ಬೆಳಗಾವಿ: ರಾಜ್ಯದಲ್ಲಿ ನನಗೆ ಬಿಜೆಪಿಯಲ್ಲಿ ಸಿಕ್ಕಷ್ಟು ಸ್ಥಾನಮಾನ ಹಾಗೂ ಅವಕಾಶ ಬೇರೆ ಯಾರಿಗೂ ಸಿಕ್ಕಿಲ್ಲ. ಇದರಿಂದ ನನಗೆ ಸಮಾಧಾನ ಇದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಬಿಜೆಪಿಯಲ್ಲಿ ನನಗೆ ತೃಪ್ತಿಯಾಗಿದೆ. ಇದುವರೆಗಿನ ಕಾರ್ಯ ಸಮಾಧಾನ ತಂದಿದೆ. ಮುಂದೆ ಪಕ್ಷದ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.
ನಾನು ಸಹ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನೇ. ಆದರೆ ನನಗೆ ಪಕ್ಷದಲ್ಲಿ ಎಲ್ಲವೂ ಸಿಕ್ಕಿದೆ. ರಾಜ್ಯದಲ್ಲಿ ಬಹುಶಃ ನನಗೊಬ್ಬನಿಗೆ ಇಷ್ಟೊಂದು ಸ್ಥಾನಮಾನ ಹಾಗೂ ಅವಕಾಶ ಸಿಕ್ಕಿರುವದು ಎಂದು ಬಿಜೆಪಿ ನಾಯಕ ಸಿ ಟಿ ರವಿ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಇದನ್ನೂ ಓದಿ:ಬದಲಾವಣೆ ಡ್ರಾಮಾಗೆ ಟ್ವಿಸ್ಟ್: ಯಡಿಯೂರಪ್ಪ ಬೆಂಬಲಕ್ಕೆ ನಿಂತ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ನಿಮ್ಮ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಕಾದು ನೋಡಿ ಎಂದು ಯಡಿಯೂರಪ್ಪ ಚುಟುಕಾಗಿ ಉತ್ತರ ನೀಡಿದರು. ಬಿಜೆಪಿಯಲ್ಲಿ ನಾಯಕರಿಗೆ ಕೊರತೆಯಿಲ್ಲ. ನಾನು ಹೋದರೂ ಏನೂ ಆಗುವದಿಲ್ಲ. ನಮ್ಮೆಲ್ಲರ ಗುರಿ ಒಂದೇ ಅದು ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರುವುದು. ಅಧಿಕಾರ ಇರಲಿ ಬಿಡಲಿ ಪಕ್ಚವನ್ನು ಕಟ್ಟಬೇಕಾಗಿದೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದರು.
ನನ್ನ ಬಗ್ಗೆ ಟೀಕೆ ಮಾಡುವ ಸಿದ್ದರಾಮಯ್ಯಗೆ ಉತ್ತರ ನೀಡುವುದಿಲ್ಲ. ಅವರ ಬಗ್ಗೆ ಮಾತನಾಡುವದಿಲ್ಲ. ಇಂತಹ ನೂರು ಜನ ಸಿದ್ದರಾಮಯ್ಯ ಬಂದರೂ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಸವಾಲು ಹಾಕಿದರು.