ಅಯೋಧ್ಯೆ: ”ಭಾಗಶಃ ನಿರ್ಮಿಸಿದ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ” ಎಂದು ಉತ್ತರಾಖಂಡದ ಜ್ಯೋತಿರ್ ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಭಾನುವಾರ(ಸೆ22) ಪ್ರತಿಪಾದಿಸಿದ್ದಾರೆ.
ಅಯೋಧ್ಯೆಯಲ್ಲಿದ್ದರೂ ರಾಮ ಮಂದಿರಕ್ಕೆ ಏಕೆ ತೆರಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ ”ಭಾಗಶಃ ನಿರ್ಮಿಸಲಾದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ. ಇದು ಅಪೂರ್ಣವಾಗಿದೆ. ರಾಮ ಮಂದಿರದ ಶಿಖರ(ಮೇಲ್ಭಾಗ) ಸಂಪೂರ್ಣವಾಗಿ ನಿರ್ಮಾಣವಾದ ಬಳಿಕ ಮಾತ್ರ ತಾನು ತೆರಳಿ ಪೂಜೆ ಸಲ್ಲಿಸುತ್ತೇನೆ” ಎಂದರು.
ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಭಾನುವಾರ(ಸೆ22) ಅಯೋಧ್ಯೆಯಿಂದ ರಾಷ್ಟ್ರವ್ಯಾಪಿ “ಗೋ ಧ್ವಜ ಸ್ಥಾಪನಾ ಭಾರತ ಯಾತ್ರೆ”ಯನ್ನು ಪ್ರಾರಂಭಿಸಿದ್ದಾರೆ. ಗೋವುಗಳರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸಂವಿಧಾನಾತ್ಮಕ ನಿಬಂಧನೆಗಳನ್ನು ಮತ್ತು ಕಾನೂನುಗಳನ್ನು ಜಾರಿಗೊಳಿಸಲು ಸಮಾವೇಶದಲ್ಲಿ ಕರೆ ನೀಡಿದರು.
“ನಮ್ಮ ದೇಶದಲ್ಲಿ ಗೋವನ್ನು ಗೋ ಮಾತೆ ಎಂದು ಪೂಜಿಸಲಾಗುತ್ತದೆ. ಆದಾಗ್ಯೂ, ಗೋವನ್ನು ಪೂಜಿಸುವ ದೇಶವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಗೋಮಾಂಸ ರಫ್ತುದಾರನಾಗಿರುವುದು ದುರದೃಷ್ಟಕರ. ನಮ್ಮ ಯಾತ್ರೆಯು ದೇಶದ ವಿವಿಧ ಪ್ರದೇಶಗಳಲ್ಲಿ ಸಂಚರಿಸಲಿದ್ದು, ಪ್ರಮುಖ ಮಹಂತರು ಮತ್ತು ಜನಸಾಮಾನ್ಯರು ನಮ್ಮೊಂದಿಗೆ ಸೇರುತ್ತಾರೆ ಎಂದು ಗೋಹತ್ಯೆ ನಿಷೇಧಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.
ಇದೆ ವೇಳೆ ಚಿನೇಶ್ವರನಾಥ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸೇವೆಯನ್ನು ನಡೆಸಿದರು ಮತ್ತು ಅಯೋಧ್ಯೆಯ ರಾಮಕೋಟ್ ಪ್ರದೇಶದ ಉದ್ದಕ್ಕೂ ರಾಮ ಜನ್ಮಭೂಮಿ ಸಂಕೀರ್ಣದ ಪ್ರದಕ್ಷಿಣೆಯನ್ನು ಮಾಡಿದರು.