Advertisement
ಅಯೋಧ್ಯೆ: ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಅಯೋ ಧ್ಯೆಯ ರಾಮಮಂದಿರ ಸಂಪೂರ್ಣ ಸಜ್ಜಾಗಿದ್ದು, ಈ ಅಭೂತ ಪೂರ್ವ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಾರತೀ ಯರು ತುದಿಗಾಲಲ್ಲಿ ನಿಂತಿದ್ದಾರೆ.ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದ ಧಾರ್ಮಿಕ ಕಾರ್ಯಗಳು ಜ.16ರಿಂದಲೇ ಆರಂಭವಾಗಿದ್ದು, ಭಾನುವಾರ ಎಲ್ಲ ಕಾರ್ಯ ಗಳೂ ಸಂಪನ್ನಗೊಂಡಿವೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ಕಾರ್ಯ ನೆರವೇರಲಿದೆ. ಮಧ್ಯಾಹ್ನ ಸರಿಯಾಗಿ 12.20ಕ್ಕೆ ಪ್ರಾಣ ಪ್ರತಿಷ್ಠೆ ವಿಧಿ ವಿಧಾನ ಆರಂಭವಾಗಲಿದ್ದು, 1 ಗಂಟೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ತದನಂತರ ಪ್ರಧಾನಿ ಮೋದಿಯವರು ಅಲ್ಲಿ ನೆರೆಯಲಿರುವ ಸಂತರು, ಖ್ಯಾತ ನಾಮರು ಸೇರಿದಂತೆ ಸುಮಾರು 7 ಸಾವಿರಕ್ಕೂ ಅಧಿಕ ಮಂದಿ ಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೋಟ್ಯಂತರ ಮಂದಿ ಟಿವಿಗಳು ಹಾಗೂ ಆನ್‌ಲೈನ್ ವೇದಿಕೆಗಳ ನೇರಪ್ರಸಾರ ದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ.
Related Articles
Advertisement
ಆರೋಗ್ಯ ತುರ್ತು ಪರಿಸ್ಥಿತಿ
ಪ್ರಸ್ತುತ ಉತ್ತರ ಪ್ರದೇಶದಲ್ಲಿ ವಿಪರೀತ ಚಳಿಯಿದೆ. ಅಲ್ಲಿಗೆ ಬರುವ ಗಣ್ಯರು, ಭಕ್ತಾದಿಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ತಕ್ಷಣವೇ ಸ್ಪಂದಿಸುವಂತೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಗರದ ಸ್ಥಳೀಯ ಆಸ್ಪತ್ರೆಗಳು, ಜಿಲ್ಲಾ ಆಸ್ಪತೆಗಳು ಹಾಗೂ ವೈದ್ಯಕೀಯ ಕಾಲೇಜು ಗಳಲ್ಲಿ ತುರ್ತು ಸ್ಥಿತಿಗೆಂದೇ ಹಾಸಿಗೆಗಳನ್ನು ಮೀಸಲಿಡಲಾಗಿದೆ.
ಬಳೆಗಳಿಂದ ಹಿಡಿದು ಸಿಹಿತಿನಿಸಿನವರೆಗೆ
ಶ್ರೀರಾಮ ಚಿತ್ರವುಳ್ಳ ಬಳೆಗಳಿಂದ ಹಿಡಿದು 56 ಬಗೆಯ ಪೇಠಾ, 500 ಕೆ.ಜಿ. ತೂಕದ ನಗಾರಿ, “ಒನವಿಲ್ಲು’ ಬಿಲ್ಲು, ಅಕ್ಕಿ, ಲಡ್ಡು, ತರಕಾರಿಗಳು, ವಿಶೇಷ ಸುಗಂಧದ್ರವ್ಯಗಳು, 500 ಕೆ.ಜಿ. ಕುಂಕುಮ, ಹೂವುಗಳವರೆಗೆ ದೇಶದ ಮೂಲೆ ಮೂಲೆಗಳಿಂದ ಬಗೆ ಬಗೆಯ ಉಡುಗೊರೆಗಳು ರಾಮಜನ್ಮಭೂಮಿಯನ್ನು ತಲುಪಿವೆ. ಇದಲ್ಲದೇ, 108 ಅಡಿ ಉದ್ದದ ಅಗರಬತ್ತಿ, 2100 ಕೆಜಿ ತೂಕದ ಗಂಟೆ, 1,100 ಕೆ.ಜಿ. ತೂಕದ ಬೃಹತ್ ದೀಪ, ಚಿನ್ನದ ಪಾದುಕೆ, 10 ಅಡಿ ಎತ್ತರದ ಬೀಗ ಮತ್ತು ಕೀಲಿಕೈ, ಗಡಿಯಾರಗಳನ್ನೂ ರಾಮ ದೇಗುಲ ನಿರ್ವಹಣಾ ಸಮಿತಿ ಸ್ವೀಕರಿಸಿದೆ. ಸೀತೆಯ ತವರಾದ ನೇಪಾಳದ ಜನಕಪುರದಿಂದ 3 ಸಾವಿರಕ್ಕೂ ಹೆಚ್ಚು ಉಡುಗೊರೆಗಳು ಬಂದಿವೆ. ಶ್ರೀಲಂಕಾದ ನಿಯೋಗವು ಅಶೋಕ ವಾಟಿಕಾದಿಂದ ವಿಶೇಷ ಉಡುಗೊರೆಯೊಂದನ್ನು ಹೊತ್ತು ತಂದಿದೆ.
ಮಂದಿರ ಉದ್ಘಾಟನೆಗೆ 7 ಸಾವಿರಕ್ಕೂ ಅಧಿಕ ಆಹ್ವಾನಿತರುಮಂದಿರ ಲೋಕಾರ್ಪಣೆಯ ಆಹ್ವಾನಿತರ ದೊಡ್ಡ ಪಟ್ಟಿಯಲ್ಲಿ 7 ಸಾವಿರಕ್ಕೂ ಅಧಿಕ ಗಣ್ಯರಿದ್ದಾರೆ. ಈ ಪೈಕಿ ಗಣ್ಯಾತಿಗಣ್ಯ 506 ಮಂದಿಯನ್ನು “ಎ’ ಗುಂಪಿಗೆ ಸೇರಿಸಲಾಗಿದೆ. ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಹೋರಾಡಿದವರ ಕುಟುಂಬಗಳಿಗೂ ಆಹ್ವಾನ ನೀಡಲಾಗಿದೆ. ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್, ಉದ್ಯಮಿಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಕ್ರೀಡಾ ದಿಗ್ಗಜ ಸಚಿನ್ ತೆಂಡುಲ್ಕರ್‌ರಂಥ ಗಣ್ಯರು ಮಂದಿರ ಲೋಕಾರ್ಪಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲದೇ, ಪಟ್ಟಿಯಲ್ಲೇ ಇಲ್ಲದ ಅನೇಕ ರಾಮಭಕ್ತರು ಕಾಲ್ನಡಿಗೆ ಮೂಲಕ, ಸೈಕಲ್ ತುಳಿಯುತ್ತಾ, ಸ್ಕೇಟಿಂಗ್ ಮಾಡುತ್ತಾ ಅಯೋಧ್ಯೆಯನ್ನು ತಲುಪಿದ್ದಾರೆ.