ಗುಲಬರ್ಗಾ: ಗುಲಬರ್ಗಾ ವಿಶ್ವವಿದ್ಯಾಲಯದ ಬಿಎಡ್ ಪ್ರಶ್ನೆ ಪತ್ರಿಕೆ ಭಾನುವಾರ ರಾತ್ರಿಯೇ ಸೋರಿಕೆ ಆಗಿದ್ದು, ಮತ್ತೊಂದೆಡೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದರೂ ಸೋಮವಾರ ಪರೀಕ್ಷೆ ನಡೆಸಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವರದಿಯಾಗಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ಬಿಎಡ್ 2ನೇ ಸೆಮಿಸ್ಟರ್ ನ ಶೈಕ್ಷಣಿಕ ಸಾಮಗ್ರಿ,ಕೌಶಲ್ಯ ಅಭಿವೃದ್ಧಿ ವಿಷಯದ ಪ್ರಶ್ನೆ ಪತ್ರಿಕೆ ನಿನ್ನೆಯೇ ಸೋರಿಕೆ ಆಗಿದ್ದು ವಾಟ್ಸಪ್ ನಲ್ಲಿ ಹರಿದಾಡುತ್ತಿತ್ತು.
ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ತಿಳಿಯುತ್ತಿದ್ದಂತೆಯೇ ಕೆಲವು ವಿದ್ಯಾರ್ಥಿಗಳು ನಿನ್ನೆ ರಾತ್ರಿಯೇ ಮೌಲ್ಯಮಾಪನ ಕುಲಸಚಿವರಿಗೆ ಸೋರಿಕೆ ಆದ ಪ್ರಶ್ನೆ ಪತ್ರಿಕೆಯನ್ನು ವಾಟ್ಸಪ್ ನಲ್ಲಿ ಕಳುಹಿಸಿರುವುದಾಗಿ ವರದಿ ತಿಳಿಸಿದೆ.
ಆದರೆ ಬಿಎಡ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದರೂ ಸೋಮವಾರ ಬೆಳಗ್ಗೆ 10ಗಂಟೆಗೆ ಪರೀಕ್ಷೆ ಆರಂಭಗೊಂಡಿದೆ. ಇದರಿಂದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಬೆಳಗ್ಗೆ 10ಗಂಟೆಗೆ ಪರೀಕ್ಷೆ ನಡೆಸುತ್ತಿದ್ದೇವೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಗುಲಬರ್ಗಾ ವಿವಿ ಮೌಲ್ಯಮಾಪನ ಕುಲಸಚಿವ ಡಾ.ಸಿಎಸ್ ಪಾಟೀಲ್ ಖಾಸಗಿ ಟಿವಿ ಚಾನೆಲ್ ವೊಂದಕ್ಕೆ ತಿಳಿಸಿದ್ದಾರೆ.