Advertisement

ಆಯುಷ್ಮಾನ್‌ ಜತೆ ಆರೋಗ್ಯ ಕರ್ನಾಟಕ ವಿಲೀನ

06:00 AM Sep 06, 2018 | Team Udayavani |

ಬೆಂಗಳೂರು: ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಮತ್ತು ಕೇಂದ್ರದ ಆಯುಷ್ಮಾನ್‌ ಭಾರತ ಯೋಜನೆಗಳ ವಿಲೀನ ಕುರಿತಂತೆ ಇರುವ ಗೊಂದಲಗಳಿಗೆ ತೆರೆಬೀಳಲಿದೆ. ಎರಡೂ ಯೋಜನೆಗಳನ್ನು ವಿಲೀನಗೊಳಿಸಿ ಜಾರಿ ಮಾಡುವ ಬಗ್ಗೆ ರಾಜ್ಯ  ಸರ್ಕಾರ ತಾತ್ವಿಕವಾಗಿ ಒಪ್ಪಿದ್ದು, ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.

Advertisement

ಚಿಕಿತ್ಸಾ ಪ್ಯಾಕೇಜ್‌ಗಳ ದರ ಹೆಚ್ಚಳ, ಪ್ಯಾಕೇಜ್‌ಗಳ ಸಂಖ್ಯೆ ಹೆಚ್ಚಳ ಸೇರಿದಂತೆ ಆರೋಗ್ಯ ಕರ್ನಾಟಕ ಯೋಜನೆಗೆ ಪೂರಕವಾಗಿ ಆಯುಷ್ಮಾನ್‌ ಭಾರತ ಯೋಜನೆಯಲ್ಲಿ ಕೆಲವೊಂಂದು ಮಾರ್ಪಾಡುಗಳನ್ನು ಮಾಡಲು ಕೇಂದ್ರ ಸರ್ಕಾರ ಒಪ್ಪಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎರಡೂ ಯೋಜನೆಗಳನ್ನು ವಿಲೀನಗೊಳಿಸುವ ಇಂಗಿತ ವ್ಯಕ್ತಪಡಿಸಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್‌ ಭಾರತ ಯೋಜನೆಗಳ ವಿಲೀನ ಕುರಿತಂತೆ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರು, ಖಾಸಗಿ ತಜ್ಞ ವೈದ್ಯರು ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ವಿಷಯ ತಿಳಿಸಿದರು.

ಎರಡೂ ಯೋಜನೆಗಳ ವಿಲೀನಕ್ಕೆ ಇದ್ದ ಕೆಲವು ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಮಾಹಿತಿ ಪಡೆಯುವಂತೆ ಮಂಗಳವಾರದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿತ್ತು. ಅದರಂತೆ ಅವರು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಯವನ್ನು ಸಂಪರ್ಕಿಸಿ ಲಿಖೀತ ಮಾಹಿತಿ ನೀಡುವಂತೆ ಕೋರಿದ್ದರು. ಅವರು ಮಾಹಿತಿ ಕಳುಹಿಸಿಕೊಟ್ಟಿದ್ದು, ರಾಜ್ಯ ಸರ್ಕಾರ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸ್ಪಷ್ಟೀಕರಣ ನೀಡಿದ್ದಾರೆ ಎಂದರು.

