Advertisement

Bengaluru: ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ವಿಜಯೇಂದ್ರ ಬಣ ಮತ್ತೆ ನಿರ್ಧಾರ

09:26 PM Nov 27, 2024 | Team Udayavani |

ಬೆಂಗಳೂರು: ಬಿಜೆಪಿಯಲ್ಲಿ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಣಗಳ ತಿಕ್ಕಾಟ ಮುಂದುವರಿದಿದೆ. ಈ ಸಂಬಂಧ ಬುಧವಾರ ಬೆಂಗಳೂರಿನಲ್ಲಿ ಸಭೆ ನಡೆಸಿರುವ ವಿಜಯೇಂದ್ರ ಬಣದ ನಿಷ್ಠರು ದಾವಣಗೆರೆಯಲ್ಲಿ ಬೃಹತ್‌ ಸಮಾವೇಶ ನಡೆಸಿ ಯತ್ನಾಳ್‌ ವಿರುದ್ಧ ಕ್ರಮಕ್ಕೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.

Advertisement

ಬೆಂಗಳೂರಿನ ಸದಾಶಿವನಗರದಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ್, ಮಾಜಿ ಶಾಸಕರಾದ ಎಂ.ವೈ.ಸಂಪಂಗಿ, ಎಂ.ಡಿ.ಲಕ್ಷ್ಮೀನಾರಾಯಣ ಸೇರಿದಂತೆ ಹಲವರು ಸಭೆ ನಡೆಸಿ ಸಮಾವೇಶ ನಡೆಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಯತ್ನಾಳ್‌ ಬಣ ನಡೆಸುತ್ತಿರುವ ಜನಜಾಗೃತಿ ಅಭಿಯಾನಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ತಕ್ಷಣವೇ ವರಿಷ್ಠರು ಮಧ್ಯಪ್ರವೇಶಿಸಿ ತಡೆ ನೀಡಬೇಕೆಂದು ಮತ್ತೆ ಆಗ್ರಹ ವ್ಯಕ್ತವಾಗಿದೆ.

ಪಕ್ಷದ ಹಿತಕ್ಕಿಂತ ಸ್ವಾರ್ಥವೇ ಹೆಚ್ಚು: ರೇಣುಕಾಚಾರ್ಯ
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಕೆಲವರು ಪಕ್ಷಕ್ಕಿಂತ ನಾನೇ ದೊಡ್ಡವನೆಂದು ಬಿಂಬಿಸಿಕೊಂಡು ನಾಲ್ಕಾರು ಜನರ ಮೂಲಕ ಅಭಿಯಾನ ನಡೆಸುತ್ತಿದ್ದಾರೆ. ಇಲ್ಲಿ ಪಕ್ಷದ ಹಿತಕ್ಕಿಂತ ಸ್ವಾರ್ಥವೇ ಹೆಚ್ಚಾಗಿದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದು ಈಗ ಪಾದಯಾತ್ರೆ ನಡೆಸುತ್ತಿರುವವರಲ್ಲ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಸಂಪೂರ್ಣವಾಗಿ ಬೆಂಬಲ ಕೊಟ್ಟಿದ್ದಾರೆ ಎಂದರು.

ದಾವಣಗೆರೆಯಲ್ಲಿ ನಾವು ಯಾವುದೇ ವ್ಯಕ್ತಿ ಅಥವಾ ಬಣದ ಪರವಾಗಿ ಸಮಾವೇಶ ಮಾಡುತ್ತಿಲ್ಲ. ಸಂಘಟನೆ ಪ್ರಬಲವಾಗಬೇಕು. ಕಾರ್ಯಕರ್ತರಲ್ಲಿ ನವಚೈತನ್ಯ ಮೂಡಿಸಬೇಕು ಎಂಬ ದೃಷ್ಟಿಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದೇವೆ. ಕೋಲಾರದ ಮುಳಬಾಗಿಲು ಭೇಟಿ ಬಳಿಕ ಮೈಸೂರಿನಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದು, ಅಲ್ಲಿಂದ ಮುರುಡೇಶ್ವರ ದರ್ಶನ ಪಡೆಯಲಾಗುವುದು. ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರಲ್ಲಿ ಶಕ್ತಿ ತುಂಬುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಸಮಾವೇಶ ಮಾಡುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದರು.

