ಈವರೆಗೆ ರಾಜ್ಯದಲ್ಲಿ ಯಾವುದೇ ಸ್ಥಿರಾಸ್ತಿಯ ನೋಂದಣಿಗೆ ಆಯಾಯ ತಾಲೂಕು ವ್ಯಾಪ್ತಿಯಲ್ಲಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಷ್ಟೇ ಅವಕಾಶ ನೀಡಲಾಗಿತ್ತು. ಇನ್ನು ಮುಂದೆ ಆಯಾಯ ಜಿಲ್ಲೆಗಳ ಯಾವುದೇ ನೋಂದಣಾಧಿಕಾರಿ ಕಚೇರಿಯಲ್ಲಿ ಜಾಗದ ಮಾಲಕರು ತಮ್ಮ ಸ್ಥಿರಾಸ್ತಿಗಳನ್ನು ನೋಂದಾಯಿಸಿಕೊಳ್ಳಲು ರಾಜ್ಯ ಸರಕಾರ ಅವಕಾಶ ಕಲ್ಪಿಸಿಕೊಡಲು ತೀರ್ಮಾನಿಸಿದೆ.
ಇಂತಹ ವ್ಯವಸ್ಥೆಯನ್ನು ಈಗಾಗಲೇ ಕಂದಾಯ ಇಲಾಖೆ ರಾಜ್ಯದ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಜಾರಿಗೊಳಿಸಿದ್ದು, ಇದರಲ್ಲಿ ಯಶ ಲಭಿಸಿದ ಹಿನ್ನೆಲೆಯಲ್ಲಿ ಮತ್ತು ಈ ಹೊಸ ವ್ಯವಸ್ಥೆಯ ಜಾರಿಯಿಂದ ಜಾಗದ ನೋಂದಣಿ ಪ್ರಕ್ರಿಯೆಯಿಂದ ಸಾರ್ವಜನಿಕರು ಮತ್ತು ಇಲಾಖೆಗೆ ಬಹಳಷ್ಟು ಪ್ರಯೋಜನಗಳಿರುವ ಹಿನ್ನೆಲೆಯಲ್ಲಿ ಸೆ.2ರಿಂದ ಈ ವ್ಯವಸ್ಥೆಯನ್ನು ರಾಜ್ಯವ್ಯಾಪಿ ವಿಸ್ತರಿಸಲು ನಿರ್ಧರಿಸಿದೆ.
ಸದ್ಯ ಜಾರಿಯಲ್ಲಿರುವ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದವಲ್ಲದೆ ಜನರು ಕೂಡ ಸ್ಥಿರಾಸ್ತಿ ನೋಂದಣಿಗಾಗಿ ತಾಲೂಕು ಕೇಂದ್ರಗಳಿಗೆ ಅಲೆದಾಟ ನಡೆಸಬೇಕಾಗಿತ್ತು. ಅಷ್ಟು ಮಾತ್ರವಲ್ಲದೆ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ದಾಖಲೆಗಳ ಸಂಗ್ರಹಕ್ಕಾಗಿ ಜನತೆ ವಿವಿಧ ಸರಕಾರಿ ಕಚೇರಿಗಳನ್ನು ಸುತ್ತಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಜಿಲ್ಲಾ ವ್ಯಾಪ್ತಿಯಲ್ಲಿ ಎನಿವೇರ್ ನೋಂದಣಿ ಯೋಜನೆಯನ್ನು ಜಾರಿಗೊಳಿಸಿದೆ. ಇದೇ ವೇಳೆ ಕಾವೇರಿ 2.0 ತಂತ್ರಾಶದಲ್ಲೂ ಹಲವು ಮಾರ್ಪಾಡುವ ಮಾಡುವ ಜತೆಜತೆಯಲ್ಲಿ ನೋಂದಣಿ ವ್ಯವಸ್ಥೆಯ ಸುಧಾರಣೆಗೂ ಇಲಾಖೆ ಕೆಲವು ಮಹತ್ತರ ಉಪಕ್ರಮಗಳನ್ನು ಕೈಗೊಂಡಿದೆ.
ಈಗಾಗಲೇ ರಾಜ್ಯದಲ್ಲಿ ಪಹಣಿಗೆ ವಾರಸುದಾರರ ಆಧಾರ್ ಜೋಡಣೆಯನ್ನು ಸರಕಾರ ಕಡ್ಡಾಯಗೊಳಿಸಿದ್ದು, ಈ ಪ್ರಕ್ರಿಯೆ ಭರದಿಂದ ಸಾಗಿದೆ. ರಾಜ್ಯದ ವಿವಿಧೆಡೆ ಮೃತಪಟ್ಟವರ ಹೆಸರಿನಲ್ಲಿದ್ದ ಜಮೀನನನ್ನು ಮೂಲ ವಾರಸುದಾರರಿಗೆ ಮಾಹಿತಿಯನ್ನೇ ನೀಡದೆ ಯಾರ್ಯಾರೋ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಜಮೀನನ್ನು ಅಕ್ರಮವಾಗಿ ಕಬಳಿಸುವ ಕಾರ್ಯ ನಡೆಯುತ್ತಲೇ ಬಂದಿದೆ.
