ಮೈಸೂರು: ಅಧಿಕಾರಕ್ಕೋಸ್ಕರ ರಾಜಕಾರಣ ಮಾಡುವವನು ನಾನಲ್ಲ. ನನಗೆ ಹಿನ್ನೆಡೆಯಾಗುತ್ತೆ ಅಂತ ಯಾವತ್ತೂ ರಾಜಕಾರಣ ಮಾಡಿದವನಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ನಾನು ಯಾರನ್ನೂ ಭೇಟಿ ಮಾಡಲ್ಲ. ನಾನು ಜವಾಬ್ದಾರಿಯುತ ಸ್ಥಾನದಲ್ಲಿರೋನು. ನಾನು ತುಂಗಭದ್ರಾ ವ್ಯಾಪ್ತಿಯ ನವಿಲಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿ ಭೇಟಿ ಕೊಟ್ಟಿದ್ದೆ ಅಷ್ಟೇ ಇದರ ಹೊರತಾಗಿ ನನಗೆ ಹಿನ್ನೆಡೆಯಾಗುತ್ತೆ ಅಂತ ಯಾವತ್ತೂ ರಾಜಕಾರಣ ಮಾಡಿದವನಲ್ಲ. ನಾನು ಅಧಿಕಾರಕ್ಕೊಸ್ಕರ ರಾಜಕಾರಣ ಮಾಡುವವನಲ್ಲ ಎಂದು ರಮೇಶ್ ಜಾರಕಿಹೊಳಿ ಆಗಮನದಿಂದ ರಾಮುಲುಗೆ ಹಿನ್ನಡೆ ಆಗುತ್ತೆ ಎಂಬ ಚರ್ಚೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೇ ನೀಡಿದರು.
ಈ ಕುರಿತು ಮಾತನಾಡಿದ ಅವರು ಇಂದಿಗೂ ನನ್ನ ಜೊತೆ ಹಲವಾರು ಶಾಸಕರು, ಸಮುದಾಯ ಇದೆ. ಚಾಮರಾಜನಗರದಿಂದ ಬೀದರ್‌ವರೆಗೆ ಜನ ಅದೇ ಪ್ರೀತಿ ವಿಶ್ವಾಸ ತೋರುತ್ತಿದ್ದಾರೆ. ಇದು ನನ್ನನ್ನ ಕೈ ಹಿಡಿಯುತ್ತೇ ಅನ್ನೋ ವಿಶ್ವಾಸವಿದೆ ಎಂದರು. ವಿಜಯನಗರ ಪ್ರತ್ಯೇಕ ಜಿಲ್ಲೆ ವಿವಾದದ ಕುರಿತು ಮಾತನಾಡಿದ ಅವರು, ವಿಜಯನಗರ ಪ್ರತ್ಯೇಕ ಜಿಲ್ಲೆ ಕಡ್ಡಾಯವಾಗಿ ಆಗಬೇಕು. ಬಳ್ಳಾರಿ 250 ಕಿ.ಮಿ. ವ್ಯಾಪ್ತಿಯ ಅತಿ ದೊಡ್ಡ ಜಿಲ್ಲೆ. ಬಹಳ ದಿನಗಳಿಂದ ಪ್ರತ್ಯೇಕ ಜಿಲ್ಲೆ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು ಎಂದು ಹೇಳಿದರು.
ಇದನ್ನೂ ಓದಿ:26/11 ಮುಂಬೈ ದಾಳಿ ಕೃತ್ಯಕ್ಕೆ 12 ವರ್ಷ: ದಾಳಿಯ ನೋವನ್ನು ಭಾರತ ಎಂದಿಗೂ ಮರೆಯಲ್ಲ: ಪ್ರಧಾನಿ
ಬಿಜೆಪಿಯಲ್ಲಿ ಮೂಲ ವಲಸಿಗ ಜಟಾಪಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಬಿಜೆಪಿಯೇ ಒಂದು ಎಂದು ತಿಳಿಕೊಂಡಿದ್ದೇನೆ. ಸರ್ಕಾರ ಬಂದ ಮೇಲೆ ಹಲವಾರು ಮಂದಿ ಬಿಜೆಪಿಯಲ್ಲಿ ನಿಂತು ಗೆದ್ದಿದ್ದಾರೆ. ಆದರೆ ಐದಾರು ಬಾರಿ ಗೆದ್ದಿರುವವರಿಗೆ ಅವಕಾಶ ಸಿಗಬೇಕು. ಐದಾರು ಬಾರಿ ಗೆದ್ದಿರುವ ಯಾವ ಆಕಾಂಕ್ಷಿಗಳಿದ್ದಾರೋ ಅವರಿಗೆ ಆದ್ಯತೆ ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದೇವೆ. ಹೀಗಾಗಿ ಮುಖ್ಯಮಂತ್ರಿಗಳು ಸೂಕ್ತ ಕಾಲದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿಲ್ಲ. ಆ ಜಾತಿಯ ಅಭಿವೃದ್ದಿಗಾಗಿ ನಿಗಮ ಸ್ಥಾಪಿಸಿದ್ದೇವೆ. ದೇಶಕ್ಕಾಗಿ ಹೋರಾಡಿದ ಕ್ಷತ್ರಿಯ ಸಮುದಾಯದ ಅದು ಹಾಗಾಗಿ ನಿಗಮ ಸ್ಥಾಪನೆ ಮಾಡಿದ್ದೇವೆ ಎಂದರು.