Advertisement

ಆಯುಷ್ಮಾನ್‌ ಭಾರತಕ್ಕೆ ವಿಳಾಸದ ಅನಾರೋಗ್ಯ

12:35 AM Jan 13, 2019 | Team Udayavani |

ಶಿವಮೊಗ್ಗ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್‌ ಭಾರತಕ್ಕೆ ಈಗ ಹೊಸ ಸಮಸ್ಯೆ ಎದುರಾಗಿದೆ. ಕುಟುಂಬವೊಂದಕ್ಕೆ ಆರೋಗ್ಯ ಸೇವೆ ನೀಡುವ ಈ ಯೋಜನೆಯ ಅರ್ಹತಾ ಪತ್ರ ಪಡೆದ ಫಲಾನುಭವಿಗಳ ಕುಟುಂಬ ಹುಡುಕುವುದೇ ದೊಡ್ಡ ಸವಾಲಾಗಿದೆ.

Advertisement

ಹಲವಾರು ಆರೋಗ್ಯ ಸೇವೆಗಳನ್ನು ಒಟ್ಟುಗೂಡಿಸಿ ಆಯುಷ್ಮಾನ್‌ ಭಾರತ ಎಂಬ ಹೊಸ ಯೋಜನೆ ಜಾರಿಗೆ ತರಲಾಗಿದ್ದು, ಇದರ ಫಲಾನುಭವಿಗಳಿಗೆ ತಲುಪಬೇಕಾದ ಪತ್ರಗಳು ಸರಕಾರದಿಂದ ರವಾನೆಯಾಗಿವೆ. ಆದರೆ, ಸರಿಯಾದ ವಿಳಾಸವಿಲ್ಲದೆ ಪತ್ರಗಳೆಲ್ಲ ಈಗ ಅಂಚೆ ಕಚೇರಿಯಲ್ಲಿ ರಾಶಿ ಬಿದ್ದಿವೆ. ವಿಳಾಸ ಹುಡುಕುವುದೇ ಅಂಚೆಯಣ್ಣಂದಿರಿಗೆ ಕೆಲಸವಾಗಿದೆ.

2011ರ ಜನಗಣತಿಯಲ್ಲಿದ್ದ ವಿಳಾಸ: 
ವರ್ಷಕ್ಕೆ 5 ಲಕ್ಷದವರೆಗೆ ಆರೋಗ್ಯ ಸೇವೆ ನೀಡುವ ಈ ಯೋಜನೆ ಪಡೆಯಲು ಸಾರ್ವಜನಿಕರು ಕಾತುರರಾಗಿದ್ದಾರೆ. ಆದರೆ, 2011ರ ಜನಗಣತಿ ಆಧಾರದ ಮೇಲೆ ವಿಳಾಸಗಳನ್ನು ನಮೂದಿಸಲಾಗಿದ್ದು ಬಹುತೇಕ ಅಡ್ರೆಸ್‌ಗಳು ಪೂರ್ಣವಾಗಿಲ್ಲ. ಇದರಿಂದ ಯಾವ ಪ್ರದೇಶ ಎಂಬುದು ಗೊತ್ತಾದರೂ ಮನೆ ಯಾವುದೆಂದು ಹುಡುಕಲು ಪೋಸ್ಟ್‌ಮ್ಯಾನ್‌ಗಳು ಹರಸಾಹಸ ಪಡಬೇಕಾಗಿದೆ.

