Advertisement

Ayushman Bharat ಹೊಸ ಕಾರ್ಡ್‌ ನೋಂದಣಿಗೆ ಕರಾವಳಿಯಲ್ಲಿ ಹಿನ್ನಡೆ

12:18 AM Jul 25, 2024 | Team Udayavani |

ಮಂಗಳೂರು: ವರ್ಷದ ಹಿಂದೆ ಶೇ. 100 ಗುರಿ ಮುಟ್ಟಬೇಕಿದ್ದ ಆಯುಷ್ಮಾನ್‌ ಭಾರತ್‌ ಹೊಸ ಕಾರ್ಡ್‌ ನೋಂದಣಿ ಕರಾವಳಿಯಲ್ಲಿ ಆಮೆಗತಿಯಲ್ಲಿ ಸಾಗುತ್ತಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 34 ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 45ರಷ್ಟು ಮಾತ್ರ ನೋಂದಣಿಯಾಗಿದೆ.

Advertisement

ಕೆಲವು ವರ್ಷಗಳ ಹಿಂದೆ ರಾಜ್ಯ ಸರಕಾರ ದಿಂದಲೇ ಕಾರ್ಡ್‌ ವಿತರಣೆ ಆಗುತ್ತಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರಕಾರವೇ ಹೊಸದಾಗಿ ಕಾರ್ಡ್‌ ವಿತರಿಸಲು ನಿರ್ಧರಿಸಿತ್ತು. ಆರಂಭದ ದಿನಗಳಲ್ಲಿ ಜಿಲ್ಲೆ ಗ್ರಾಮ ಒನ್‌ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ನೀಡಲಾಗಿತ್ತು.

ಆರಂಭದ ಕೆಲವು ತಿಂಗಳು ಸರ್ವರ್‌ ಸಮಸ್ಯೆ ಹಿನ್ನೆಲೆಯಲ್ಲಿ ನೋಂದಣಿಯೇ ಆಗುತ್ತಿರಲಿಲ್ಲ. ಸಾರ್ವಜನಿಕರು ಕೂಡ ಅಷ್ಟೊಂದು ಉತ್ಸಾಹ ತೋರಿಲ್ಲ. ಬಳಿಕದ ದಿನಗಳಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ನೋಂದಣಿ ಸ್ಥಗಿತಗೊಂಡಿತ್ತು. ಈ ಎಲ್ಲ ಕಾರಣ ಕಾರ್ಡ್‌ ನೋಂದಣಿ ಪ್ರಗತಿ ಮೇಲೂ ಪರಿಣಾಮ ಬೀರಿತ್ತು. ಸಾರ್ವಜನಿಕರಿಗೆ ಉಪಯೋಗ ಆಗಲೆಂದು ಸದ್ಯ ಆನ್‌ಲೈನ್‌ ಮತ್ತು ಆ್ಯಪ್‌ ಮೂಲಕ ಸ್ವಯಂ ನೋಂದಣಿಗೆ ಅವಕಾಶ ನೀಡಲಾಗಿದೆ.

