ಟಿ.ದಾಸರಹಳ್ಳಿ: ತ್ವರಿತವಾಗಿ ನಾಗರಿಕ ಸೇವೆಗಳನ್ನು ಪಡೆಯಲು ಹಾಗೂ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸಕಾಲ ಮಿತ್ರ ಯೋಜನೆ ಅತ್ಯಂತ ಸಹಕಾರಿ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ದಾಸರಹಳ್ಳಿ ಸಮೀಪದ ಸೋಲದೇವನಹಳ್ಳಿಯಲ್ಲಿ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಸಕಾಲ ಮಿತ್ರ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ನಾಗರಿಕರ ಮನೆ ಬಾಗಿಲಿಗೆ ಸೇವೆ ಒದಗಿಸುವ ಸಕಾಲ ಮಿತ್ರ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಯೋಜನೆಯಿಂದ ಸಿಗಬಹುದಾದ ಪ್ರಯೋಜನಗಳನ್ನು ತಿಳಿಸಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸಕಾಲ ಯೋಜನೆಯ ಕುರಿತ ತರಬೇತಿಯನ್ನು ಈಗಾಗಲೇ ನೀಡಲಾಗಿದ್ದು ಮನೆ ಮನೆಗೆ ತೆರಳಿ ನಾಗರಿಕರಿಗೆ ಸೇವೆ ಒದಗಿಸಲು ಇದು ಸಹಕಾರಿಯಾಗಿದೆ ಎಂದರು.
ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ನಾಗರಿಕರ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಸರ್ಕಾರದ ಬಹುತೇಕ ಸಂಸ್ಥೆಗಳು ಟ್ವಿಟರ್, ಫೇಸ್‌ಬುಕ್ ಹಾಗೂ ಜಿಮೇಲ್‌ನಂಥ ವಿದೇಶಿ ಪ್ಲಾಟ್ ಫಾರ್ಮ್ಗಳನ್ನು ಬಳಸುತ್ತಿವೆ ಆದರೆ ಸಕಾಲವನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸಲು tesz ಎಂಬ ಆನ್‌ಲೈನ್ ದೇಶಿ ವೇದಿಕೆಯನ್ನು ಹುಟ್ಟುಹಾಕಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಸೇವೆಯ ಬಗ್ಗೆ ನಿಖರ ಮಾಹಿತಿ ಇದರಿಂದ ತಿಳಿಯಲಿದೆ ಎಂದರು.
ಇದನ್ನೂ ಓದಿ : ಅನಿಶ್ಚಿತತೆ ಪ್ಲೇಗ್ ಇದ್ದಂತೆ : ಜಿ.ಪಂ. ಸಿಇಓಗಳ ಸಭೆಯಲ್ಲಿ ಸಿಎಂ
ಸರ್ಕಾರದ ಸುಮಾರು 99 ಇಲಾಖೆಗಳ 1115 ಸೇವೆಗಳು ಸಕಾಲದಡಿಯಲ್ಲಿ ಬರುತ್ತವೆ. ಪ್ರಾಯೋಗಿಕವಾಗಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಯೋಜನೆಗೆ ಚಾಲನೆ ನೀಡಲಾಗಿದ್ದು ಆಚಾರ್ಯ ಕಾಲೇಜಿನ 3 ಸಾವಿರ ವಿದ್ಯಾರ್ಥಿಗಳು ಸಕಾಲ ಮಿತ್ರರಾಗಿ ನಾಗರಿಕರ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸಲಿದ್ದಾರೆ ಎಂದರು.
ಸಮಾಜದ ಕಟ್ಟಕಡೆಯ ಪ್ರಜೆಯು ಉತ್ತಮ ಬದುಕು ಕಟ್ಟಿಕೊಳ್ಳಲು ನೆರವಾಗುವ ಪೂರಕ ಶಿಕ್ಷಣವನ್ನು ಒದಗಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಇದೇ ವೇಳೆ ತಿಳಿಸಿದರು.
ಐಎಎಸ್ ಅಧಿಕಾರಿ ಡಾ.ಬಿ.ಆರ್.ಮಮತ, ಜಿ.ಮರಿಸ್ವಾಮಿ, ಡಾ. ಪ್ರಕಾಶ್, ಆಚಾರ್ಯ ಕಾಲೇಜಿನ ಸಿಬ್ಬಂದಿ ಇದ್ದರು.