ಶಿವಮೊಗ್ಗ: ಉಡುಪಿ ಜಿಲ್ಲೆಯ ಬೈಂದೂರು ಸೇರಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲೂ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆದು ಗೆಲುವು ಸಾಧಿಸಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ನಗರದಲ್ಲಿ ಬಿಜೆಪಿ ಗ್ರಾಮಾಂತರ ಕ್ಷೇತ್ರದ ಚುನಾವಣ ಕಚೇರಿ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಅವರು ಮಾತ ನಾಡಿದರು.ಬಿಜೆಪಿ “ಯುದ್ಧಕಾಲೇ ಶಸ್ತ್ರಾಭ್ಯಾಸ’ ಎನ್ನುವ ಪಕ್ಷವಲ್ಲ. ಐದು ವರ್ಷಗಳಿಂದ ಕಾರ್ಯಕರ್ತರ ತಪಸ್ಸಿನ ಸಂಘಟನೆಯ ಫಲವಿದೆ. ಪರಿಶ್ರಮವಿದೆ. ಅಭಿವೃದ್ಧಿ ಕಾರ್ಯ ಗಳನ್ನು ಮಾಡಿದ್ದೇವೆ. ಹಾಗಾಗಿ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಪ್ರಧಾನಿ ಮೋದಿಯವರ ಬಂಡೀಪುರ ಭೇಟಿಗೆ ಸಂಬಂ ಧಿಸಿದಂತೆ ವಿಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಹಾಗೂ ವಿಪಕ್ಷಗಳಿಗೆ ಪ್ರಚಾರಕ್ಕೆ ಯಾವುದೇ ವಿಷಯವಿಲ್ಲ. ಅಪಪ್ರಚಾರ ಮಾಡುವುದೇ ಅವರ ಕೆಲಸ. ಇಟಲಿ ದೇಶದ ಕನ್ನಡಕ ಹಾಕಿಕೊಂಡು ನೋಡುವ ಪ್ರವೃತ್ತಿ ಕಾಂಗ್ರೆಸಿಗರಿಗೆ ಇದೆ ಎಂದರು.
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ನೋಡಲು ಅವರಿಗೆ ಆಗುತ್ತಿಲ್ಲ. ಅವರು ಹಾಳು ಮಾಡಿದ ವ್ಯವಸ್ಥೆಯನ್ನು ಸರಿ ಮಾಡುತ್ತಿದ್ದೇವೆ. ಒಳ್ಳೆಯ ಕೆಲಸ ಮಾಡದಿದ್ದರೂ ಪರವಾಗಿಲ್ಲ. ಒಳ್ಳೆಯ ಕೆಲಸ ಮಾಡುವವರ ಟೀಕೆ ಮಾಡುವುದನ್ನು ನಿಲ್ಲಿಸಲಿ. ಹಾಗಾದರೆ ವಿಪಕ್ಷದ ಸ್ಥಾನವಾದರೂ ಉಳಿಸಿಕೊಳ್ಳಲು ಅವಕಾಶವಿದೆ ಎಂದರು.
ಆಯನೂರು ಮಂಜುನಾಥ್ ಅವರ ಬಂಡಾಯದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಸೂಕ್ತ ಸಂದರ್ಭದಲ್ಲಿ ಪಕ್ಷದ ಹಿರಿಯರು ಅವರ ಮನವೊಲಿಸುತ್ತಾರೆ ಎಂದರು.