Advertisement

ಬಿ.ಸಿ.ರೋಡ್‌-ಅಡ್ಡಹೊಳೆ ಹೆದ್ದಾರಿ ಕಾಮಗಾರಿಗೆ ಮರುಜೀವ?

01:29 AM Sep 23, 2020 | mahesh |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಅರ್ಧಕ್ಕೆ ನಿಂತಿರುವ ಬಿ.ಸಿ.ರೋಡ್‌-ಅಡ್ಡಹೊಳೆ ಕಾಮಗಾರಿಗೆ ಮರುಜೀವ ಲಕ್ಷಣಗಳು ಕಂಡುಬರುತ್ತಿವೆ. ಒಂದೆಡೆ ಹೊಸ ಟೆಂಡರ್‌ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಮತ್ತೂಂದೆಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ವು
ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಪ್ರಕಟಿಸಿ ಚಾಲನೆ ನೀಡಿದೆ.

Advertisement

ಒಟ್ಟು 63 ಕಿ.ಮೀ. ವ್ಯಾಪ್ತಿಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಭೂಸ್ವಾಧೀನ ಪೂರ್ಣಗೊಳಿಸಲು ಹೆದ್ದಾರಿ ಪ್ರಾಧಿಕಾರದ ಹಾಸನ-ಬಂಟ್ವಾಳ ವಿಭಾಗ ನಿರ್ಧರಿಸಿದೆ. ಎರಡು ಹಂತಗಳಲ್ಲಿ ಕಾಮಗಾರಿ ನಡೆಸಲಿದ್ದು, ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ಯನ್ನು ಕೇಂದ್ರ ಕಚೇರಿಗೆ ಸಲ್ಲಿಸಿದೆ.

ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಮತ್ತು ಭೂಸಾರಿಗೆ ಸಚಿವಾಲಯ ಟೆಂಡರ್‌ ಕರೆದು ಗುತ್ತಿಗೆದಾರರ ನೇಮಕದ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ. ಹಿಂದೆ ಒಟ್ಟು 821 ಕೋ.ರೂ.ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕೆಲವೊಂದು ಕಾಮಗಾರಿಗಳನ್ನು ನಡೆಸಲಾಗಿತ್ತು. ಬಳಿಕ ಭೂಸ್ವಾಧೀನ ವಿಳಂಬ, ಪರಿಸರ ಸಚಿವಾಲಯದ ಕ್ಲಿಯರೆನ್ಸ್‌ ಸಕಾಲದಲ್ಲಿ ಸಿಗದ ಪರಿಣಾಮ ಹಿಂದಿನ ಟೆಂಡರ್‌ ಅರ್ಧದಲ್ಲಿಯೇ ಮೊಟಕುಗೊಂಡಿತ್ತು.

3,95,454 ಚ.ಮೀ. ವಿಸ್ತೀರ್ಣ
ಪ್ರಸ್ತುತ ಎನ್‌ಎಚ್‌ಎಐ ಬಿ.ಸಿ.ರೋಡ್‌- ಅಡ್ಡಹೊಳೆ ಮಧ್ಯೆ ಹೆದ್ದಾರಿ ಅಭಿವೃದ್ಧಿಗೆ ಮುಂದಿನ ಹಂತದ ಭೂಸ್ವಾಧೀನಕ್ಕೆ ಪ್ರಕ್ರಿಯೆ ಪ್ರಾರಂಭಿಸಿದೆ. ಒಟ್ಟು 3,95,454 ಚ.ಮೀ. ವಿಸ್ತೀರ್ಣದಲ್ಲಿ 692 ಪ್ಲಾಟ್‌ಗಳಲ್ಲಿ ಪ್ರಾಧಿಕಾರವು ಭೂಸ್ವಾಧೀನ ಪಡಿಸಿಕೊಳ್ಳುವ ಅಧಿಸೂಚನೆ ಹೊರಡಿಸಿದೆ.
ಬಂಟ್ವಾಳ ತಾಲೂಕಿನ ಬಿಳಿಯೂರು, ಪೆರ್ನೆ, ಕೆದಿಲ, ಪೆರಾಜೆ, ಮಾಣಿ, ಬಾಳ್ತಿಲ, ಗೋಳ್ತಮಜಲು, ಪಾಣೆಮಂಗಳೂರು ಕಸ್ಬಾ, ನರಿಕೊಂಬು ಹಾಗೂ ಬಿ.ಮೂಡ, ಪುತ್ತೂರು ತಾಲೂಕಿ(ಪ್ರಸ್ತುತ ಕೆಲವು ಗ್ರಾಮಗಳು ಕಡಬ ತಾಲೂಕಿನಲ್ಲಿವೆ)ನ ಕೌಕ್ರಾಡಿ, ನೆಲ್ಯಾಡಿ, ಕೊಣಾಲು, ಗೋಳಿತ್ತೂಟ್ಟು, ಬಜತ್ತೂರು, ಉಪ್ಪಿನಂಗಡಿ, ನೆಕ್ಕಿಲಾಡಿ ಹೀಗೆ ಒಟ್ಟು 17 ಗ್ರಾಮಗಳ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ.

