ಸತೀಶ್ ನೀನಾಸಂ ಅಭಿನಯದ “ಅಯೋಗ್ಯ’ ಚಿತ್ರ ತೆಲುಗಿನತ್ತ ಮುಖ ಮಾಡಿದ್ದು, ಅಲ್ಲಿ ಬಿಡುಗಡೆ ಸಮಸ್ಯೆ ಎದುರಿಸಿದ್ದು ಎಲ್ಲವೂ ಗೊತ್ತು. ಈಗ ಹೊಸ ಸುದ್ದಿ ಅಂದರೆ, ಹೈದರಾಬಾದ್‌ನಲ್ಲಿ ಬಿಡುಗಡೆಗೆ ಅಡ್ಡಿಯಾಗಿದ್ದ ಆ ಸಮಸ್ಯೆ ಈಗ ಬಗೆಹರಿದಿದೆ. ಹೌದು, ಹೈದರಾಬಾದ್‌ನಲ್ಲಿ “ಅಯೋಗ್ಯ’ ಚಿತ್ರವನ್ನು ಬಿಡುಗಡೆ ಮಾಡಲು ನಿರ್ದೇಶಕ ಮಹೇಶ್ ಮತ್ತು ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಎಲ್ಲಾ ತಯಾರಿ ನಡೆಸಿದ್ದರು.
ಆದರೆ, ಅಲ್ಲಿನ ಮಲ್ಟಿಪ್ಲೆಕ್ಸ್‌ನಲ್ಲಿ ಮಾತ್ರ “ಅಯೋಗ್ಯ’ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಗಲಿಲ್ಲ. ಇದರಿಂದಾಗಿ ಚಿತ್ರತಂಡಕ್ಕೆ ತೀವ್ರ ಅಸಮಾಧಾನವಾಗಿದ್ದು ನಿಜ. ಚಿತ್ರತಂಡ ಮಲ್ಟಿಪ್ಲೆಕ್ಸ್‌ನ ಧೋರಣೆ ವಿರುದ್ಧ ಪ್ರತಿಭಟಿಸಿದ್ದೂ ಉಂಟು. ಆದರೆ, ಹೈದರಾಬಾದ್ ಮಲ್ಟಿಪ್ಲೆಕ್ಸ್ ಆಡಳಿತ ವರ್ಗ ಮಾತ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಚಿತ್ರಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಿ ಎಂಬ ಪತ್ರ ಕಳುಹಿಸಿದರೆ ಮಾತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುವುದಾಗಿ ಪಟ್ಟು ಹಿಡಿದಿತ್ತು.
ಅದರಂತೆ, ಚಿತ್ರತಂಡ ಸೋಮವಾರ ಫಿಲ್ಮ್ ಚೇಂಬರ್‌ಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ವಿವರಿಸಿದೆ. ಸಮಸ್ಯೆ ಅರಿತ ಮಂಡಳಿ ಪದಾಧಿಕಾರಿಗಳು, ಹೈದರಾಬಾದ್ ಮಲ್ಟಿಪ್ಲೆಕ್ಸ್‌ಗೆ ಪತ್ರ ರವಾನಿಸಿದ್ದಾರೆ. ಹೀಗಾಗ, “ಅಯೋಗ್ಯ’ ಚಿತ್ರ ಪ್ರದರ್ಶನದ ಸಮಸ್ಯೆ ಬಗೆಹರಿದಂತಾಗಿದೆ. ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಸತೀಶ್ ನೀನಾಸಂ, “ರಾಜ್ಯದಲ್ಲಿ “ಅಯೊಗ್ಯ’ ಒಳ್ಳೆಯ ಮೆಚ್ಚುಗೆ ಪಡೆದಿದೆ.
ನಮ್ಮ ಚಿತ್ರವನ್ನು ಹೊರ ರಾಜ್ಯದಲ್ಲಿರುವ ಕನ್ನಡಿಗರೂ ವೀಕ್ಷಣೆ ಮಾಡಬೇಕು ಎಂಬ ಕಾರಣಕ್ಕೆ ಹೈದರಾಬಾದ್ ಮಲ್ಟಿಪ್ಲೆಕ್ಸ್‌ನಲ್ಲಿ ಹಾಕಲು ತಯಾರಿ ನಡೆಸಿದಾಗ, ಸಮಸ್ಯೆ ಎದುರಾಗಿತ್ತು. ಫಿಲ್ಮ್ ಚೇಂಬರ್ ಮಧ್ಯಸ್ಥಿಕೆ ವಹಿಸಿ, ಆ ಸಮಸ್ಯೆ ಬಗೆಹರಿಸಿದೆ. ನಿಜಕ್ಕೂ ಇದು “ಅಯೋಗ್ಯ’ನ ಹೋರಾಟಕ್ಕೆ ಸಿಕ್ಕ ಜಯ. ಎಲ್ಲೆಡೆ ಗಳಿಕೆ ಚೆನ್ನಾಗಿ ಆಗುತ್ತಿದೆ. ಹೊರಗಡೆಯೂ ನಮ್ಮ ಚಿತ್ರದ ಬಗ್ಗೆ ಗೊತ್ತಾಬೇಕು ಅಂತ ಹೋದರೆ, ಅಲ್ಲಿ ಅವಕಾಶ ಸಿಗಲಿಲ್ಲ.
