Advertisement

ಸ್ಯಾಂಟ್ರೋ ರವಿ ಪತ್ನಿ ವಿರುದ್ದದ ಕೇಸ್‌ನಲ್ಲಿ “ಬಿ’ರಿಪೋರ್ಟ್‌?

12:37 PM Apr 26, 2023 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಸ್ಯಾಂಟ್ರೋ ರವಿ ಪತ್ನಿಯ ವಿರುದ್ಧದ ಪ್ರಕರಣದಲ್ಲಿ “ಬಿ’ ವರದಿ ಸಲ್ಲಿಸಲು ಸಿಸಿಬಿ ಸಿದ್ಧತೆ ನಡೆಸಿದೆ.

Advertisement

ರಾಜ್ಯದಲ್ಲಿ ಸರ್ಕಾರಿ ನೌಕರರ ವರ್ಗಾವಣೆ ದಂಧೆ, ದುಡ್ಡು ಕೊಟ್ಟವರಿಗೆ ಸರ್ಕಾರಿ ನೌಕರಿ, ಯುವತಿಯರನ್ನು ಛೂ ಬಿಟ್ಟು ಪ್ರಭಾವಿಗಳಿಂದ ಕೆಲಸ ಮಾಡಿಕೊಂಡು ಭ್ರಷ್ಟಾಚಾರದ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದ್ದ ಸ್ಯಾಂಟ್ರೋ ರವಿ ಅಕ್ರಮಗಳು ಕೊನೆಗೂ ಬಹಿರಂಗಗೊಂಡಿತ್ತು. ಆದರೆ, ಆತನ ಪತ್ನಿ ಹಾಗೂ ನಾದಿನಿ ವಿರುದ್ಧ ಶ್ರೀಪ್ರಕಾಶ್‌ ಎಂಬಾತನ ಮೂಲಕ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣದಲ್ಲಿ ಹುರುಳಿಲ್ಲ ಎಂಬ ಅಂಶವು ಸಿಸಿಬಿ ತನಿಖೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ “ಬಿ’ ವರದಿ ಸಲ್ಲಿಸಲು ಸಿಸಿಬಿ ಸಿದ್ಧತೆ ನಡೆಸಿದ್ದಾರೆ ಎಂಬ ಸಂಗತಿ “ಉದಯವಾಣಿ’ಗೆ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.

ಏನಿದು ಪ್ರಕರಣ?: ಸ್ಯಾಂಟ್ರೋ ರವಿಯ ವೈಯಕ್ತಿಕ ಮಾಹಿತಿಯುಳ್ಳ ಲ್ಯಾಪ್‌ ಟಾಪ್‌ ಪತ್ನಿ ಕೈ ಸೇರಿದ್ದವು. ತನ್ನ ಪತ್ನಿ ಬಳಿ ಇದ್ದ ಲ್ಯಾಪ್‌ಟಾಪ್‌ ತನ್ನ ಕೈ ಸೇರಬೇಕೆಂಬ ಉದ್ದೇಶದಿಂದ ಸ್ಯಾಂಟ್ರೋ ರವಿ ಪತ್ನಿ ವಿರುದ್ಧವೇ ಷಡ್ಯಂತರ ರೂಪಿಸಿದ್ದ. ಇದಕ್ಕೆ ವರ್ಗಾವಣೆಯಾಗುವ ಆತಂಕದಲ್ಲಿದ್ದ ಕಾಟನ್‌ಪೇಟೆ ಠಾಣೆ ಇನ್‌ಸ್ಪೆಕ್ಟರನ್ನು ಬಳಸಿಕೊಂಡಿದ್ದ. ತಾನು ಹೇಳಿದಂತೆ ಕೇಳಿದರೆ ವರ್ಗೆ ತಡೆಹಿಡಿಯುವುದಾಗಿ ಹೇಳಿದ್ದ ಎನ್ನಲಾಗಿದೆ. ಇತ್ತ ಸ್ಯಾಂಟ್ರೋ ರವಿ ಆಪ್ತ ಶ್ರೀಪ್ರಕಾಶ್‌ ಮೂಲಕ ಪತ್ನಿ ವಿರುದ್ಧವೇ ಕಾಟನ್‌ಪೇಟೆ ಠಾಣೆಗೆ ದೂರು ಕೊಡಿಸಿದ್ದ.

