“ಸಿನಿಮಾ ಬಿಡುಗಡೆಯಾದ ನಂತರ ನಿರ್ಮಾಪಕರು ಖುಷಿಯಾಗಿರುತ್ತಾರೆ, ಆದರೆ, ನಾನು ಬಿಡುಗಡೆಗೆ ಮುನ್ನವೇ ಖುಷಿಯಾಗಿದ್ದೇನೆ’
– ಹೀಗೆ ಖುಷಿ ಖುಷಿಯಾಗಿ ಹೇಳಿಕೊಂಡರು ನಿರ್ಮಾಪಕ ಟಿ.ಆರ್.ಚಂದ್ರಶೇಖರ್. ಪಕ್ಕದಲ್ಲಿದ್ದ ನೀನಾಸಂ ಸತೀಶ್ ಮೊಗದಲ್ಲೂ ಹೆಮ್ಮೆ ಎದ್ದು ಕಾಣುತ್ತಿತ್ತು. ಚಂದ್ರಶೇಖರ್ ಖುಷಿಗೆ, ಸತೀಶ್ ಹೆಮ್ಮೆಗೆ ಕಾರಣವಾಗಿದ್ದು, “ಅಯೋಗ್ಯ’.
ಆರಂಭದಿಂದಲೂ ನಾನಾ ವಿಷಯಗಳಿಂದ ಸೌಂಡ್ ಮಾಡುತ್ತಲೇ ಬಂದ “ಅಯೋಗ್ಯ’ ಚಿತ್ರ ಇಂದು ತೆರೆಕಾಣುತ್ತಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಹಾಕಿದ ಬಂಡವಾಳದಲ್ಲಿ ಅರ್ಧ ಹಣ ವಾಪಾಸ್ ಬರುವ ಮೂಲಕ ನಿರ್ಮಾಪಕರು ಖುಷಿಯಾಗಿದ್ದಾರೆ. ಡಬ್ಬಿಂಗ್ ರೈಟ್ಸ್, ಆಡಿಯೋ ರೈಟ್ಸ್, ಏರಿಯಾ ಮಾರಾಟ … ಹೀಗೆ ನಿರ್ಮಾಪಕರ ಜೇಬಿಗೆ ಒಂದಷ್ಟು ಹಣ ಬಂದು ಬಿದ್ದಿದೆ. “ಈ ತರಹದ ಒಂದು ಸುಯೋಗ ಎಲ್ಲರಿಗೂ ಸಿಗೋದಿಲ್ಲ. ಸಿನಿಮಾ ಬಿಡುಗಡೆಯಾದ ಮೇಲೆ ಸಕ್ಸಸ್ ಮೀಟ್ ಮಾಡುತ್ತಾರೆ. ಆದರೆ, ನಾನು ಸಿನಿಮಾ ಬಿಡುಗಡೆಗೆ ಮುನ್ನವೇ ಖುಷಿಯಾಗಿದ್ದೇನೆ. ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ. ಎಲ್ಲಾ ಕಡೆಗಳಿಂದಲೂ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೊಡ್ಡ ಹಿಟ್ ಆಗುವ ಸೂಚನೆ ಸಿಗುತ್ತಿದೆ. 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ’ ಎಂದು ಹೇಳಿಕೊಂಡರು. ಅಗಸ್ಟ್ 17ಕ್ಕೆ ರಾಜ್ಯದಲ್ಲಿ ಚಿತ್ರ ತೆರೆಕಂಡರೆ ಆಗಸ್ಟ್ 24 ರಂದು ಚಿತ್ರ ಹೊರರಾಜ್ಯ ಹಾಗೂ ವಿದೇಶಗಳಲ್ಲಿ ತೆರೆಕಾಣಲಿದೆ.