ಇಂತಹ ಕಬಳಿಸಲ್ಪಟ್ಟ ಜಾಗವನ್ನು ಖರೀದಿಸಿ ಜನರು ಮೋಸ ಹೋದ ಹಲವಾರು ಘಟನೆಗಳೂ ನಡೆದಿವೆ. ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಲು ಸರಕಾರ ಜಾಗದ ಆರ್ಟಿಸಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿದೆ. ಇನ್ನು ಸ್ಥಿರಾಸ್ತಿಗಳ ನೋಂದಣಿ ವೇಳೆ ಜನರು ತಮ್ಮ ಆಧಾರ್ ಕಾರ್ಡ್/ಪಾನ್ ಕಾರ್ಡ್ ಅಥವಾ ಪಾಸ್ಪೋರ್ಟ್ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಕೃಷಿ ಭೂಮಿಯಲ್ಲಿ ಅಕ್ರಮವಾಗಿ ತಲೆ ಎತ್ತುತ್ತಿರುವ ಬಡಾವಣೆ ನಿರ್ಮಾಣ ಯೋಜನೆಗಳಿಗೂ ಕಡಿವಾಣ ಬೀಳಲಿದೆ.
ಸರಕಾರದ ಈ ಉಪಕ್ರಮಗಳು ಜನತೆಯ ಹಿತದೃಷ್ಟಿಗೆ ಪೂರಕವಾಗಿದೆಯಲ್ಲದೆ ಕಂದಾಯ ಇಲಾಖೆಯ ಮೇಲಣ ಕಾರ್ಯಬಾಹುಳ್ಯದ ಒತ್ತಡವನ್ನು ಕಡಿಮೆ ಮಾಡಲಿದೆ. ತಮ್ಮ ಸ್ಥಿರಾಸ್ತಿಯನ್ನು ನೋಂದಣಿ ಮಾಡಲಿಚ್ಛಿಸುವ ಭೂ ಮಾಲಕರು ತಮಗೆ ಸಮೀಪವಿರುವ ಯಾ ಒತ್ತಡ ಕಡಿಮೆ ಇರುವ ಉಪನೋಂದಣಾಧಿಕಾರಿಗಳ ಕಚೇರಿಗಳಿಗೆ ತೆರಳಿ ತಮ್ಮ ಕಾರ್ಯವನ್ನು ಪೂರೈಸಿಕೊಳ್ಳಲು ಅನುವು ಮಾಡಿಕೊಟ್ಟಂತಾಗಿದೆ.
ಇದಕ್ಕಿಂತಲೂ ಮುಖ್ಯವಾಗಿ ಸ್ಥಿರಾಸ್ತಿ ನೋಂದಣಿ, ಆಸ್ತಿ ಮೇಲಣ ಸಾಲ, ಮೂಲ ವಾರಸುದಾರರಿಗೆ ಮಾಹಿತಿಯೇ ಇಲ್ಲದೆ ಯಾರ್ಯಾರೋ ಪರಭಾರೆ ಮಾಡಿಕೊಂಡ ಜಮೀನನ್ನು ಖರೀದಿಸಿ ಸಾರ್ವಜನಿಕರು ಇಕ್ಕಟ್ಟಿಗೆ ಸಿಲುಕುವುದು, ಜಾಗದ ಮೂಲ ವಾರಸುದಾರರ ಪತ್ತೆಗೆ ಕಂದಾಯ ಇಲಾಖಾಧಿಕಾರಿಗಳು ಹರಸಾಹಸ ಪಡಬೇಕಾದ ಪರಿಸ್ಥಿತಿ ಮತ್ತಿತರ ಎಲ್ಲ ಗೊಂದಲ, ಸಮಸ್ಯೆಗಳಿಗೆ ತೆರೆ ಎಳೆಯಲು ಈ ಸುಧಾರಣ ಕ್ರಮಗಳು ನೆರವಾಗಲಿವೆ.
ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬಂದಿ ವರ್ಗ ಕೂಡ ಒಂದಿಷ್ಟು ಮುತುವರ್ಜಿ ತೋರಿ ಸಾರ್ವಜನಿಕರ ಆಸ್ತಿ ನೋಂದಣಿ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿಕೊಡಬೇಕು. ಇವೆರಡೂ ಕಾರ್ಯಸಾಧ್ಯ ವಾದಾಗಲಷ್ಟೇ ಕಂದಾಯ ಇಲಾಖೆಯ ಈ ಸುಧಾರಣ ಉಪಕ್ರಮಗಳ ನೈಜ ಆಶಯ, ಉದ್ದೇಶ ಈಡೇರಲು ಸಾಧ್ಯ.