ಸ್ಯಾಂಟ್ರೋ ರವಿ ಪತ್ನಿ ಆರ್ಥಿಕ ಸಮಸ್ಯೆ ನೆಪವೊಡ್ಡಿ ತನ್ನಿಂದ 5 ಲಕ್ಷ ರೂ. ಸಾಲು ಪಡೆದು 3 ತಿಂಗಳಲ್ಲಿ ವಾಪಸ್‌ ನೀಡುವುದಾಗಿ ಹೇಳಿದ್ದರು. ಕೆಲ ದಿನಗಳ ಬಳಿಕ ಕರೆ ಮಾಡಿ ಹಣ ವಾಪಸ್‌ ನೀಡುವುದಾಗಿ ಹೇಳಿ ಮೆಜೆಸ್ಟಿಕ್‌ ಬಳಿ ಕರೆಸಿಕೊಂಡಿದ್ದರು. ಇಲ್ಲಿನ ರೈಲು ನಿಲ್ದಾಣದ ಬಳಿ ಹಣ ಕೊಡದೇ ಹಲ್ಲೆ ನಡೆಸಿ ತನ್ನ ಬಳಿ ಇದ್ದ ಚಿನ್ನ ಕದ್ದು ಪರಾರಿಯಾಗಿದ್ದಾರೆ ಎಂದು ಸ್ಯಾಂಟ್ರೋರವಿ ಸೂಚನೆಯಂತೆ ಶ್ರೀಪ್ರಕಾಶ್‌ ದೂರಿನಲ್ಲಿ ಉಲ್ಲೇಖೀಸಿದ್ದ. ಸ್ಯಾಂಟ್ರೋ ಪತ್ನಿ, ನಾದಿನಿಯನ್ನು ಬಂಧಿಸಿದ ಅಂದಿನ ಕಾಟನ್‌ಪೇಟೆ ಪೊಲೀಸರು 21 ದಿನ ಜೈಲಿನಲ್ಲಿರುವಂತೆ ಮಾಡಿದ್ದರು. ಸಿಸಿಬಿ ಪೊಲೀಸರು ಸ್ಯಾಂಟ್ರೋ ರವಿ, ಆತನ ಪತ್ನಿ, ದೂರುದಾರ ಶ್ರೀಪ್ರಕಾಶ್‌ ಅವರನ್ನು ವಿಚಾರಣೆ ನಡೆಸಿ ತಾಂತ್ರಿಕ ಸಾಕ್ಷ್ಯ ಸಂಗ್ರಹಿಸಿ ಪರಿಶೀಲಿಸಿದಾಗ ಸುಳ್ಳು ದೂರು ನೀಡಿರುವ ಅಸಲಿ ಸಂಗತಿ ದೃಢಪಟ್ಟಿದೆ.