ಜನತೆಗೆ ಅನುಕೂಲಕರ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಉದ್ದೇಶ. ಈ ಹಿನ್ನೆಲೆಯಲ್ಲಿ ಕೇಂದ್ರದ ಆಯುಷ್ಮಾನ್‌ ಭಾರತ ಯೋಜನೆಯಲ್ಲಿರುವ ಕೆಲವೊಂದು ಲೋಪಗಳಿದ್ದು, ಇದರಿಂದ ಎರಡೂ ಯೋಜನೆಗಳನ್ನು ವಿಲೀನಗೊಳಿಸಿ ಜಾರಿಗೊಳಿಸುವುದು ಕಷ್ಟಸಾಧ್ಯವಾಗಿತ್ತು. ಹೀಗಾಗಿ ಕೇಂದ್ರದ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟು ಲಿಖೀತವಾಗಿ ಸ್ಪಷ್ಟೀಕರಣ ಪಡೆಯಲಾಗಿದೆ. ಈ ಬಗ್ಗೆ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರು, ಖಾಸಗಿ ತಜ್ಞ ವೈದ್ಯರ ಜತೆ ಸಮಾಲೋಚನೆ ನಡೆಸಿದ ಬಳಿಕ ಎರಡೂ ಸೇವೆಗಳನ್ನು ವಿಲೀನಗೊಳಿಸುವ ಕಡತವನ್ನು ಗುರುವಾರದ ಸಂಪುಟ ಸಭೆ ಮುಂದೆ ಮಂಡಿಸುವಂತೆ ಆರೋಗ್ಯ ಇಲಾಖೆ ಮತ್ತು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

ಎರಡೂ ಯೋಜನೆಗಳನ್ನು ವಿಲೀನಗೊಳಿಸಿದ ಬಳಿಕವೂ ಆಯುಷ್ಮಾನ್‌ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ ಮೊತ್ತಕ್ಕಿಂತ ದುಪ್ಪಟ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಆದರೆ, ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆರ್ಥಿಕ ಹೊರೆ ಬಗ್ಗೆ ಯೋಚಿಸದೆ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದ ಬೇಡಿಕೆಗಳಿಗೆ ಸ್ಪಂದಿಸಿದ ಕೇಂದ್ರ
– ಬಡವರಿಗೆ ಉಚಿತ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಲವು ವರ್ಷಗಳಿಂದ ರಾಷ್ಟ್ರಕ್ಕೆ ಮಾದರಿಯಾಗುವ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಮೇಲ್ದರ್ಜೆಗೇರಿಸಲು ಅವಕಾಶ ಕೋರಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದೆ.
– ಆಯುಷ್ಮಾನ್‌ ಭಾರತ ಯೋಜನೆಯಡಿ ಚಿಕಿತ್ಸಾ ಪ್ಯಾಕೇಜ್‌ಗಳಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರ ಕಮ್ಮಿಯಿದ್ದು, ಇದನ್ನು ಆರೋಗ್ಯ ಕರ್ನಾಟಕ ಯೋಜನೆಯ ದರಕ್ಕೆ ಅನುಸಾರ ನಿಗದಿಪಡಿಸಬೇಕು ಎಂಬ ಬೇಡಿಕೆಗೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
– ಆಯುಷ್ಮಾನ್‌ ಭಾರತ ಯೋಜನೆಗಿಂತ ಆರೋಗ್ಯ ಕರ್ನಾಟಕ ಯೋಜನೆಯಡಿ 250ರಿಂದ 260 ಹೆಚ್ಚುವರಿ ಚಿಕಿತ್ಸಾ ಪ್ಯಾಕೇಜ್‌ಗಳಿದ್ದು, ವಿಲೀನ ಸಂದರ್ಭದಲ್ಲಿ ಈ ಪ್ಯಾಕೇಜ್‌ಗಳನ್ನೂ ಪರಿಗಣಿಸಬೇಕು ಎಂಬ ಕೋರಿಕೆಗೂ ಕೇಂದ್ರ ಸರ್ಕಾರ ಸ್ಪಂದಿಸಿದೆ.
– ಆರೋಗ್ಯ ಕರ್ನಾಟಕ ಯೋಜನೆಯಡಿ ಬಳಕೆದಾರರ ಶುಲ್ಕ ಸಂಗ್ರಹಿಸಲು ಅವಕಾಶವಿದ್ದು, ಇದನ್ನು ಆಯುಷ್ಮಾನ್‌ ಭಾರತ ಯೋಜನೆಗೂ ವಿಸ್ತರಿಸಬೇಕು ಎಂಬ ರಾಜ್ಯ ಸರ್ಕಾರದ ಕೋರಿಕೆಯನ್ನು ಕೇಂದ್ರ ಸರ್ಕಾರ ಮಾನ್ಯ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next