Advertisement
ತಾಪಂ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಗತಿಯ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಈ ವಿಷಯ ಪ್ರಸ್ತಾಪಿಸಿದ ಅವರು, ಆರೋಗ್ಯ ಕಾರ್ಡ್ ವಿತರಣೆ ಮತ್ತಿತರ ಸೌಲಭ್ಯಕ್ಕಾಗಿ ಅಕ್ರಮಗಳು ಎಗ್ಗಿಲ್ಲದೇ ನಡೆಯುತ್ತಿದ್ದರೂ ಇಲಾಖೆಯ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಿಡಿಕಾರಿದರು.
Related Articles
Advertisement
ಇದಕ್ಕೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ, ಇಂತಹ ಪ್ರಯೋಗಾಲಯಗಳ ಮೇಲೆ ನಿಯಂತ್ರಣ ಹೇರಲು ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳಿದ್ದು ಈ ವಿಚಾರವನ್ನು ಅವರ ಗಮನಕ್ಕೆ ತಂದು ದಾಳಿ ನಡೆಸಿ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಕೆರೆ ಹರಾಜು ಪ್ರಕ್ರಿಯೆ: ಸದಸ್ಯ ಚಂದ್ರಶೇಖರ್ ಮಾತನಾಡಿ, ತಾಲೂಕಿನ ಕರ್ಪೂರವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಟ್ನಾಳು ಗ್ರಾಮದ ಕೆರೆಯನ್ನು ಬಹಿರಂಗವಾಗಿ ಹರಾಜು ಮಾಡುತ್ತಿದ್ದು, ಸರ್ಕಾರದ ನಿರ್ದೇಶನಗಳನ್ನು ಪಾಲಿಸದೆ ಪಂಚಾಯ್ತಿ ಅಧ್ಯಕ್ಷರು, ಅಭಿವೃದ್ದಿ ಅಧಿಕಾರಿಗಳು ತಮಗಿಷ್ಟ ಬಂದಂತೆ ಪ್ರಚಾರವಿಲ್ಲದೆ ಮಾಡುತ್ತಿದ್ದಾರೆ. ಇದರಿಂದ ಪಂಚಾಯ್ತಿಯ ಆದಾಯಕ್ಕೆ ಖೋತಾ ಬೀಳಲಿದ್ದು ಇದರ ಬಗ್ಗೆ ನಿಮಗೆ ತಿಳಿಸಿದರೂ ಹರಾಜನ್ನು ನಿಲ್ಲಿಸಲು ಪ್ರಯತ್ನಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಒ ಗಿರೀಶ್, ನಾನು ಕರೆ ಮಾಡಿ ಕೆರೆ ಹರಾಜು ಬಿಡ್ ನಿಲ್ಲಿಸುವಂತೆ ಸೂಚಿಸಿದ್ದರೂ ಪಂಚಾಯಿತಿ ಆಡಳಿತ ಮಂಡಳಿಯ ಅನುಮೋದನೆಯ ಮೇರೆಗೆ ಹರಾಜು ನಡೆಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಏನಾದರೂ ಲೋಪ ಎಸಗಿದ್ದರೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಅಪೂರ್ಣ ಮಾಹಿತಿ: ತಾಪಂ ಅಧ್ಯಕ್ಷೆ ಮಲ್ಲಿಕಾ ರವಿಕುಮಾರ್ ಮಾತನಾಡಿ, ಸಭೆಗೆ ಬರುವಾಗ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯೊಂದಿಗೆ ಬರಬೇಕು. ಪ್ರತಿ ಸಭೆಗಳಲ್ಲೂ ಕೆಲವರು ಅಪೂರ್ಣ ಮಾಹಿತಿ ನೀಡುತ್ತಿದ್ದು, ಮುಂದಿನ ಸಾಮಾನ್ಯ ಸಭೆಯಲ್ಲಿ ಹೀಗಾದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಸೂಚಿಸಿದರು.
ಸಭೆಯಲ್ಲಿ ಸದಸ್ಯರಾದ ಶ್ರೀನಿವಾಸ ಪ್ರಸಾದ್, ಮುಂಡೂರು ಕುಮಾರ್, ಜಯರಾಮೇಗೌಡ, ಜಿ.ಎಸ್.ಮಂಜುನಾಥ್, ನಾಗರಾಜ್, ಪುಟ್ಟಗೌರಮ್ಮ, ಸಿದ್ದಮ್ಮ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್, ಬಿಸಿಎಂ ವಿಸ್ತರಣಾಧಿಕಾರಿ ಜಿ.ಜೆ.ಮಹೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಿವಶಂಕರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಶಾಲೆ, ಹಾಸ್ಟೆಲ್‌ಗೆ ಯೋಗ್ಯವಲ್ಲದ ನೀರು: ತಾಲೂಕಿನ ಕಾಳೇನಹಳ್ಳಿ ಬಳಿಯ ಆದರ್ಶ ಶಾಲೆ ಮತ್ತು ಶಾಲೆಯ ಹಿಂಭಾಗದಲ್ಲಿರುವ ಬಾಲಕಿಯರ ವಸತಿ ನಿಲಯಕ್ಕೆ ಕುಡಿಯುವ ನೀರಿನ ಸಂಪರ್ಕವಿಲ್ಲ. ಅಲ್ಲಿರುವ ಕೊಳವೆ ಬಾವಿ ನೀರು ಬಳಕೆಗೆ ಯೋಗ್ಯವಿಲ್ಲದಿದ್ದರೂ ಅದನ್ನೇ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ದೊಡ್ಡೇಕೊಪ್ಪಲು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ತೆಗೆದುಗೊಳ್ಳುತ್ತಿಲ್ಲ ಎಂದು ಸದಸ್ಯರು ದೂರಿದರು.
ತಕ್ಷಣ ಸ್ಥಳದಲ್ಲೇ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಕರೆ ಮಾಡಿದ ಇಒ ಗಿರೀಶ್, ಕೂಡಲೇ ಆದರ್ಶ ಶಾಲೆಯ ಬಳಿಗೆ ಆಗಮಿಸುವಂತೆ ಸೂಚಿಸಿದರು. ಸಭೆ ಮುಗಿಯುತ್ತಿದ್ದಂತೆ ಅಧ್ಯಕ್ಷರೊಡಗೂಡಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
45 ಶಾಲಾ ಕೊಠಡಿ ನಿರ್ಮಾಣ: ತಾಲೂಕಿನ ಶಿಕ್ಷಣ ಇಲಾಖೆಯ ವ್ಯಾಪ್ತಿಯ 95 ಶಿಥಿಲ ಶಾಲಾ ಕೊಠಡಿಗಳನ್ನು ನೆಲಸಮ ಮಾಡಲು ರೂಪುರೇಷೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ 45 ಕೊಠಡಿಗಳಿಗೆ ಅನುಮೋದನೆ ದೊರೆತಿದ್ದು, ಶಾಲಾ ಅನುದಾನ ಬಳಸಿಕೊಂಡು ಎಸ್‌ಡಿಎಂಸಿ ವತಿಯಿಂದ ನೆಲಸಮ ಮಾಡುವಂತೆ ತಿಳಿಸಲಾಗಿದೆ. ಅಲ್ಲದೇ ಉದ್ಯೋಗ ಖಾತ್ರಿ ಅನುದಾನ ಬಳಸಿಕೊಂಡು ಶಾಲಾ ಕಾಂಪೌಡ್ ನಿರ್ಮಿಸಲು ಸರ್ಕಾರದಿಂದ ಆದೇಶವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ರಾಜು ತಿಳಿಸಿದರು.