Advertisement

Godhra ಮಾದರಿ ಹತ್ಯಾಕಾಂಡ: ಹರಿಪ್ರಸಾದ್‌ ವಿರುದ್ಧ ಬಿಜೆಪಿ ಕಿಡಿ

01:04 AM Jan 08, 2024 | Team Udayavani |

ಬೆಂಗಳೂರು: ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಗೋಧ್ರಾ ಮಾದರಿಯ ಹತ್ಯಾಕಾಂಡ ನಡೆಯಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದ ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ಈಗ ರಾಷ್ಟ್ರ ರಕ್ಷಣ ಪಡೆ ಎಂಬ ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಹಂಚಿಕೆಯಾಗಿದೆ ಎಂಬ ಸಂದೇಶವನ್ನು ಟ್ವೀಟ್‌ ಮಾಡಿ, ಇದು ನನ್ನ ಅನುಮಾನಕ್ಕೆ ಸಾಕ್ಷಿ ಎಂದಿದ್ದಾರೆ.

Advertisement

ಇದಕ್ಕೆ ಬಿಜೆಪಿ ಕೆಂಡಾಮಂಡಲವಾಗಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಸಹಿತ ಪ್ರಮುಖರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪುನೀತ್‌ ವಿರುದ್ಧ ಆರೋಪ‌
ಈ ಕುರಿತು ಟ್ವೀಟ್‌ ಮಾಡಿದ್ದ ಹರಿಪ್ರಸಾದ್‌, ಸರ್ವಜನಾಂಗದ ಶಾಂತಿಯ ತೋಟದಲ್ಲಿ ಕೋಮುಗಲಭೆ ಸೃಷ್ಟಿಸಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸಕ್ಕೆ ಬಿಜೆಪಿ ತನ್ನ ಸಹೋದರ ಸಂಘಟನೆಗಳಿಗೆ ಅಣಿಗೊಳಿಸುತ್ತಿರುವುದು ಬಹಿರಂಗವಾಗುತ್ತಿದೆ. ರೌಡಿಶೀಟರ್‌ ಪುನೀತ್‌ ಕೆರೆಹಳ್ಳಿ ಎಂಬ ಮತಾಂಧನಿಗೆ ಬಿಜೆಪಿಯಿಂದ ಕೋಮುಗಲಭೆ ನಡೆಸುವ ಫ‌ತ್ವಾ ಬಂದಿದೆ ಎಂದು ಸ್ವತಃ ತಾನೇ ಸೃಷ್ಟಿಸಿರುವ ರಾಷ್ಟ್ರ ರಕ್ಷಣ ಪಡೆ ಎಂಬ ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಹೇಳಿಕೊಂಡಿದ್ದಾನೆ. ಕೋಮುಗಲಭೆ ನಡೆಸಿ 2024ಕ್ಕೆ ವಿಶ್ವಗುರುವನ್ನು ಮತ್ತೆ ಪ್ರಧಾನಿಯಾಗಬೇಕೆಂದು ಈ ಭಯೋತ್ಪಾದಕರ ತಂಡ ಕೆಲಸ ಮಾಡಲಿದೆಯಂತೆ ಎಂದು ಆರೋಪಿಸಿದ್ದಾರೆ.

ಹರಿಪ್ರಸಾದ್‌ ವಿರುದ್ಧ ಕೇಸು: ಪುನೀತ್‌
ಇದರ ವಿರುದ್ಧ ಪುನೀತ್‌ ಕೆರೆಹಳ್ಳಿ ಕಿಡಿಕಾರಿದ್ದು, ತನ್ನನ್ನು ಭಯೋತ್ಪಾದಕ ಎಂದಿರುವ ಹರಿಪ್ರಸಾದ್‌ ವಿರುದ್ಧ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ದೂರು ಸಲ್ಲಿಸಲೆಂದೇ ಬೆಂಗಳೂರಿನ ಬಸವನಗುಡಿ ಠಾಣೆಗೆ ತೆರಳಿದ್ದು, ಪೊಲೀಸರು ತಮ್ಮ ದೂರು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಎಲ್ಲಿ? ಯಾವಾಗ? ಹೇಗಾದರೂ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಇಂತಹ ಸಮಾಜಘಾತುಕರಿಗೆ ಇಡೀ ಬಿಜೆಪಿ ಬೆಂಬಲಕ್ಕೆ ನಿಂತಿರುವುದು ಜಗಜ್ಜಾಹೀರು. ಕೂಡಲೇ ಸರಕಾರ ಇಂತಹ ಭಯೋತ್ಪಾದಕ ಶಕ್ತಿಗಳನ್ನು ಮಟ್ಟ ಹಾಕಬೇಕು. ರಾಜ್ಯದ ಆಂತರಿಕ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿರುವವರ ಮೇಲೆ ರಾಷ್ಟ್ರದ್ರೋಹದ ಅಡಿಯಲ್ಲಿ ಕೇಸ್‌ ದಾಖಲಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇನೆ.
-ಬಿ.ಕೆ. ಹರಿಪ್ರಸಾದ್‌, ಮೇಲ್ಮನೆ ಕಾಂಗ್ರೆಸ್‌ ಸದಸ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next