ಮೈಸೂರು: ಸಾರ್ವಜನಿಕರಲ್ಲಿ ಆರೋಗ್ಯ ಹಾಗೂ ಆಯುರ್ವೇದದ ಕುರಿತು ಅರಿವು ಮೂಡಿಸಲು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ “ಆಯುರ್ವೇದದ ನಡಿಗೆ ಆರೋಗ್ಯದ ಕಡೆಗೆ’ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ವೃತ್ತದಲ್ಲಿ 3ನೇ ರಾಷ್ಟ್ರೀಯ ಆರ್ಯುವೇದ ದಿನಾಚರಣೆ ಹಿನ್ನೆಲೆಯಲ್ಲಿ ನಡೆಸಲಾದ ಜನಜಾಗೃತಿ ಜಾಥಾಗೆ ಹಿರಿಯ ಪತ್ರಕರ್ತ ಅಂಶಿ ಪ್ರಶನ್ನ ಕುಮಾರ್ ಚಾಲನೆ ನೀಡಿದರು.
ಜಾಗೃತಿ ಜಾಥಾದಲ್ಲಿ ಹೆಜ್ಜೆಹಾಕಿದ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಹೆಜ್ಜೆಹಾಕುವ ಮೂಲಕ, ಸಾರ್ವಜನಿಕರಲ್ಲಿ ಅರಿವು ಮೂಡಿಸಿದರಲ್ಲದೆ, ಆಯುರ್ವೇದದ ಮಹತ್ವ ಸಾರಿದರು.
ಆಯುರ್ವೇದ ಕಾಲೇಜು ವೃತ್ತದಿಂದ ಆರಂಭವಾದ ಜಾಥಾ ಜೆ.ಕೆ.ಮೈದಾನ, ರೈಲ್ವೆ ನಿಲ್ದಾಣ ವೃತ್ತ, ಮೆಟ್ರೋಪೋಲ್ ವೃತ್ತ, ಕಲಾಮಂದಿರ, ಕುಕ್ಕರಹಳ್ಳಿ ಮಾರ್ಗವಾಗಿ ತೆರಳಿ ಬೋಗಾದಿ ರಸ್ತೆಯಲ್ಲಿರುವ ಚಂದನವನದಲ್ಲಿ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ರಾಮಲಿಂಗ ಸೇರಿದಂತೆ ಆಯುರ್ವೇದ ವೈದ್ಯಕೀಯ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಸೇರಿದಂತೆ ಅಂದಾಜು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.