Advertisement

ಆಯುಷ್ಮಾನ್ ಭಾರತ್ ಯೋಜನೆಯಿಂದ 10 ಕೋಟಿ ಜನರಿಗೆ ಲಾಭ: ಸಚಿವ ಕೆ.ಗೋಪಾಲಯ್ಯ

02:36 PM Jun 03, 2022 | Team Udayavani |

ಹಾಸನ: ಪ್ರಧಾನಮಂತ್ರಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ  ಆಯುಷ್ಮಾನ್ ಭಾರತ್ ಯೋಜನೆಯ ಲಾಭವನ್ನು ದೇಶದ 10 ಕೋಟಿ ಜನರು ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

Advertisement

ಕೇಂದ್ರದ ಬಿಜೆಪಿ ಸರ್ಕಾರ 8 ವರ್ಷ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆ ಬಗ್ಗೆ ಹಾಸನದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಜ್ವಲ ಯೋಜನೆ ಮೂಲಕ ದೇಶದ ಎಂಟು ಕೋಟಿ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್ ನೀಡಿದ ಶ್ರೇಯಸ್ಸು ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.

ಕೇಂದ್ರದಲ್ಲಿ ಪ್ರಧಾನಿ ಮೋದಿಯವರು ಎಂಟು ವರ್ಷ ಆಡಳಿತ ನಡೆಸಿದ್ದು, ಅವರು ಮಾಡಿರುವ ಸಾಧನೆಯನ್ನು ಜನರಿಗೆ ತಿಳಿಸುವುದು ಪಕ್ಷದ ಕರ್ತವ್ಯವಾಗಿದೆ. 2014 ರಲ್ಲಿ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು. ಐದು ವರ್ಷ ಸುದೀರ್ಘ ಆಡಳಿತದ ಬಳಿಕ 282 ಇದ್ದ ಬಿಜೆಪಿ ಸಂಸತ್ ಸದಸ್ಯರ ಸ್ಥಾನ 306 ಕ್ಕೆ ಏರಿಗೆ ಆಯಿತು. ಹೀಗೆ ಮೂರು ದಶಕದ ನಂತರ ಕೇಂದ್ರದಲ್ಲಿ ಒಂದೇ ಪಕ್ಷ ಎರಡು ಬಾರಿ ಅಧಿಕಾರಕ್ಕೆ ಬಂದಿರುವುದು ಮೋದಿಯವರ ಜನಪ್ರಿಯತೆಗೆ ಇರುವ ಸಾಕ್ಷಿ ಎಂದರು.

ಬಡತನದ ಹಿನ್ನೆಲೆಯಲ್ಲಿ ಬಂದ ಮೋದಿವರು ದೇಶದಲ್ಲಿ ಭ್ರಷ್ಟಾಚಾರ ರಹಿತ ಅಡಳಿತ ನೀಡಿದ್ದಾರೆ. ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಚಿಂತನೆ ಮಾಡಿದೆ, ತೋಟಗಾರಿಕೆ ಬೆಳೆಗೆ ಉತ್ತೇಜನ ನೀಡಿದೆ. ಅಹಾರ ಧಾನ್ಯ ಗಳ ಉತ್ಪಾದನೆ 315 ಮಿಲಿಯನ್ ಟನ್‌ಗೆ ಏರಿಕೆ ಕಂಡಿದೆ. ಭತ್ತದ ಬೆಂಬಲ ಬೆಲೆಯನ್ನು 1310 ರಿಂದ 1940 ಕ್ಕೆ ಏರಿಕೆ ಮಾಡಲಾಗಿದೆ. ರಾಗಿಗೆ 1650 ಇದ್ದ ಬೆಲೆಯನ್ನು 3375 ಏರಿಕೆ ಮಾಡಿರುವುದೇ ಇದೇ  ನರೇಂದ್ರ ಮೋದಿಯವರ ಸರ್ಕಾರ. ಜನಧನ್ ಯೋಜನೆ ಮೂಲಕವೂ ಬಡವರಿಗೆ ನೇರವಾಗಿ ಖಾತೆಗೆ ಹಣ ಸಂದಾಯ ಮಾಡಿ ನೆರವಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಪ್ರೀತಂಗೌಡ, ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಲಹಳ್ಳಿ ಸುರೇಶ್ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next