ಯೋಜನೆಯಡಿ ಜಿಲ್ಲಾಮಟ್ಟದಲ್ಲಿ ಅರ್ಹತಾ ಪತ್ರ ಪಡೆಯಲು ಸಾಕಷ್ಟು ತೊಡಕುಗಳಿದ್ದವು. ಈವರೆಗೆ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳ ಮೂಲಕ ಕೇವಲ 40 ಸಾವಿರ ಮಂದಿ ಕಾರ್ಡ್‌ ಪಡೆದಿರುವುದು ಇದಕ್ಕೆ ಉದಾಹರಣೆ. ಈ ಯೋಜನೆಯಲ್ಲಿ ರಾಜ್ಯ ಸರಕಾರದ ಪಾಲೂ  ಇರುವುದರಿಂದ ಸರಕಾರ ಜಿಲ್ಲಾಮಟ್ಟದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕಾರ್ಡ್‌ ಕೊಡುವ ವ್ಯವಸ್ಥೆ ಮಾಡಿತ್ತು. ಆದರೆ, ಕೇಂದ್ರ ಸರಕಾರ 2011ರ ಜನಗಣತಿ ಆಧಾರದ ಮೇಲೆ ಬಿಪಿಎಲ್‌, ಎಪಿಎಲ್‌ ಕಾರ್ಡ್‌ ಫಲಾನುಭವಿಗಳಿಗೆ ನೇರವಾಗಿ ಅರ್ಹತಾ ಪತ್ರ ತಲುಪಿಸುವ ವ್ಯವಸ್ಥೆ ಮಾಡಿದೆ. ಇದರಿಂದ ನೋಂದಣಿದಾರರ ಸಂಖ್ಯೆ ಹೆಚ್ಚಳವಾಗಲಿದೆ.

ರಾಜ್ಯಾದ್ಯಂತ ಇದೇ ಸಮಸ್ಯೆ:
ರಾಜ್ಯಾದ್ಯಂತ ಈ ಸಮಸ್ಯೆ ಉಂಟಾಗಿದೆ. ಅಂಚೆ ಇಲಾಖೆ ವಿಳಾಸ ಹುಡುಕಲು ಹರಸಾಹಸ ಪಡುತ್ತಿದ್ದು, ಅಂಚೆಯಣ್ಣಂದಿರು ಸ್ವಲ್ಪ ನಿರ್ಲಕ್ಷé ವಹಿಸಿದರೂ ಕಾರ್ಡ್‌ ತಲುಪೋದು ಕಷ್ಟ. ಇನ್ನು, ನಗರ ಪ್ರದೇಶದಲ್ಲಿ ವಿಳಾಸದ ಗೊಂದಲ ಹೆಚ್ಚಾಗಿದೆ. ಸಾಕಷ್ಟು ಮಂದಿ ಮನೆ ಬದಲಾಯಿಸಿದ್ದರೆ, ಅಪೂರ್ಣ ವಿಳಾಸ, ಮನೆ ಯಜಮಾನನ ಸಾವು, ಅಕ್ಕ-ಪಕ್ಕದ ಮನೆಯಲ್ಲಿರುವ ಎಷ್ಟೋ ಮಂದಿಗೆ ಫಲಾನುಭವಿಗಳ ಹೆಸರು, ಪರಿಚಯ ಇಲ್ಲದ ಕಾರಣ ವಿಳಾಸ ಹುಡುಕುವುದು ಕಷ್ಟವಾಗಿದೆ. ಕೆಲವು ಪತ್ರಗಳಲ್ಲಿ ವ್ಯಕ್ತಿಯ ಹೆಸರಿಲ್ಲ, ಮನೆ ನಂಬರ್‌ ಇಲ್ಲ. ಇವೆರಡೂ ಇದ್ದರೆ ಯಾವ ಕ್ರಾಸ್‌ ಎಂಬುದೇ ಇಲ್ಲ. 2011ರ ಸಾಮಾಜಿಕ ಹಾಗೂ ಆರ್ಥಿಕ ಜನಗಣತಿ ಆಧಾರದ ಮೇಲೆ ಆಯುಷ್ಮಾನ್‌ ಅರ್ಹತಾ ಪತ್ರಗಳನ್ನು ಮುದ್ರಣಗೊಳಿಸಿರುವುದೇ ಈ ಯಡವಟ್ಟಿಗೆ ಕಾರಣ.

