮುಂತಾದವಕ್ಕೆ ಗಂಡನಿರಬೇಕು ಎಂದು ಹಂಬಲಿಸುವುದಿಲ್ಲವೆ? ಅವಳ ಹೊಟ್ಟೆಬಟ್ಟೆ ನೋಡಿಕೊಳ್ಳುವುದಷ್ಟೇ ಗಂಡನ ಹೊಣೆಗಾರಿಕೆಯೆ? ಈ ಸಖೀಗೆ ಸಖನಾಗದ ಹೊರತು ಅವನು ಹೇಗೆ ಪರಿಪೂರ್ಣ ಗಂಡನಾದಾನು?
ನಿನ್ನ ರಾಮ ನಿನಗೆ ಅಂತಹ ಸಖನಾಗಿದ್ದನಲ್ಲವೆ? ರಾಣೀ ವಾಸವಿರಲಿ, ವನವಾಸವಿರಲಿ, ನಿನ್ನ ಮನದ ನಾದ ಲಹರಿಗೆ ತಾಳ ಹಾಕುತ್ತಿದ್ದವನೇ ಅವನು. ಸಾಂಸಾರಿಕವೋ, ರಾಜಕೀಯವೋ ನಿನ್ನೊಡನೆ ಅವನು ಅರುಹದಿದ್ದ ಸುದ್ದಿಯಿತ್ತೆ? ದೇಹವೆರಡು ಭಾವ ಒಂದು ಎಂಬಂತೆ ಜೋಡಿಯಾಗಿದ್ದವರು ನೀವು. ಒಬ್ಬರನ್ನೊಬ್ಬರು ಅಗಲಿರಲಾಗದ ಇಂತಹ ಅನುಬಂಧ ಇದ್ದಾಗಲೂ ಈ ಲೋಕಕ್ಕಾಗಿ ನಿನ್ನನ್ನು ಬಿಟ್ಟುಕೊಟ್ಟ ರಾಮನ ನಡೆ ಮಾತ್ರ ನಿಗೂಢವಾಗಿಯೇ ಕಾಣುತ್ತದೆ!
ಬೌದ್ಧಿಕ ಸಾಹಚರ್ಯ ಎಂದಾಗ ನೆನಪಾಗುವುದು ನಿನ್ನ ಮತ್ತು ಲಕ್ಷ್ಮಣನ ಅಪೂರ್ವ ಸಂಬಂಧ. ತಂಗಿ ಊರ್ಮಿಳೆಯ ಬಳಿ ಹೇಳಿಕೊಳ್ಳಲಾಗದ್ದು ಈ ಮೈದುನನಿಗೆ ತಿಳಿಯುತ್ತಿತ್ತು. ರಾಮನೇ ಔದಾಸೀನ್ಯ ತೋರಿದರೂ ಅತ್ತಿಗೆಯ ಯಾವ ಮಾತುಗಳನ್ನೂ ಲಕ್ಷ್ಮಣ ಉಪೇಕ್ಷಿಸಿದವನೇ ಅಲ್ಲ. “ಸೀತಾ ಪರಿತ್ಯಾಗದ’ ಹೊತ್ತು ಅಣ್ಣನ ಬಳಿ ನಿಷ್ಠುರವಾಗಿ ನಡೆದುಕೊಂಡು “”ಸೀತೆಯಿಲ್ಲದ ಅಯೋಧ್ಯೆಗೆ ಮರಳಲಾರೆ” ಎಂದು ಬಿಕ್ಕಿರಲಿಲ್ಲವೇ ಅವನು!
ಇಲ್ಲಿಯ ವಿಶೇಷವೆಂದರೆ, ನಿಮ್ಮಿಬ್ಬರ ಈ ಆತ್ಮೀಯತೆಯ ಬಗೆಗೆ ರಾಮನಿಗೆ ವಿಶೇಷ ಗೌರವವಿತ್ತು. ಆದರೆ ತಾಯೀ, ಎಷ್ಟೋ ಸಂಸಾರದಲ್ಲಿ ಹೆಣ್ಣುಗಳಿಗೆ ಈ ಭಾಗ್ಯವಿರುವುದಿಲ್ಲ. ಮನದ ಹಸಿವಿಗೆ ಒದಗಿಬರುವವರ ಸಮೀಪವಾದರೆ, ಅಪವಾದ ತರಬಹುದಾದ ಅವಮಾನ ಅವಳನ್ನು ಕುಗ್ಗಿಸಿಬಿಡುತ್ತದೆ. ದಿನದಿನವೂ ಪಾತಿವ್ರತ್ಯವನ್ನು ಸಾಬೀತುಪಡಿಸುವ ಅನಿವಾರ್ಯತೆ ಅವಳಿಗಿರುತ್ತದಲ್ಲವೆ? ತನ್ನ ಮನೆಯ ಪುಟ್ಟ ಜಗತ್ತಿನಾಚೆ ಇಣುಕುವ ಅವಕಾಶವನ್ನೂ ಪಡೆಯದವಳು ಬುದ್ಧಿ-ಭಾವದ ಹಸಿವಿನ ಚಡಪಡಿಕೆ ಒಮ್ಮೊಮ್ಮೆ ಅವಳ ಸಂಸಾರವನ್ನೂ ಛಿದ್ರಗೊಳಿಸಬಲ್ಲಷ್ಟು ಅಪಾಯಕಾರಿಯಾಗಿರುತ್ತದೆ!
ಮದುವೆ ಎಂಬ ಬಂಧ ಸಹ್ಯ ಅನುಬಂಧವಾಗಬೇಕಾದರೆ, ಗಂಡ- ಹೆಂಡಿರ ನಡುವೆ ಪ್ರೀತಿ, ನೀತಿಗಳ ವಿನಿಮಯ ನಿರಂತರವಾಗಿರಬೇಕು. “ನಾನು-ನೀನು, ಆನು-ತಾನುಗಳು’ ಅವರೀರ್ವರ ನಡುವೆ ಅನುರಣಿಸುತ್ತಿರಬೇಕು.ಅಲ್ಲವೆ ಮೈಥಿಲಿ? ಅಭಿಲಾಷಾ ಎಸ್.