ಮಂಗಳೂರು : ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯದ ಕೊರಗ ಜನಾಂಗದವರನ್ನು ಪಟ್ಟಿ ಮಾಡಿ, ಜಿಲ್ಲೆಯ ಎಲ್ಲ ಗ್ರಾ.ಪಂ. ಮಟ್ಟದಲ್ಲಿಯೇ ಆಯುಷ್ಮಾನ್ ಕಾರ್ಡ್ ಉಚಿತವಾಗಿ ವಿತರಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊರಗ ಜನಾಂಗದವರ ಸಮಗ್ರ ಅಭಿವೃದ್ಧಿ ಕುರಿತು ನಗರದ ಜಿಲ್ಲಾ ಪಂಚಾಯತ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರಗ ಹಾಗೂ ಪ. ಪಂಗಡದ ಕೆಲವರಲ್ಲಿ ಆಯುಷ್ಮಾನ್ ಯೋಜನೆಯ ಬಗ್ಗೆ ಹೆಚ್ಚಿನ ಅರಿವಿಲ್ಲ. ಆಯುಷ್ಮಾನ್ ಕಾರ್ಡ್‌ಗೆ ತಗುಲುವ ಅರ್ಜಿ ಶುಲ್ಕವನ್ನು ಪ. ಜಾತಿ/ಪಂಗಡದ ಅನುದಾನದಲ್ಲಿ ಭರಿಸುವಂತೆ ಪಿಡಿಒಗಳಿಗೆ ಸೂಚಿಸಿದರು.
ಕೊರಗ ಸಮುದಾಯದವರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಾದಾಗ, ವಿವಿಧ ವೈದ್ಯಕೀಯ ಪರೀಕ್ಷೆಗಾಗಿ ಮಾರ್ಗದರ್ಶನ ನೀಡಲು ಕೊರಗ ಸಮುದಾಯದ ಒಬ್ಬ ವಿದ್ಯಾವಂತ ಯುವಕ ಅಥವಾ ಯುವತಿಯನ್ನು ಸಹಾಯಕರನ್ನಾಗಿ ತಾತ್ಕಲಿಕವಾಗಿ ನಿಯೋಜಿಸಬೇಕು. ಆ ಸಮುದಾಯದಲ್ಲಿ ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ ಹೊಂದದವರ ಪಟ್ಟಿ ಮಾಡಿ ಈ ತಿಂಗಳ ಅಂತ್ಯದೊಳಗೆ ನೀಡುವಂತೆ ತಿಳಿಸಿದರು.
ಕೊರಗ ಸಮುದಾಯದ ವಿದ್ಯಾವಂತ ಯುವಕ ಹಾಗೂ ಯುವತಿಯರ ಮಾಹಿತಿಯನ್ನು ಸಂಗ್ರಹಿಸಿ, ಅವರಿಗಿರುವ ಉದ್ಯೋಗವಕಾಶಗಳ ಬಗ್ಗೆ ಜೂನ್ ಮೂರನೇ ವಾರದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೊರಗ ಸಮಾವೇಶವನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.