ಇನ್‌ಸ್ಪೆಕ್ಟರ್‌ಗಳ ವಿರುದ್ಧ ಕ್ರಮ ಏಕಿಲ್ಲ?: ಇಷ್ಟೆಲ್ಲಾ ಆದರೂ ಅಂದಿನ ಕಾಟನ್‌ಪೇಟೆ ಇನ್‌ಸ್ಪೆಕ್ಟರ್‌ ವಿರುದ್ಧ ಎಫ್ಐಆರ್‌ ದಾಖಲಿಸಿಲ್ಲ. ಸ್ಯಾಂಟ್ರೋ ರವಿ ತಲೆಮರೆಸಿಕೊಂಡಿದ್ದ ವೇಳೆ ಆತನಿಗೆ ಸಹಕರಿಸಿದ ಆರೋಪವೂ ಇದೆ. ಇನ್ನು ಬೆಂಗಳೂರಿನಲ್ಲಿದ್ದ ಮತ್ತಿಬ್ಬರು ಇನ್‌ಸ್ಪೆಕ್ಟರ್‌ಗಳು ತಮ್ಮಿಷ್ಟದ ಠಾಣೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಸ್ಯಾಂಟ್ರೋ ರವಿ ಮೂಲಕ ಡೀಲ್‌ ಕುದುರಿಸಿದ್ದರು. ದುಡ್ಡು ರೆಡಿಯಾಗಿದೆ ಎಂದು ಈ ಇಬ್ಬರು ಇನ್‌ಸ್ಪೆಕ್ಟರ್‌ಗಳು ಸ್ಯಾಂಟ್ರೋ ರವಿಗೆ ಕಳುಹಿಸಿರುವ ಸಂದೇಶ ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಸದ್ಯ ಇಬ್ಬರು ಇನ್‌ಸ್ಪೆಕ್ಟರ್‌ ಗಳು ಕೊಟ್ಟಿದ್ದ ಕಂತೆ-ಕಂತೆ ದುಡ್ಡು ಲಂಚದ ರೂಪದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಖಜಾನೆ ಸೇರಿದೆ. ಕೊಟ್ಟ ಮಾತಿನಂತೆ ಸ್ಯಾಂಟ್ರೋ ಇಬ್ಬರು ಇನ್‌ಸ್ಪೆಕ್ಟರ್‌ಗಳನ್ನೂ ಬೇಕಾದ ಠಾಣೆಗೆ ವರ್ಗಾವಣೆ ಮಾಡಿಸಿಕೊಟ್ಟಿದ್ದಾನೆ. ಇದಕ್ಕೆ ಸಾಕ್ಷ್ಯ ಸಿಕ್ಕಿದರೂ ಇನ್‌ ಸ್ಪೆಕ್ಟರ್‌ಗಳ ವಿರುದ್ಧ ಕೇಸ್‌ ದಾಖಲಿಸಿಕೊಳ್ಳದಿರುವ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಸ್ಯಾಂಟ್ರೋ ರವಿಗೆ ಪ್ರಭಾವಿಗಳ ಶ್ರೀರಕ್ಷೆ: ಸ್ಯಾಂಟ್ರೋ ರವಿ ಜೈಲು ಸೇರಿದ್ದರೂ ಪ್ರಭಾವಿಗಳ ಕುಮ್ಮಕ್ಕಿನಿಂದ ಆತನ ವಿರುದ್ಧ ದಾಖಲಾಗಿದ್ದ ಪ್ರಕರಣಗಳೆಲ್ಲಾ ಹಳ್ಳ ಹಿಡಿಯುತ್ತಿರುವ ಆರೋಪ ಕೇಳಿ ಬಂದಿದೆ. ವಿಚಾರಣೆ ವೇಳೆ ಆತ ಇದುವರೆಗೆ ನಡೆಸಿದ್ದ ಕೋಟ್ಯಂತರ ರೂ. ಡೀಲ್‌ ಬಗ್ಗೆ ಸವಿಸ್ತಾರವಾಗಿ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ. ಆದರೆ, ಪ್ರಭಾವಿ ರಾಜಕಾರಣಿಗಳು, ಸಚಿವರು ಪ್ರಕರಣದಲ್ಲಿ ತಮ್ಮ ಹೆಸರು ತಳುಕು ಹಾಕಿಕೊಳ್ಳದಂತೆ ತನಿಖಾಧಿಕಾರಿಗಳ ಮೇಲೆ ಒತ್ತಡ ತಂದು ಸ್ಯಾಂಟ್ರೋ ರವಿಗೆ ಶ್ರೀರಕ್ಷೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next