ಬ್ಯಾಂಕಾಕ್: ಭಾರತ ಬ್ಯಾಡ್ಮಿಂಟನ್ ಆಟಗಾರ ಬಿ.ಸಾಯಿ ಪ್ರಣೀತ್ ಮೊದಲ ಗ್ರ್ಯಾನ್‌ಪ್ರಿ ಗೋಲ್ಡ್ ಪ್ರಶಸ್ತಿ ಗೆದ್ದಿದ್ದಾರೆ. ಅವರು ಬ್ಯಾಂಕಾಕ್ ನಲ್ಲಿ ನಡೆದ ಥಾಯ್ಲೆಂಡ್ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಕೂಟದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 17-21, 21-18, 21-19 ಅಂತರದಿಂದ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರನ್ನು ಮಣಿಸಿ ಪ್ರಶಸ್ತಿ ಎತ್ತಿದರು. ಮೊದಲ ಗೇಮ್ ಕಳೆದುಕೊಂಡರೂ ಬಳಿಕ ದಿಟ್ಟ ಹೋರಾಟ ಪ್ರದರ್ಶಿಸಿ ಕ್ರಿಸ್ಟಿ ಅವರನ್ನು ಪರಾಭವಗೊಳಿಸಿದರು. ಇವರಿಬ್ಬರ ಕಾದಾಟ 1ಗಂಟೆ, 11 ನಿಮಿಷಗಳ ಕಾಲ ಸಾಗಿತ್ತು.
ಇದು ಸಾಯಿ ಪ್ರಣೀತ್ ಗೆದ್ದ ಸತತ 2ನೇ ಬ್ಯಾಡ್ಮಿಂಟನ್ ಪ್ರಶಸ್ತಿ. ಒಟ್ಟಾರೆ 3ನೇ ಪ್ರಶಸ್ತಿ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೂ ಮುನ್ನ ಅವರು “ಸಿಂಗಾಪುರ್ ಓಪನ್’ ಕೂಟದಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದರು. ಹಾಗೆಯೇ ಹೈದರಾಬಾದ್‌ನಲ್ಲಿ ನಡೆದ “ಸಯ್ಯದ್ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್’ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಇರಿಸಿದ್ದರು. ಅಲ್ಲಿ ಸಮೀರ್ ವರ್ಮ ವಿರುದಟಛಿ ಪರಾಭವಗೊಂಡಿದ್ದರು.
ಜಿದ್ದಾಜಿದ್ದಿ ಸ್ಪರ್ಧೆ: ವಿಶ್ವ ರ್‍ಯಾಂಕಿಂಗ್‌ನಲ್ಲಿ 24ನೇ ಸ್ಥಾನದಲ್ಲಿರುವ ಸಾಯಿ ಪ್ರಣೀತ್ ಅವರ ಫೈನಲ್ ಸ್ಪರ್ಧೆಯ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಉಳಿದೆರಡು ಗೇಮ್‌ಗಳಲ್ಲೂ ಕಠಿನ ಹೋರಾಟ ಕಂಡುಬಂತು. ನಿರ್ಣಾಯಕ ಗೇಮ್‌ನಲ್ಲಿ ಕ್ರಿಸ್ಟಿ ಒಮ್ಮೆ 7-2ರ ಭಾರೀ ಮುನ್ನಡೆ ಸಾಧಿಸಿದ್ದರು. ಬಳಿಕ 8-3ಕ್ಕೆ ವಿಸ್ತರಿಸಲ್ಪಟ್ಟಿತು. ಈ ಹಂತದಲ್ಲಿ ಮಿಂಚಿನ ಆಟವಾಡಿದ ಪ್ರಣೀತ್ ಹಿನ್ನಡೆಯನ್ನು 7-8ಕ್ಕೆ ಇಳಿಸುವಲ್ಲಿ ಯಶಸ್ವಿಯಾದರು. 9-9 ಸಮಬಲದ ಬಳಿಕ ಪಂದ್ಯ 17-17 ಸಮಬಲಕ್ಕೆ ಬಂತು. 2 ಮಹತ್ವದ ಅಂಕ ಸಂಪಾದಿಸಿ 19-17ರ ಲೀಡ್ ಸಾಧಿಸಿದರು. ಈ ಹಂತದಲ್ಲಿ ಮೇಲುಗೈ ಸಾಧಿಸಿದ ಕ್ರಿಸ್ಟಿ ಪಂದ್ಯವನ್ನು 19-19ಕ್ಕೆ ತಂದರು. ಆದರೆ ಪ್ರಣೀತ್ ಅಷ್ಟೇ ಕ್ಷಿಪ್ರಗತಿಯಲ್ಲಿ 2 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡು ವಿಜಯೋತ್ಸವ ಆಚರಿಸುವಲ್ಲಿ ಯಶಸ್ವಿಯಾದರು.
ಇದೊಂದು ಕಠಿಣ ಸ್ಪರ್ಧೆಯಾಗಿತ್ತು. ಆದರೆ ನಿಧಾನವಾಗಿ ಲಯ ಕಂಡುಕೊಂಡೆ. ಬಳಿಕ ಗೆಲ್ಲುವ ವಿಶ್ವಾಸ ಮೂಡಿತು. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆಗಳು’
–
ಬಿ.ಸಾಯಿ ಪ್ರಣೀತ್,
ಬ್ಯಾಡ್ಮಿಂಟನ್ ಆಟಗಾರ