ಮಂಗಳೂರು: ಸನಾತನ ಹಿಂದೂ ಧರ್ಮ ಎಂದೆಂದೂ ಅಸ್ತಿತ್ವದಲ್ಲಿರುತ್ತದೆ. ಯಾರಿಂದಲೂ ಇದನ್ನು ಮುಟ್ಟಲು ಅಸಾಧ್ಯ. ಕೇರಳದ ಮುಜರಾಯಿ ಸಚಿವ ಹಿಂದೂವಾಗಿ ಹುಟ್ಟಿ ತನ್ನದೇ ಧರ್ಮಕ್ಕೆ ಅವಮಾನ ಮಾಡಿರುವುದು ಖಂಡನೀಯ.
ಅಯ್ಯಪ್ಪ ಕ್ಷೇತ್ರದ ಕೊಟ್ಯಂತರ ರೂಪಾಯಿ ಅನುದಾನವನ್ನು ಕೇರಳ ಸರಕಾರ ಬಳಸಿಕೊಂಡರೂ ಭಕ್ತರಿಗೆ ಯಾವುದೇ ವ್ಯವಸ್ಥೆಯನ್ನು ಕಲ್ಪಿಸುತ್ತಿಲ್ಲ. ದುರಹಂಕಾರಿ ಸರಕಾರವನ್ನು ಕೇರಳದ ಜನ ಕಿತ್ತೂಗೆಯಬೇಕು ಎಂದು ಮಂಗಳೂರು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಗಣೇಶ್ ಹೇಳಿದರು.
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯನ್ನು ಕೇರಳದ ಮುಜರಾಯಿ ಸಚಿವ ರಾಧಾಕೃಷ್ಣ ನಿಂದಿಸಿದ ಪ್ರಕರಣವನ್ನು ಖಂಡಿಸಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ವತಿಯಿಂದ ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಶಬರಿಮಲೆ ಯಾತ್ರಿಕರನ್ನು “ಬೋಗಸ್ ಭಕ್ತರು’ ಎಂಬ ಸಚಿವರ ಹೇಳಿಕೆ ಖಂಡನೀಯವಾಗಿದ್ದು, ಅವರು ಭಕ್ತರಲ್ಲಿ ಕ್ಷಮೆ ಯಾಚಿಸಬೇಕು. ಶಬರಿಮಲೆಯಲ್ಲಿ ನಿರಂತರ ಭಕ್ತರಿಗೆ ಅನ್ಯಾಯವಾಗುತ್ತಿದೆ. ಕೇರಳ ಸರಕಾರ ಹಿಂದೂಗಳ ತಾಳ್ಮೆ ಪರೀಕ್ಷಿಸುತ್ತಿದೆ. ಸನಾತನ ಧರ್ಮದ ವಿರುದ್ಧವಾಗಿ ಯಾರೇ ನಡೆದುಕೊಂಡರೂ ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದರು.
ಸೇವಾ ಸಮಾಜದ ಉಪಾಧ್ಯಕ್ಷೆ ಕಾತ್ಯಾಯಿನಿ ಮಾನತಾಡಿ, ಹಿಂದೂ ಸಮಾಜಕ್ಕೆ ಅನ್ಯಾಯ ನಡೆದರೆ ಸಹಿಸಲು ಸಾಧ್ಯವಿಲ್ಲ. ಸನಾತನ ಸಂಸ್ಕೃತಿ ಧರ್ಮದ ಆಧಾರದಲ್ಲಿದ್ದರೆ ಅದಕ್ಕೆ ಗೆಲುವು ಖಚಿತ. ಯಾರು ಎಷ್ಟೇ ಪ್ರಯತ್ನ ಪಟ್ಟರೂ ಹಿಂದೂ ಸಮಾಜವನ್ನು ಏನೂ ಮಾಡಲು ಸಾಧ್ಯವಿಲ್ಲ. ಅಯ್ಯಪ್ಪ ಸ್ವಾಮಿಗೆ, ಭಕ್ತರಿಗೆ ಅನ್ಯಾಯವಾದರೆ ನಾವು ಸುಮ್ಮನಿರುವುದಿಲ್ಲ. ಸಮಾಜದ ಮಹಿಳೆಯರು ಹೋರಾಟ ನಡೆಸುವೆವು ಎಂದು ಹೇಳಿದರು.
ಸಮಾಜದ ಪ್ರಮುಖರಾದ ದಿನೇಶ್ ಜೈನ್ ಮಾತನಾಡಿ, ಬಹು ಸಂಖ್ಯಾತರ ವಿಚಾರಗಳಿಗೆ ಧಕ್ಕೆ ತರುವ ಶಕ್ತಿಗಳು ದೇಶದಲ್ಲಿವೆ. ಅಯ್ಯಪ್ಪ ಸ್ವಾಮಿಯನ್ನು ನಿಂದಿಸಿ ನೋವು ತರುವ ಹೇಳಿಕೆ ನೀಡುತ್ತಿದ್ದಾರೆ. ಇದು ಖಂಡನೀಯ. ಶ್ರೀ ಅಯ್ಯಪ್ಪ ಸ್ವಾಮಿಯನ್ನು ನಿಂದಿಸಿದ ಕೇರಳ ಮುಜರಾಯಿ ಸಚಿವ ರಾಧಕೃಷ್ಣ ಕ್ಷಮೆಯಾಚಿಸಬೇಕು ಎಂದರು.
ಗೌರವಾಧ್ಯಕ್ಷ ಮೋಹನ್ ಪಡೀಲ್, ಪ್ರಮುಖರಾದ ಮೋಹನ್ ಬರ್ಕೆ, ಜಗದೀಶ್, ಮಾಧವ, ದಿನೇಶ್ ಜೈನ್, ಅಶೋಕ್, ನಾಗೇಶ್, ಪುರುಷೋತ್ತಮ್, ಜಯಕುಮಾರ್ ಉಪಸ್ಥಿತರಿದ್ದರು.