Advertisement
ಪಂದ್ಯದ 24ನೇ ನಿಮಿಷದಲ್ಲಿ ವರುಣ್ ಕುಮಾರ್ ಪೆನಾಲ್ಟಿ ಕಾರ್ನರ್ ಒಂದನ್ನು ಯಶಸ್ವಿಯಾಗಿ ಗೋಲಾಗಿಸಿ ಭಾರತಕ್ಕೆ ಮುನ್ನಡೆ ತಂದಿತ್ತರು. ಪಂದ್ಯದ 2ನೇ ಗೋಲು 55ನೇ ನಿಮಿಷದಲ್ಲಿ ಸಿಮ್ರನ್‌ಜಿàತ್ ಸಿಂಗ್ ಅವರಿಂದ ದಾಖಲಾಯಿತು. ಇದೊಂದು ಆಕರ್ಷಕ ಡೈವಿಂಗ್ ಫೀಲ್ಡ್ ಗೋಲ್ ಆಗಿತ್ತು. ನಾಯಕ ಮನ್‌ಪ್ರೀತ್ ಸಿಂಗ್ ಅವರ ಅಮೋಘ ಪಾಸ್ ಒಂದನ್ನು ಪಡೆದ ಸಿಮ್ರನ್‌ಜಿàತ್, ತಂಡದ ಮುನ್ನಡೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು.5 ಬಾರಿಯ ಚಾಂಪಿಯನ್ ಆಗಿರುವ ಭಾರತ ರವಿವಾರ ಕೊರಿಯಾ ವಿರುದ್ಧ ಆಡಲಿದೆ.
ಮೊದಲ ಕ್ವಾರ್ಟರ್‌ನಲ್ಲಿ ಇತ್ತಂಡಗಳಿಂದಲೂ ಸಮಬಲದ ಹೋರಾಟ ಕಂಡುಬಂತು. ಹೀಗಾಗಿ ಗೋಲಿಗೂ ಬರಗಾಲ ಬಂತು. ಆದರೆ ದ್ವಿತೀಯ ಕ್ವಾರ್ಟರ್‌ನ 8ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರನ್ನು ವರುಣ್ ಕುಮಾರ್ ಕೈಚೆಲ್ಲಲಿಲ್ಲ. ಅಮೋಘ ಡ್ರ್ಯಾಗ್‌ಫ್ಲಿಕ್ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ರವಾನಿಸುವಲ್ಲಿ ಯಶಸ್ವಿಯಾದರು.ಭಾರತದ ಮಿಡ್ ಫೀಲ್ಡರ್‌ಗಳಾದ ಮನ್‌ಪ್ರೀತ್ ಸಿಂಗ್ ಮತ್ತು ಕೊಥಜಿತ್ ಸಿಂಗ್ ಅನೇಕ ಅವಕಾಶಗಳನ್ನು ತಂದಿತ್ತರೂ ಮುಂಪಡೆಯ ಆಟಗಾರರ ತಪ್ಪಿನಿಂದ ಇವೆಲ್ಲವೂ ಕೈಜಾರಿದವು. ದ್ವಿತೀಯ ಕ್ವಾರ್ಟರ್ ಮುಕ್ತಾಯಕ್ಕೆ 4 ನಿಮಿಷಗಳಿರುವಾಗ ಮನ್‌ದೀಪ್ ಸಿಂಗ್ ಅವಕಾಶವೊಂದನ್ನು ವ್ಯರ್ಥಗೊಳಿಸಿದರು. ಜಪಾನಿಗೆ ಶ್ರೀಜೇಶ್ ತಡೆ
3ನೇ ಕ್ವಾರ್ಟರ್‌ನಲ್ಲಿ ಜಪಾನ್ ಮೊದಲ ಪೆನಾಲ್ಟಿ ಕಾರ್ನರ್ ಪಡೆಯಿತು. ಆದರೆ ಗೋಲಿ ಶ್ರೀಜೇಶ್ ಇದನ್ನು ಯಶಸ್ವಿಯಾಗಿ ತಡೆದರು. ಕೆಲವೇ ಹೊತ್ತಿನಲ್ಲಿ ಜಪಾನೀ ಸ್ಟ್ರೈಕರ್ ಕೆಂಜಿ ಕಿಟಜಾಟೊ ಹೊಡೆತ ಸ್ವಲ್ಪದರಲ್ಲೇ ಮಿಸ್ ಆಯಿತು. 55ನೇ ನಿಮಿಷದ ಬಳಿಕ ಜಪಾನ್ ಗೋಲಿಯನ್ನು ಹೊರಗಿರಿಸಿ ಹೆಚ್ಚುವರಿ ಆಟಗಾರನೊಂದಿಗೆ ಹೋರಾಟ ನಡೆಸಿತು. ಆದರೆ ಇದರ ಲಾಭವಾದದ್ದು ಭಾರತಕ್ಕೆ. ಮರು ಕ್ಷಣದಲ್ಲೇ ಭಾರತದಿಂದ ದ್ವಿತೀಯ ಗೋಲು ಸಿಡಿಯಲ್ಪಟ್ಟಿತು!