Advertisement

ಆಯುಧಪೂಜೆಗೆ ಭರ್ಜರಿ ವ್ಯಾಪಾರ

12:05 PM Oct 19, 2018 | |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿದೆ. ವಿಜಯದಶಮಿ ಮುನ್ನಾ ದಿನದಂದು ಆಚರಿಸುವ ಆಯುಧಪೂಜೆಗಾಗಿ ನಗರದೆಲ್ಲೆಡೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಯುಧಪೂಜೆ ಹಿನ್ನೆಲೆಯಲ್ಲಿ ಬುಧವಾರ ನಗರದೆಲ್ಲೆಡೆ ಭರ್ಜರಿ ವ್ಯಾಪಾರ-ವಹಿವಾಟು ನಡೆಯಿತು. 

Advertisement

ಆಯುಧಪೂಜೆ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ನಗರದ ಮಾರುಕಟ್ಟೆಗಳಲ್ಲಿ ವ್ಯಾಪಾರದ ಭರಾಟೆ ಜೋರಾಗಿತ್ತು. ಮಳೆ ಹಾಗೂ ಸಂಜೆ ವೇಳೆ ಉಂಟಾಗುವ ಜನದಟ್ಟಣೆ ಕಾರಣಕ್ಕೆ ಮುಂಜಾನೆಯೇ ಮಾರುಕಟ್ಟೆಗೆ ತೆರಳಿದ ಸಾರ್ವಜನಿಕರು ಹಬ್ಬಕ್ಕೆ ಅಗತ್ಯವಿರುವ ಹೂವು-ಹಣ್ಣು, ಬೂದಗುಂಬಳಕಾಯಿ,

ಸಿಹಿ ತಿನಿಸು ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿ ಖರೀದಿಸಿದರು. ಪ್ರಮುಖವಾಗಿ ನಗರದ ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ, ವೀರನಗೆರೆ, ಧನ್ವಂತ್ರಿ ರಸ್ತೆ, ಅಗ್ರಹಾರ ವೃತ್ತ, ಅಗ್ರಹಾರದ ಕೆ.ಆರ್‌.ಮಾರುಕಟ್ಟೆ, ಎಂ.ಜಿ.ರಸ್ತೆ, ನಂಜುಮಳಿಗೆ ಮುಂತಾದ ಕಡೆಗಳಲ್ಲಿ ಹಬ್ಬದ ವ್ಯಾಪಾರ ಜೋರಾಗಿತ್ತು. 

ಪ್ರತಿ ಹಬ್ಬದಂತೆ ಆಯುಧಪೂಜೆಗೂ ಗ್ರಾಹಕರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಮುಟ್ಟಿತು. ಆಯುಧಪೂಜೆಯಲ್ಲಿ ಹೆಚ್ಚಾಗಿ ಬಳಸಲಾಗುವ ಸೇವಂತಿಗೆ ಹೂವು ಸೇರಿದಂತೆ ಎಲ್ಲಾ ಬಗೆಯ ವಸ್ತುಗಳು, ಹಣ್ಣುಗಳ ಬೆಲೆಯಲ್ಲಿ ಪ್ರತಿದಿನಕ್ಕಿಂತಲೂ ಹೆಚ್ಚಾಗಿತ್ತು. ಸೇವಂತಿಗೆ ಹೂವು ಒಂದು ಮಾರಿಗೆ 80ರೂ. ಹಾರಕ್ಕೆ 250 ರೂ., ಮಲ್ಲಿಗೆ ಕೆಜಿ 700 ರೂ., ಕಾಕಡ ಕೆಜಿ 600,

ಸುಗಂಧರಾಜ ಕೆಜಿಗೆ 240 ರೂ., ಕನಕಾಂಬರ ಮಾರಿಗೆ 50, ಕೆಜಿ 400 ರೂ., ಹೂವಿನ ಹಾರಗಳು 100 ರಿಂದ 120 ರೂ., ಬಾಳೆಕಂದು ಜೋಡಿ 20 ರೂ, ದೊಡ್ಡದು ಒಂದಕ್ಕೆ 30ರೂ. ರೂ. ಬಾಳೆ ಎಲೆ 1ಕ್ಕೆ 3ರೂ. ಬೂದುಗುಂಬಳ ಕೆಜಿ 25 ರೂ. ಗಾತ್ರಕ್ಕೆ ತಕ್ಕಂತೆ 80-200ರೂ., ತೆಂಗಿನಕಾಯಿ 15 ರಿಂದ 30 ರೂ., ನಿಂಬೆಕಾಯಿ 10 ರೂ.ಗೆ 2-4, ಏಲಕ್ಕಿ ಬಾಳೆಹಣ್ಣು ಡಜನ್‌ಗೆ 50 ರೂ.ಗೆ ಮಾರಾಟ ಮಾಡಲಾಯಿತು.

Advertisement

ಕೆಲಕಾಲ ಮಳೆ ಅಡ್ಡಿ: ನಗರದಲ್ಲಿ ಕಳೆದೆರಡು ದಿನಗಳಿಂದ ಆರ್ಭಟಿಸುತ್ತಿರುವ ಮಳೆರಾಯ ಆಯುಧಪೂಜೆ ವ್ಯಾಪಾರಕ್ಕೆ ಅಡ್ಡಿಯುಂಟು ಮಾಡಿದ. ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಸುರಿದ ಮಳೆಯಿಂದಾಗಿ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ವ್ಯಾಪಾರ ನಡೆಸುತ್ತಿದ್ದವರಿಗೆ ತೊಂದರೆಯಾಯಿತು.

ಕೆಲವು ಗಂಟೆಗಳ ಕಾಲ ಅಬ್ಬರಿಸಿದ ವರುಣನ ಆರ್ಭಟದಿಂದ ಪಾರಾಗಲು ವ್ಯಾಪಾರಿಗಳು, ಗ್ರಾಹಕರು ಮಳೆಯಿಂದ ಪರದಾಡಬೇಕಾಯಿತು. ಆದರೆ ಸಂಜೆ ಬಳಿಕ ಮಳೆರಾಯ ಸ್ವಲ್ಪಮಟ್ಟಿನ ಬಿಡುವು ನೀಡಿದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳತ್ತ ಮುಖ ಮಾಡಿದ ಗ್ರಾಹಕರು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು.

ಇಂದು ಅರಮನೆಯಲ್ಲಿ ಆಯುಧಪೂಜೆ: ಶರನ್ನವರಾತ್ರಿಯ 9ನೇ ದಿನದಂದು ಆಚರಿಸುವ ಆಯುಧ ಪೂಜೆಗೆ ನಗರದೆಲ್ಲೆಡೆ ತಯಾರಿ ಮಾಡಿಕೊಂಡಂತೆ ಅಂಬಾವಿಲಾಸ ಅರಮನೆಯಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅ.18ರಂದು ನಡೆಯುವ ಆಯುಧಪೂಜೆಯಲ್ಲಿ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಅರಮನೆಯ ಕಲ್ಯಾಣಮಂಟಪದ ಆವರಣದಲ್ಲಿ ಆಯುಧ ಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು ಅರಸರ ಕಾಲದ ಖಾಸಾ ಆಯುಧಗಳು, ವಾಹನಗಳು ಸೇರಿದಂತೆ ಇನ್ನಿತರ ವಸ್ತುಗಳಿಗೆ ಯದುವೀರ್‌ ಅವರು ಪೂಜೆ ಸಲ್ಲಿಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next