ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಗೊಂಡ “ಬಿ’ ಖಾತಾ ಆಸ್ತಿಗಳಿಗೆ “ಎ’ ಖಾತಾ ನೀಡುವ ಕುರಿತಂತೆ ಸರ್ಕಾರದ ಅಡ್ವೋಕೇಟ್ ಜನರಲ್ ಅವರ ಸಲಹೆ ಪಡೆಯಲು ಮುಂದಾಗಿದ್ದೇವೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆಗೊಂಡ ಬಿ ಖಾತಾ ನಿವೇಶನಗಳಿಗೆ ಬ್ಯಾಂಕ್‌ಗಳಲ್ಲಿ ಸಾಲ ಸೇರಿ ಹಲವು ಸೌಲಭ್ಯಗಳು ದೊರೆಯುತ್ತಿಲ್ಲ. ಹೀಗಾಗಿ ಬಿ ಖಾತಾಗಳನ್ನು ಎ ಖಾತಾಗಳಾಗಿ ಪರಿವರ್ತಿಸುವ ಪ್ರಸ್ತಾಪವಿದೆ. ಆ ನಿಟ್ಟಿನಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಅಡ್ವೋಕೇಟ್ ಜನರಲ್ ಅವರ ಸಲಹೆ ಕೋರಲಾಗಿದ್ದು, ಪಾಲಿಕೆ ಬಜೆಟ್‌ಗೆ ಮುನ್ನ ಸಲಹೆ ಸಿಕ್ಕರೆ ಅದನ್ನು ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಹೇಳಿದರು.
ರಾಜ್ಯ ಬಜೆಟ್‌ನಲ್ಲಿ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿಡಲಾಗಿದ್ದು, ನಮ್ಮ ಕ್ಯಾಂಟೀನ್, ಟೆಂಡರ್‌ಶ್ಯೂರ್ ಯೋಜನೆ, ರಸ್ತೆಗಳ ಉನ್ನತೀಕರಣ, ಕುಡಿಯುವ ನೀರು ಪೂರೈಕೆ ಸೇರಿ ಹಲವಾರು ಯೋಜನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಒಟ್ಟಾರೆಯಾಗಿ ಬಜೆಟ್‌ನಲ್ಲಿ ಎಂಟು ಸಾವಿರ ಕೋಟಿ ರೂ. ಗೂ ಹೆಚ್ಚು ಅನುದಾನ ಬೆಂಗಳೂರಿಗೆ ನೀಡಲು ಉದ್ದೇಶಿಸಲಾಗಿದೆ. ಅದರ ಹಿನ್ನೆಲೆಯಲ್ಲಿ ಪಾಲಿಕೆ ಬಜೆಟ್ ಮತ್ತಷ್ಟು ಜನಪರ ಹಾಗೂ ವಾಸ್ತವಿಕವಾಗಿರುತ್ತದೆ ಎಂದು ಭರವಸೆ ನೀಡಿದರು.
ಆಸ್ತಿಗಳ ಪತ್ತೆಗೆ ಡಿಜಿಟಲ್ ನಂಬರ್: ಪಾಲಿಕೆ ವ್ಯಾಪ್ತಿಯಲ್ಲಿರುವ ವಸತಿ ಮತ್ತು ವಸತಿಯೇತರ ಆಸ್ತಿಗಳ ಪತ್ತೆಗಾಗಿ ಪ್ರತಿ ಮನೆಗೂ ಡಿಜಿಟಲ್ ಡೋರ್ ನಂಬರ್ ನೀಡಲು ನಿರ್ಧರಿಸಲಾಗಿದೆ. ಇದರಿಂದ ಪಾಲಿಕೆಯ ವ್ಯಾಪ್ತಿಯಲ್ಲಿರುವ ಮನೆಗಳ ಸಂಖ್ಯೆ ದೊರೆಯಲಿದೆ. ಇದರೊಂದಿಗೆ ಬಹೃತ್ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆಗೆ ಟೆಂಡರ್ ಆಹ್ವಾನಿಸಲಾಗಿದ್ದು, ತಿಂಗಳಾಂತ್ಯಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ನಗರದಲ್ಲಿರುವ ರುದ್ರಭೂಮಿಗಳು ಮತ್ತು ವಿದ್ಯುತ್ ಚಿತಾಗಾರಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ವಿಶೇಷವಾಗಿ 150 ಕೋಟಿ ರೂ. ಮೀಸಲಿಡಲಾಗುತ್ತಿದೆ. ಜತೆಗೆ ರುದ್ರಭೂಮಿಗಳನ್ನು ಶಾಂತಿಧಾಮಗಳನ್ನಾಗಿ ಪರಿವರ್ತಿಸಿ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ತೋಟಗಾರಿಕೆ ಇಲಾಖೆಗೆ ವಹಿಸಲಾಗುತ್ತಿದ್ದು, ಹಳೆಯ ಮಾರುಕಟ್ಟೆಗಳನ್ನು ತೆರವುಗೊಳಿಸಿ ವಾಹನ ನಿಲುಗಡೆ ಕಟ್ಟಡಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಮಾರ್ಚ್ 25ಕ್ಕೆ ಬಿಬಿಎಂಪಿ ಬಜೆಟ್
2017-18 ನೇ ಸಾಲಿನ ಬಿಬಿಎಂಪಿ ಬಜೆಟ್ ಮಾ.25ರಂದು ಬೆಳಗ್ಗೆ 10.30 ಕ್ಕೆ ಮಂಡಿಸಲಾಗುವುದು.ಈ ಬಾರಿಯ ಪಾಲಿಕೆ ಬಜೆಟ್‌ನಲ್ಲಿ ಜನಪರ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಪಾಲಿಕೆಗೆ ಪ್ರಸಕ್ತ ಸಾಲಿನಲ್ಲಿ ಸಂಗ್ರಹವಾಗಿರುವ ಆದಾಯಕ್ಕೆ ಅನುಗುಣವಾಗಿ ಯೋಜನೆಗಳನ್ನು ಘೋಷಿಸಲಾಗುವುದು.