Advertisement

ನ.29 ರಂದು 10 ಗಂಟೆಗೆ ಕೋಲಾರದ ಮುಳಬಾಗಿಲು ಗಣೇಶನ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತೇವೆ. ಹಾದಿ ಬೀದಿಯಲ್ಲಿ ಮಾತನಾಡುವವರಿಗೆ ಬುದ್ಧಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇವೆ. ಯಡಿಯೂರಪ್ಪ ಕಷ್ಟದಲ್ಲಿ ಪಕ್ಷ ಕಟ್ಟಿದ್ದಾರೆ. ಕರ್ನಾಟಕದಲ್ಲಿ ಅಧಿಕಾರ ತರಲು ಅವರ ಪಾತ್ರ ಪ್ರಮುಖವಾಗಿದೆ. ಪಕ್ಷ ಕಟ್ಟಿದ ನಾಯಕರ ಬಗ್ಗೆ ಮಾತನಾಡುವುದು ರಾಷ್ಟ್ರೀಯ ನಾಯಕರ ವಿರುದ್ಧ ಮಾತನಾಡಿದಂತೆ ಎಂದು ರೇಣುಕಾಚಾರ್ಯ ಕಿಡಿಕಾರಿದರು.

ಸಿದ್ದರಾಮಯ್ಯ ಅಡಿಯಾಳಾಗಿ ಯತ್ನಾಳ್‌ ಕೆಲಸ
ಯತ್ನಾಳ್‌ ಅವರೇ ನಿಮ್ಮ ಹೋರಾಟ ಯಾರ ವಿರುದ್ಧ? ಕಾಂಗ್ರೆಸ್‌ ವಿರುದ್ಧ ಇರಬೇಕು. ಮುಹಮ್ಮದ್‌ ಬಿನ್‌ ತುಘಲಕ್‌ ರೀತಿಯಲ್ಲಿ ಪ್ರವಾಸ ಹೊರಟಿದ್ದೀರಿ. ಸಿದ್ದರಾಮಯ್ಯ ಅಡಿಯಾಳಾಗಿ ಕೆಲಸ ಮಾಡುತ್ತಿದ್ದೀರಿ ಎಂದು ರೇಣುಕಾಚಾರ್ಯ ಆರೋಪಿಸಿದರು.

ನಮ್ಮಲ್ಲಿ ಯಾರು ಸಿಎಂ ಆಗ್ತಾರೆ ಎಂದು ಹೇಳಲು ಯತ್ನಾಳ್‌ಗೆ ಏನು ಅಧಿಕಾರ ಇದೆ? ಯಡಿಯೂರಪ್ಪ ಅವರಿಗೂ ಅಧಿಕಾರ ಇಲ್ಲ. ಸ್ವಾರ್ಥಕ್ಕಾಗಿ ಕೆಟ್ಟ ಉದ್ದೇಶದಿಂದ ಕೆಲಸ ಮಾಡ್ತಾರೆ. ಯಡಿಯೂರಪ್ಪ ರಕ್ಷಣೆಗೆ ಏಕೆ ನಿಲ್ಲುತ್ತಿಲ್ಲ ಎಂದು ನಮ್ಮನ್ನು ಕಾರ್ಯಕರ್ತರು ಕೇಳ್ತಿ¨ªಾರೆ. ಅವರಿಗೆ ಉತ್ತರ ಹೇಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ರೇಣುಕಾಚಾರ್ಯ ವಿವರಿಸಿದರು.

ವಿಜಯೇಂದ್ರ ಸಾರಥ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಇದು ಕಾರ್ಯಕರ್ತರ ಒಕ್ಕೊರಲ ಅಭಿಪ್ರಾಯವಾಗಿದೆ. ಕೆಲವರು ಆಗಲೇ ನಮ್ಮ ಬಣದವರೇ ಮುಖ್ಯಮಂತ್ರಿಯಾಗಲಿ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರ ಆಸೆ ಈಡೆರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಯತ್ನಾಳ್‌ ದೀಪ ಆರಲಿದೆ: ಬಿ.ಸಿ. ಪಾಟೀಲ್‌
ಮಾಜಿ ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ಯತ್ನಾಳ್‌ ಅವರ ಬಗ್ಗೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ. ಪಕ್ಷ ಕಾದು ನೋಡುತ್ತಿದೆ. ಕಾಲ ಬಂದಾಗ ಎಲ್ಲವೂ ನಿರ್ಣಯವಾಗಲಿದೆ. ಯತ್ನಾಳ್‌ ಎಂಬ ದೀಪ ಆರಲಿದೆ ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next