Advertisement

ಜೊತೆಗೆ, 2011ರ ಜನಗಣತಿ ಆಧಾರದ ಮೇಲೆ ಅರ್ಹತಾ ಪತ್ರಗಳು ತಲುಪುತ್ತಿರುವುದು ಮತ್ತೂಂದು ಗೊಂದಲ ಸೃಷ್ಟಿಸಿದೆ. 2011ರ ನಂತರ ಬಿಪಿಎಲ್‌, ಎಪಿಎಲ್‌ ಕಾರ್ಡ್‌ ಮಾಡಿಸಿಕೊಂಡವರಿಗೆ ಈ ಪತ್ರ ಬರುವುದಿಲ್ಲ. ಇವರು ಏನು ಮಾಡಬೇಕು ಎಂಬ ಗೊಂದಲ ಮೂಡಿದೆ.

ವಾಪಸ್‌ ಕಳುಹಿಸದಂತೆ ಎಚ್ಚರ: 
ವಿಳಾಸ ಸರಿ ಇಲ್ಲ ಎಂಬ ಕಾರಣಕ್ಕೆ ಪತ್ರಗಳನ್ನು ವಾಪಸ್‌ ಕಳುಹಿಸದಂತೆ ಜಿಲ್ಲಾ ಅಂಚೆ ಕಚೇರಿ ಖಡಕ್‌ ಸೂಚನೆ ನೀಡಿದೆ. ಸ್ಥಳೀಯ ಪಡಿತರ ಅಂಗಡಿಗಳಲ್ಲಿ ವಿಳಾಸದ ಬಗ್ಗೆ ಪರಿಶೀಲನೆ ಮಾಡಿಕೊಂಡು ಪತ್ರ ತಲುಪಿಸಬೇಕು. ಎಲ್ಲ ಪ್ರಯತ್ನದ ನಂತರವೂ ವಿಳಾಸ ಸಿಗದಿದ್ದರೆ ಮೇಲಾಧಿಕಾರಿಗಳ ಬಳಿ ಸಮಸ್ಯೆಯನ್ನು ಗಮನಕ್ಕೆ ತಂದು ವಾಪಸ್‌ ಕಳುಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಶೇ.15ರಷ್ಟು ವಿತರಣೆ: 
ಶಿವಮೊಗ್ಗ ಜಿಲ್ಲೆಯಲ್ಲಿ ಬಿಪಿಎಲ್‌, ಎಪಿಎಲ್‌ ಕಾರ್ಡ್‌ ಹೊಂದಿರುವ 6,00,500 ಮಂದಿಗೆ ಅರ್ಹತಾ ಪತ್ರ ಬಂದಿದೆ. ಜ.1ರಿಂದ ವಿತರಣೆ ಮಾಡಲಾಗುತ್ತಿದ್ದು, ಈವರೆಗೆ ಶೇ.15ರಷ್ಟು ವಿತರಣೆ ಮಾಡಲಾಗಿದೆ. ವಿಳಾಸ ಸರಿ ಇಲ್ಲ ಎಂಬ ಕಾರಣಕ್ಕೆ ಪೋಸ್ಟ್‌ಮ್ಯಾನ್‌ ನಿಮಗೆ ಅರ್ಹತಾ ಪತ್ರ ತಲುಪಿಸದಿದ್ದರೆ ನೀವೇ ಸ್ಥಳೀಯ ಪೋಸ್ಟ್‌ ಆಫೀಸ್‌ಗೆ ಹೋಗಿ ಆಧಾರ್‌ ಅಥವಾ ಪಡಿತರ ಚೀಟಿ ತೋರಿಸಿ ಅರ್ಹತಾ ಪತ್ರ ಪಡೆಯಬಹುದು. ಕೇಂದ್ರ ಸರಕಾರದಿಂದ ಬಂದಿರುವ ಪತ್ರದಲ್ಲಿ ನೀವು ಯೋಜನೆಗೆ ಅರ್ಹರು ಎಂಬ ಪ್ರಧಾನಿ ಮೋದಿ ಅವರ ಸಂದೇಶವಿರುವ ಪತ್ರವಿದೆ. ಇದನ್ನು ಪಡೆದು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು.

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next