ಉಡುಪಿ: ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ನಿತ್ಯದ ಪೂಜಾ ಕಾರ್ಯಕ್ಕೆ ಅನುಕೂಲವಾಗುವಂತೆ ರಜತ ಪರಿಕರಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮುಖೇನ ಅಯೋಧ್ಯೆ ಶ್ರೀ ರಾಮಜನ್ಮಭೂಮಿ ಟ್ರಸ್ಟ್‌ಗೆ ಸೋಮವಾರ ಬೆಳಗ್ಗೆ ಪೇಜಾವರ ಮಠದಲ್ಲಿ ಡಿ. ಹರ್ಷೇಂದ್ರ ಕುಮಾರ್ ಅವರು ಹಸ್ತಾಂತರಿಸಿದರು.
ಪೇಜಾವರ ಶ್ರೀಪಾದರು ಮಾತನಾಡಿ, ರಾಮ ದೇವರು ಮತ್ತು ರುದ್ರದೇವರಲ್ಲಿ ಇರುವ ಅನ್ಯೋನ್ಯ ಭಾವನ್ನು ಶಾಸ್ತ್ರದಲ್ಲಿ ಗಮನಿಸಬಹುದಾಗಿದೆ. ಅಯೋಧ್ಯೆಯ ಶ್ರೀರಾಮ ದೇವರ ಸನ್ನಿಧಿಯಲ್ಲಿ ನಿತ್ಯ ಪೂಜೆಗೆ ಅನುಕೂಲವಾಗುವಂತೆ ಧರ್ಮಸ್ಥಳದಿಂದ ಸೇವೆಯ ರೂಪದಲ್ಲಿ ಪೂಜಾ ಪರಿಕರಗಳು ಬಂದಿವೆ. ಅದನ್ನು ಅಯೋಧ್ಯೆಗೆ ಮುಟ್ಟಿಸಲಿದ್ದೇವೆ ಎಂದು ಹಾರೈಸಿದರು.
ಡಿ. ಹರ್ಷೇಂದ್ರ ಕುಮಾರ್ ಅವರು ಮಾತನಾಡಿ, ಧರ್ಮಸ್ಥಳದ ಧರ್ಮದರ್ಶಿಗಳಾದ ಡಾ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿರುವಂತೆ ಶ್ರೀ ಕ್ಷೇತ್ರದ ವತಿಯಿಂದ ಅಯೋಧ್ಯೆೆ ಶ್ರೀ ರಾಮ ಮಂದಿರದಲ್ಲಿ ನಿತ್ಯ ಪೂಜೆಗೆ ಅವಶ್ಯವಿರುವ ಬೆಳ್ಳಿಯ ಪೂಜಾ ಪರಿಕರಗಳನ್ನು ಅಯೋಧ್ಯೆ ಶ್ರೀ ರಾಮಜನ್ಮಭೂಮಿ ಟ್ರಸ್ಟ್‌ನ ಸದಸ್ಯರೂ ಆಗಿರುವ ಪೇಜಾವರ ಶ್ರೀಪಾದರ ಮೂಖೇನ ಟ್ರಸ್ಟ್‌ಗೆ ಒಪ್ಪಿಸಿದ್ದೇವೆ. ಶ್ರೀರಾಮನ ಸನ್ನಿಧಿಯಲ್ಲಿ ನಡೆಯುವ ನಿತ್ಯ ಪೂಜೆಗೆ ಈ ಎಲ್ಲ ಪರಿಕರಗಳನ್ನು ಬಳಸಿಕೊಳ್ಳುವಂತೆ ಕೋರಿಕೊಂಡಿದ್ದೇವೆ ಎಂದು ಹೇಳಿದರು.
ವಿವಿಧ ಬಗೆಯ ಆರತಿ, ದೀಪ, ಶಂಖ, ತಂಬಿಗೆ, ಘಂಟೆ, ಹರಿವಾಣ, ದೇವರಿಗೆ ನೀರೆಯಲು ಅನುಕೂಲವಾಗುವ ಕೊಡಪಾನ ಹೀಗೆ ಹಲವು ಬೆಳ್ಳಿ ಪರಿಕರಗಳನ್ನು ಶ್ರೀ ಕ್ಷೇತ್ರದಿಂದ ಒಪ್ಪಿಸಲಾಗಿದೆ.
ಕ್ಷೇತ್ರದ ಅರ್ಚಕರಾದ ರಾಮಕೃಷ್ಣ ಕಲ್ಲೂರಾಯ, ಮಣೆಗಾರರಾದ ವಸಂತ ಕುಂಜಿತ್ತಾಯ, ಪರೀಕ ಸೌಖ್ಯವನದ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಪ್ರಮುಖರಾದ ಕೆ.ಗಣೇಶ್ ರಾವ್, ಪ್ರದೀಪ್ ಕುಮಾರ್ ಕಲ್ಕೂರ, ಸುಬ್ರಹ್ಮಣ್ಯ ಭಟ್, ವಾಸುದೇವ ಭಟ್ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.