ಹೆದ್ದಾರಿ ಪೂರ್ತಿ ಹದಗೆಟ್ಟಿದೆ
ಬಿ.ಸಿ.ರೋಡ್‌-ಮೆಲ್ಕಾರ್‌- ಮಾಣಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಸಂಚಾರವೇ ದುಸ್ತರವಾಗಿದೆ. ಬಿ.ಸಿ.ರೋಡ್‌ಪೇಟೆಯಲ್ಲೇ ಹೆದ್ದಾರಿಯಲ್ಲಿ ಹೊಂಡಗಳು ತುಂಬಿದ್ದು, ವಾಹನಗಳು ಎದ್ದು ಬಿದ್ದು ಸಾಗುವ ಸ್ಥಿತಿ ಇದೆ. ಪ್ರಸ್ತುತ ವ್ಯಾಪಕ ಮಳೆಯಾಗಿರುವುದರಿಂದ ತಾತ್ಕಾಲಿಕ ದುರಸ್ತಿಯೂ ಕಷ್ಟಸಾಧ್ಯವಾಗಿದ್ದು, ಡಾಮರು ಘಟಕಗಳು ಕಾರ್ಯಾಚರಣೆ ಆರಂಭಿಸಿದ ಬಳಿಕವೇ ತೇಪೆ ಹಾಕಲಾಗುತ್ತದೆ ಎಂದು ಎಚ್‌ಎಚ್‌ಎಐ ಅಧಿಕಾರಿಗಳು ಹೇಳುತ್ತಾರೆ. ಕನಿಷ್ಠ ಜಲ್ಲಿಕಲ್ಲು ಹಾಗೂ ಜಲ್ಲಿಹುಡ್ಡಿ ಮಿಶ್ರಣವನ್ನೂ ಹಾಕಿಲ್ಲ ಎಂದು ವಾಹನದವರು ಆರೋಪಿಸುತ್ತಿದ್ದಾರೆ.

Advertisement

ಅಡ್ಡಹೊಳೆ-ಬಿ.ಸಿ.ರೋಡ್‌ ಹೆದ್ದಾರಿಯ ವ್ಯಾಪ್ತಿಯಲ್ಲಿ ಹಿಂದೆ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದೆ. ಸಂಬಂಧಪಟ್ಟ ಜಮೀನುಗಳ ಮಾಲಕರ ದಾಖಲೆಗಳನ್ನು ಪರಿಶೀಲಿಸಿ, ಸರ್ವೇ ಸೇರಿದಂತೆ ಮುಂದಿನ ಪ್ರಕ್ರಿಯೆಗಳು ಮುಗಿದ ಬಳಿಕ ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಮೌಲ್ಯ ನಿರ್ಧರಿಸಲಾಗುತ್ತದೆ.
– ಮಂಜುನಾಥ್‌, ಭೂಸ್ವಾಧೀನಾಧಿಕಾರಿ, ಎನ್‌ಎಚ್‌ಎಐ ರಾ.ಹೆ.75, ಹಾಸನ-ಬಂಟ್ವಾಳ ವಿಭಾಗ

ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಡಿಪಿಆರ್‌ ಮಾಡಿ ಕೇಂದ್ರ ಕಚೇರಿಗೆ ಟೆಂಡರ್‌ ಪ್ರಕ್ರಿಯೆಗಾಗಿ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಭೂಸಾರಿಗೆ ಸಚಿವಾಲಯ ಟೆಂಡರ್‌ ಕರೆದು ಗುತ್ತಿಗೆದಾರರನ್ನು ನಿರ್ಧರಿಸುತವೆ. ಈ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ.
– ಶಿಶುಮೋಹನ್‌, ಯೋಜನಾ ನಿರ್ದೇಶಕರು,  ಎಚ್‌ಎಚ್‌ಎಐ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next