ಮಂಡ್ಯ: ಚುನಾವಣೆ ಹತ್ತಿರ ಬಂದಿದೆ. ಈಗ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಮಾತೇಕೆ? ಎನ್ನುವ ಮೂಲಕ ಜಿಲ್ಲಾ ಉಸ್ತುವಾರಿಯನ್ನು ಘೋಷಣೆ ಮಾಡುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರೋಕ್ಷವಾಗಿ ಹೇಳಿದರು.
ಮಂಗಳವಾರ ತಾಲೂಕಿನ ಹೊಳಲು ಗ್ರಾಮದಲ್ಲಿ ಸುದ್ದಿಗಾರ ರೊಂದಿಗೆ ಚುನಾವಣಾ ಉಸ್ತುವಾರಿ ಬಗ್ಗೆ ಪ್ರತಿಕ್ರಿಯಿಸಿ, ಮಂಡ್ಯ ಉಸ್ತುವಾರಿಯನ್ನು ಬಿಜೆಪಿ ಪಕ್ಷವೇ ತೆಗೆದುಕೊಂಡಿದೆ. ಚುನಾವಣಾ ಉಸ್ತುವಾರಿಯನ್ನು ನನಗೆ ನೀಡಿದರೆ ನಿಭಾಯಿಸುವೆ ಎನ್ನುವ ಮೂಲಕ ಜಿಲ್ಲಾ ಚುನಾವಣೆ ಉಸ್ತುವಾರಿ ವಹಿಸಿಕೊಳ್ಳಲು ಆಸಕ್ತಿ ತೋರಿದರು. ಕಾಂಗ್ರೆಸ್, ಜೆಡಿಎಸ್ ಬಗ್ಗೆ ಮಂಡ್ಯ ಜಿಲ್ಲೆ ಜನ ಬೇಸತ್ತಿದ್ದಾರೆ. ಬಿಜೆಪಿ ಪರವಾಗಿ ಜನರು ಒಲವು ತೋರುತ್ತಿದ್ದಾರೆ. ಕೆ.ಆರ್.ಪೇಟೆ ಗೆಲುವು ಮುಂದಿನ ವಿಧಾನಸಭೆ ಗೆಲ್ಲಲು ಪ್ರೇರಣೆ ಎಂದರು.
ಕಾಂಗ್ರೆಸ್ ಕಿವಿ ಮೇಲೆ ಹೂ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ರಾಜ್ಯದ ಜನರೇ ಕಾಂಗ್ರೆಸ್ ನಾಯಕರ ಕಿವಿಗೆ ಹೂ ಮೂಡಿಸಲಿದ್ದಾರೆ. ಕಾಂಗ್ರೆಸ್‌ನಲ್ಲಿ ಬಹಳಷ್ಟು ಜನ ಈಗಾಗಲೇ ಸಿಎಂ ಆಗಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅವರಿಗೆಲ್ಲ ನಿರಾಸೆ ಆಗಲಿದೆ ಎಂದು ತಿಳಿಸಿದರು.
ವಿಜಯೇಂದ್ರ ಮುಂದಿನ ಸಿಎಂ ಎಂದು ಘೋಷಣೆ: ಹೊಳಲು ಗ್ರಾಮಕ್ಕೆ ವಿಜಯೇಂದ್ರ ಆಗಮನದ ವೇಳೆ ಬಿಜೆಪಿ ಕಾರ್ಯಕರ್ತರು ಹಾರ ಹಾಕಿ ಸ್ವಾಗತಿಸಿ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಘೋಷಣೆ ಕೂಗಿ ಜೈಕಾರ ಹಾಕಿದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಡಾ ಅಧ್ಯಕ್ಷ ಶ್ರೀನಿವಾಸ್, ಮೈಷುಗರ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಮುಖಂಡರಾದ ಡಾ. ಸಿದ್ದರಾಮಯ್ಯ, ಡಾ.ಇಂದ್ರೇಶ್, ಇಂಡುವಾಳು ಸಚ್ಚಿದಾನಂದ, ಸಾಯಿ ರವೀಂದ್ರ, ಎಸ್.ಪಿ.ಸ್ವಾಮಿ, ಶ್ರೀಧರ್ ಹಾಜರಿದ್ದರು.
ರೈತರಿಂದ ಮುಖ್ಯಮಂತ್ರಿ ವಿರುದ್ಧ ವಿಜಯೇಂದ್ರಗೆ ದೂರು : ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಬಿ.ವೈ.ವಿಜಯೇಂದ್ರಗೆ ಮಂಡ್ಯ ರೈತರು ದೂರು ನೀಡಿದ್ದಾರೆ. ತಾಲೂಕಿನ ಹೊಳಲು ಗ್ರಾಮದಲ್ಲಿ ವಿಜಯೇಂದ್ರರನ್ನು ಭೇಟಿ ಮಾಡಿದ ರೈತರು, ಯಡಿಯೂರಪ್ಪ ನಮ್ಮ ಸಮಸ್ಯೆ ಬಗ್ಗೆ ಗಮನಕೊಟ್ಟಿದ್ದರು. ಈಗಿನ ಸಿಎಂ ಬೊಮ್ಮಾಯಿ ಗಮನಕೊಡುತ್ತಿಲ್ಲ. ನಿಮ್ಮ ಕೈ ಮುಗಿದು ಕಳಕಳಿಯಿಂದ ಕೇಳಿ ಕೊಳ್ಳುತ್ತಿದ್ದೇವೆ. ನೀವಾದರೂ ಗಮನಕೊಟ್ಟು, ನಮ್ಮ ಹೋರಾಟಕ್ಕೆ ಸ್ಪಂದಿಸಿ ಎಂದು ಆಗ್ರಹಿಸಿದರು.
ಕಳೆದ ನೂರಾರು ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಆಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹ ಕೂಡ ಮಾಡುತ್ತಿದ್ದೇವೆ. ಆದರೂ, ನಮ್ಮ ಬೇಡಿಕೆ ಈಡೇರಿಸಿಲ್ಲ. ಕಬ್ಬು, ಹಾಲಿನ ದರದ ಬಗ್ಗೆ ರೈತರ ನಿರಂತರ ಹೋರಾಟವನ್ನು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಮಾಡುತ್ತಿದ್ದು, ಈ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪರಿಂದ ಬೊಮ್ಮಾಯಿ ಅವರಿಗೆ ಹೇಳಿ ಸಮಸ್ಯೆ ಬಗೆಹರಿಸುವಂತೆ ಹೇಳಬೇಕೆಂದು ಮನವಿ ಮಾಡಿದರು.