ನೋಂದಣಿ ಹೇಗೆ?
ಇನ್ನು ಮುಂದೆ ಸಾರ್ವಜನಿಕರು ಆಯುಷ್ಮಾನ್‌ ಭಾರತ್‌ ಹೊಸ ಕಾರ್ಡ್‌ ನೋಂದಣಿಗೆ ಗ್ರಾಮ ಒನ್‌ ಕೇಂದ್ರಕ್ಕೆ ಹೋಗಬೇಕೆಂದಿಲ್ಲ. ಬದಲಾಗಿ ಮೊಬೈಲ್‌ ಅಥವಾ ಕಂಪ್ಯೂಟರ್‌ ಮೂಲಕ ಸ್ವಯಂ ಆಗಿ ನೋಂದಣಿ ಮಾಡಬಹುದು. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ “ಆಯುಷ್ಮಾನ್‌ ಕಾರ್ಡ್‌’ ಆ್ಯಪ್‌ ಡೌನ್‌ಲೋಡ್‌ ಮಾಡಬೇಕು. ಬಳಿಕ ಬೆನಿಫೀಶಿಯರಿಯಲ್ಲಿ ಲಾಗಿನ್‌ನಲ್ಲಿ ಮೊಬೈಲ್‌ ನಂಬರ್‌ ಹಾಕಿ ಹೊಂದಾಣಿಕೆ ಮಾಡಿ ಒಟಿಪಿ ನಮೂದಿಸಬೇಕು. ಆಗ ತೆರೆಯುವ ಪುಟದಲ್ಲಿ ರಾಜ್ಯ ಆಯ್ಕೆ ಮಾಡಿ “ಸ್ಕೀಮ್‌’ ಜಾಗದಲ್ಲಿ “ಕುಟುಂಬ್‌’ ಆಯ್ಕೆ ಮಾಡಬೇಕು. ಆಧಾರ್‌ ನಂಬರ್‌ ಜಿಲ್ಲೆ ಅಳವಡಿಸಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕಬಹುದು. ಆಧಾರ್‌ ಕೆವೈಸಿ ಸಹಿತ ಇತರ ವಿವಿರಗಳನ್ನು ಪೂರ್ತಿಗೊಳಿಸಿದ ಬಳಿಕ ಆಯುಷ್ಮಾನ್‌ ಕಾರ್ಡ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆ್ಯಪ್‌ ರಹಿತವಾಗಿ https://beneficiary.nha.gov.in ಪೋರ್ಟಲ್‌ ಕ್ಲಿಕ್‌ ಮಾಡುವ ಮೂಲಕವೂ ನೋಂದಣಿ ಸಾಧ್ಯವಿದೆ. ಅಲ್ಲದೆ, ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.

ಕಾರ್ಡ್‌ ನೋಂದಣಿಗೆ 30 ಲಕ್ಷ ಗುರಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವರ್ಷದ ಹಿಂದೆಯೇ ಹೊಸ ಕಾರ್ಡ್‌ ನೋಂದಣಿ ಆರಂಭಗೊಂಡಿತ್ತು. ರಾಜ್ಯ ಸರಕಾರ ನೀಡಿರುವ ಗುರಿಯಂತೆ ದ.ಕ. ಜಿಲ್ಲೆಯಲ್ಲಿ 10,99,064 ಬಿಪಿಎಲ್‌ ಮತ್ತು 6,41,175 ಎಪಿಎಲ್‌ ಕಾರ್ಡ್‌ದಾರರು ಸೇರಿದಂತೆ ಒಟ್ಟು 17,40,239 ಗುರಿ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ 7,94,264 ಬಿಪಿಎಲ್‌ ಕಾರ್ಡ್‌ ಮತ್ತು 4,72,174 ಎಪಿಎಲ್‌ ಕಾರ್ಡ್‌ ಸಹಿತ ಒಟ್ಟು 12,66,438 ಗುರಿ ನೀಡಿದೆ. ಆದರೆ ಉಭಯ ಜಿಲ್ಲೆಗಳಲ್ಲಿ ಸದ್ಯ ಗುರಿಯ ಶೇ. 50ರಷ್ಟೂ ನೋಂದಣಿ ತಲುಪಿಲ್ಲ.

Advertisement

ಆಯುಷ್ಮಾನ್‌ ಹೊಸ ಕಾರ್ಡ್‌ ನೋಂದಣಿ ಪ್ರಗತಿಯಲ್ಲಿದೆ. ಕೆಲವು ಕಾರಣಾಂತರದಿಂದಾಗಿ ನೋಂದಣಿಗೆ ಹಿನ್ನಡೆ ಉಂಟಾಗಿತ್ತು. ಕೇಂದ್ರ ಸರಕಾರದಿಂದ ಸದ್ಯ ಸ್ವಯಂ ನೋಂದಣಿಗೆ ಅವಕಾಶ ನೀಡಲಾಗಿದೆ. ಅದರಂತೆ ಸಾರ್ವಜನಿಕರು ಮನೆಯಲ್ಲೇ ಮೊಬೈಲ್‌ ಮೂಲಕ ನೊಂದಣಿ ಮಾಡಬಹುದು. ಅಲ್ಲದೆ, ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ನೋಂದಣಿ ಮಾಡಬಹುದು.
– ಡಾ| ಎಚ್‌.ಆರ್‌. ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next