ನೀನಾಸಂ ಸತೀಶ್ ಕೂಡಾ ಚಿತ್ರಕ್ಕೆ ಬಿಡುಗಡೆಗೆ ಮುನ್ನವೇ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದಾರೆ. ಸತೀಶ್‌ಗೆ “ಅಯೋಗ್ಯ’ ಎಂಬ ಟೈಟಲ್ ಕೇಳಿಯೇ ಇಷ್ಟವಾಯಿತಂತೆ. ಇನ್ನು, ಅಷ್ಟೊಂದು ಆಸಕ್ತಿ ಇಲ್ಲದೆ ಕಥೆ ಕೇಳಲು ಕುಳಿತ ಸತೀಶ್‌ಗೆ, ನಿರ್ದೇಶಕ ಮಹೇಶ್ ಕಥೆ ಹೇಳುತ್ತಿದ್ದಂತೆ ಖುಷಿಯಾಗಿ, ಈ ಸಿನಿಮಾವನ್ನು ಮಾಡಲೇಬೇಕೆಂದು ನಿರ್ಧರಿಸಿದರಂತೆ. “ಅಯೋಗ್ಯ’ ಆರಂಭವಾಗಿ ಆ ನಂತರ ಎದುರಿಸಿದ ಕಷ್ಟಗಳು, ನಿರ್ದೇಶಕ ಮಹೇಶ್ ಬೇಸರಗೊಂಡ ರೀತಿ, ಆ ನಂತರ ನಿರ್ಮಾಪಕ ಚಂದ್ರಶೇಖರ್ ಕೈ ಹಿಡಿದ ಪರಿ … ಹೀಗೆ ಎಲ್ಲವನ್ನು ಸತೀಶ್ ವಿವರಿಸುತ್ತಾ ಹೋದರು. ಈ ಚಿತ್ರದ ಮೂಲಕ ಸತೀಶ್‌ಗೆ ದೊಡ್ಡ ಬ್ರೇಕ್ ಸಿಗುವ ನಿರೀಕ್ಷೆ ಇದೆ.
ಚಿತ್ರದಲ್ಲಿ ರಚಿತಾ ರಾಮ್ ನಾಯಕಿ. ನಿರ್ದೇಶಕ ಮಹೇಶ್ ತಮ್ಮಿಂದ ಕೆಲಸ ತೆಗೆಸುತ್ತಿದ್ದ ರೀತಿ, ಮೊದಲ ಬಾರಿಗೆ ಮಂಡ್ಯ ಭಾಷೆಯಲ್ಲಿ ಡಬ್ಬಿಂಗ್ ಮಾಡಿದ ಖುಷಿ, ವಿಭಿನ್ನ ಪಾತ್ರ … ಹೀಗೆ ಎಲ್ಲದರ ಬಗ್ಗೆ ರಚಿತಾ ಸಿಕ್ಕಾಪಟ್ಟೆ ಜೋಶ್‌ನಿಂದ ಮಾತನಾಡಿದರು. ಒಂದು ಹಂತದಲ್ಲಿ ಅವರಿಗೆ ತಾನು ಸಿಕ್ಕಾಪಟ್ಟೆ ಲೈವಿÉಯಾಗಿ ಮಾತನಾಡುತ್ತಿದ್ದೇನೆ ಎಂದನಿಸಿತಂತೆ. ಚಿತ್ರದಲ್ಲಿ ನಟಿಸಿದ ತಬಲಾ ನಾಣಿ ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ನಿರ್ದೇಶಕ ಮಹೇಶ್ ಕುಮಾರ್‌ಗೆ ಇದು ಚೊಚ್ಚಲ ಚಿತ್ರ. ಸಿನಿಮಾ ಆರಂಭಿಸಿದ ಖುಷಿ, ಆ ನಂತರ ಎದುರಾದ ಸಂಕಷ್ಟ, ಧೈರ್ಯ ಕೊಟ್ಟ ಸತೀಶ್, ಬೆನ್ನು ತಟ್ಟಿ ಸಿನಿಮಾ ಮಾಡಿದ ನಿರ್ಮಾಪಕರು … ಎಲ್ಲರನ್ನು ನೆನಪಿಸಿಕೊಂಡು ಭಾವುಕರಾದರು ಮಹೇಶ್.
ಚಿತ್ರದ ನಾಲ್ಕು ಹಾಡುಗಳನ್ನು ಚೇತನ್ ಕುಮಾರ್ ಬರೆದಿದ್ದು, ಎಲ್ಲವೂ ಹಿಟ್ ಆದ ಖುಷಿ ಚೇತನ್ ಅವರದು. ಛಾಯಾಗ್ರಾಹಕ ಪ್ರೀತಮ್ ತೆಗ್ಗಿನಮನೆ ಕೂಡಾ ತಮ್ಮ ಅನುಭವ ಹಂಚಿಕೊಂಡರು.