ಅದು ನಮ್ಮ ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಚೆನ್ನೈ, ಪೂನಾ, ಗೋವಾ, ಮುಂಬೈನಲ್ಲಿ ಪ್ರದರ್ಶನವಾಗುತ್ತಿದೆ. ಆದರೆ, ಹೈದರಾಬಾದ್‌ನಲ್ಲಿ ಸಮಸ್ಯೆ ಎದುರಾಗಿದ್ದು ಎಷ್ಟು ಸರಿ? ಕನ್ನಡ ಚಿತ್ರಗಳಿಗೆ ಈ ರೀತಿಯ ಧೋರಣೆ ಮಾಡಬಾರದು. ಸದ್ಯಕ್ಕೆ ಮಲ್ಟಿಪ್ಲೆಕ್ಸ್ ಸಮಸ್ಯೆ ಬಗೆಹರಿದಿದೆ. ಅಲ್ಲಿರುವ ಸಿಂಗಲ್ ಸ್ಕ್ರೀನ್‌ನಲ್ಲೂ “ಅಯೋಗ್ಯ’ ಪ್ರದರ್ಶನ ಕಾಣಬೇಕು ಎಂಬುದು ನಮ್ಮ ಮನವಿ. ಈ ನಿಟ್ಟಿನಲ್ಲೂ ಮಂಡಳಿ ಅಲ್ಲಿನ ಮಂಡಳಿ ಜೊತೆ ಮಾತನಾಡುವುದಾಗಿ ಭರವಸೆ ಕೊಟ್ಟಿದೆ.
ಬೇರೆ ಭಾಷೆ ಚಿತ್ರಗಳನ್ನು ಕನ್ನಡಿಗರು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ. ಇದು ಕನ್ನಡಿಗರು ತೋರುವ ಪ್ರೀತಿ. ಆದರೆ, ಕನ್ನಡ ಚಿತ್ರಗಳಿಗೇಕೆ ಅಲ್ಲಿ ಮನ್ನಣೆ ಸಿಗುವುದಿಲ್ಲ. ಇದು ನಮಗೆ ಸಿಕ್ಕ ಮೊದಲ ಜಯ. ಇನ್ನು ಮುಂದೆ ಎಲ್ಲರೂ ಹೋರಾಡಬೇಕು’ ಎಂಬುದು ಸತೀಶ್ ಮಾತು. ನಿರ್ದೇಶಕ ಮಹೇಶ್ ಅವರಿಗೂ ಎಲ್ಲಿಲ್ಲದ ಖುಷಿ. ಚಿತ್ರ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ.
“ಆರಂಭದಲ್ಲಿ “ಅಯೋಗ್ಯ’ ಸಾಕಷ್ಟು ಸಮಸ್ಯೆ ಎದುರಿಸಿತ್ತು. ಚಿತ್ರ ನೋಡಿದ ಗ್ರಾಮ ಪಂಚಾಯ್ತಿ ಸದಸ್ಯರೆಲ್ಲರೂ ಖುಷಿಗೊಂಡಿದ್ದಾರೆ. ಒಳ್ಳೆಯ ಚಿತ್ರವನ್ನು ಕನ್ನಡಿಗರು ಎಂದಿಗೂ ಬಿಟ್ಟಿಲ್ಲ. ನಾವೇನು ವಿನಾಕಾರಣ ಗಿಮಿಕ್ ಮಾಡುತ್ತಿಲ್ಲ. ಆದ ತೊಂದರೆ ಬಗ್ಗೆ ಗಮನಕ್ಕೆ ತಂದಿದ್ದೇವೆ. ಮಂಡಳಿ ಸ್ಪಂದಿಸಿದೆ. ಇದು ಶಾಶ್ವತ ಪರಿಹಾರವೇನಲ್ಲ. ಕನ್ನಡದ ಎಲ್ಲಾ ಚಿತ್ರಗಳಿಗೂ ಅಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವಂತಾಗಬೇಕು’ ಎಂಬುದು ಮಹೇಶ್ ಆಗ್ರಹ.